ADVERTISEMENT

ಹೆಚ್ಚುತ್ತಲೇ ಸಾಗಿದೆ ವಿದ್ಯುತ್‌ ಕಳವು: 7 ತಿಂಗಳಲ್ಲಿ ಐದು ಸಾವಿರ ಪ್ರಕರಣ ಪತ್ತೆ

ಬಸೀರ ಅಹ್ಮದ್ ನಗಾರಿ
Published 25 ನವೆಂಬರ್ 2025, 6:54 IST
Last Updated 25 ನವೆಂಬರ್ 2025, 6:54 IST
ಧ್ರುವತಾರಾ ಸಿ.ತಿಗಡಿ
ಧ್ರುವತಾರಾ ಸಿ.ತಿಗಡಿ   

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ವಿದ್ಯುತ್‌ ಕಳವು ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿವೆ. 2025ರ ಏಪ್ರಿಲ್‌ನಿಂದ ಅಕ್ಟೋಬರ್‌ ಅವಧಿಯ ಏಳು ತಿಂಗಳಲ್ಲಿ ಬರೋಬ್ಬರಿ 181.61 ಲಕ್ಷ ಯೂನಿಟ್‌ ವಿದ್ಯುತ್‌ ಕಳವು ಪತ್ತೆಯಾಗಿದೆ.

ರಾಜ್ಯ ಸರ್ಕಾರದಿಂದ ‘ಗೃಹ ಜ್ಯೋತಿ’, ಕೃಷಿಗೆ 10 ಎಚ್‌ಪಿವರೆಗೆ ಉಚಿತ ವಿದ್ಯುತ್ ಪೂರೈಕೆ ಹೊರತಾಗಿಯೂ ವಿದ್ಯುತ್‌ ಕಳವು ಅವ್ಯಾಹತವಾಗಿದೆ. ಜೆಸ್ಕಾಂ ವ್ಯಾಪ್ತಿಯ ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಮೌಲ್ಯದ ಲಕ್ಷಾಂತರ ಯೂನಿಟ್ ವಿದ್ಯುತ್ ದುರ್ಬಳಕೆ ಆಗುತ್ತಿದೆ.

ಇಂಥ ಪ್ರಕರಣಗಳ ಕಡಿವಾಣಕ್ಕೆ ಶ್ರಮಿಸುತ್ತಿರುವ ಜೆಸ್ಕಾಂ ಜಾಗೃತ ದಳವು ಹದ್ದಿನ ಕಣ್ಣಿಟ್ಟು ಕಾರ್ಯಾಚರಣೆ ನಡೆಸುತ್ತಿದೆ. ಕೃಷಿ, ಮನೆಬಳಕೆ, ಕೈಗಾರಿಕೆ, ವಾಣಿಜ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ನಡೆಯುವ ವಿದ್ಯುತ್‌  ದುರ್ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಜೆಸ್ಕಾಂ ಜಾಗೃತ ದಳವು ದಾಳಿ ನಡೆಸಿ ಪ್ರಕರಣ ದಾಖಲಿಸುವುದು, ದಂಡ ವಿಧಿಸುವ ಕೆಲಸ ನಿರಂತರವಾಗಿ ಸಾಗಿದೆ. ಆದರೂ, ವಿದ್ಯುತ್‌ ಕಳವು ಸಂಪೂರ್ಣ ನಿಂತಿಲ್ಲ.

ADVERTISEMENT

ಕಳೆದ ಏಳು ತಿಂಗಳಲ್ಲಿ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ 28,149 ಸ್ಥಾವರಗಳನ್ನು ಪರಿಶೀಲಿಸಿದ ಜೆಸ್ಕಾಂ ಜಾಗೃತ ದಳವು, 181.61 ಲಕ್ಷ ಯೂನಿಟ್‌ ವಿದ್ಯುತ್‌ ಕಳವು ಪತ್ತೆ ಮಾಡಿದೆ. ಈ ಸಂಬಂಧ ಐದು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿಕೊಂಡು, ಒಟ್ಟು ₹11.42 ಕೋಟಿ ದಂಡ ವಿಧಿಸಿದೆ. ಹಳೆಯ ಪ್ರಕರಣಗಳ ದಂಡವನ್ನೂ ಸೇರಿದಂತೆ ಒಟ್ಟು ₹19.34 ಕೋಟಿಗಳಷ್ಟು ದಂಡ ವಸೂಲಿ ಮಾಡಿದೆ.‌

ಯಾದಗಿರಿ ಜಿಲ್ಲೆ ‘ಅಗ್ರ’:

ಕಲ್ಯಾಣ ಭಾಗದ ಜಿಲ್ಲೆಗಳ ಪೈಕಿ ಯಾದಗಿರಿ ಜಿಲ್ಲೆಯಲ್ಲಿ ಅತಿಹೆಚ್ಚು ವಿದ್ಯುತ್‌ ಕಳವು ವರದಿಯಾಗಿದೆ. ಏಳು ತಿಂಗಳಲ್ಲಿ ಯಾದಗಿರಿ ಜಿಲ್ಲೆಯಲ್ಲಿ ವಿವಿಧ ವಲಯದಲ್ಲಿ 92.61 ಲಕ್ಷ ಯೂನಿಟ್‌ ವಿದ್ಯುತ್ ಕಳುವಾಗಿದ್ದು, ₹1.28 ಕೋಟಿ ದಂಡ ವಿಧಿಸಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ 21.87 ಲಕ್ಷ ಯೂನಿಟ್‌ ವಿದ್ಯುತ್ ಕದಿಯಲಾಗಿದ್ದು, ₹1.97 ಕೋಟಿ ದಂಡ ಹಾಕಲಾಗಿದೆ. ರಾಯಚೂರು ಜಿಲ್ಲೆಯಲ್ಲಿ 21.76 ಲಕ್ಷ ಯೂನಿಟ್‌ ವಿದ್ಯುತ್‌ ಕಳುವಾಗಿದ್ದು, ₹2.98 ಕೋಟಿ ದಂಡ ವಿಧಿಸಲಾಗಿದೆ.

ಬೀದರ್‌ ಜಿಲ್ಲೆಯಲ್ಲಿ 17.40 ಲಕ್ಷ ಯೂನಿಟ್‌ ವಿದ್ಯುತ್ ಕದಿಯಲಾಗಿದ್ದು, ₹1.27 ಕೋಟಿ ದಂಡ ಹಾಕಲಾಗಿದೆ. ಕೊಪ್ಪಳದಲ್ಲಿ 9.46 ಲಕ್ಷ ಯೂನಿಟ್‌ ವಿದ್ಯುತ್‌ಗೆ ಕನ್ನ ಹಾಕಲಾಗಿದ್ದು, ₹1.58 ಕೋಟಿ ದಂಡ ವಿಧಿಸಲಾಗಿದೆ. ಬಳ್ಳಾರಿ–ವಿಜಯನಗರ ಜಿಲ್ಲೆ ಸೇರಿದಂತೆ 18.51 ಲಕ್ಷ ಯೂನಿಟ್‌ ವಿದ್ಯುತ್‌ ಕಳುವಾಗಿದ್ದು, ₹2.32 ಕೋಟಿ ದಂಡ ಹಾಕಲಾಗಿದೆ.

ನಾಗರಿಕರು ‘ಅಸಡ್ಡೆ’ ಬಿಟ್ಟು ಜವಾಬ್ದಾರಿಯಿಂದ ವಿದ್ಯುತ್‌ ಬಳಕೆ ಮಾಡಬೇಕು. ಇಲ್ಲದಿದ್ದರೆ ದಂಡದೊಂದಿಗೆ ಶಿಕ್ಷೆಯನ್ನೂ ಎದುರಿಸಬೇಕಾಗಬಹುದು
ಧ್ರುವತಾರಾ ಸಿ.ತಿಗಡಿ ಜೆಸ್ಕಾಂ ಜಾಗೃತದಳ ಪ್ರಭಾರ ಎಸ್ಪಿ

ಎರಡು ಬಗೆಯಲ್ಲಿ ‘ವಿದ್ಯುತ್‌ ಕಳವು’

ವಿದ್ಯುತ್ ‘ಕಳವು’ವಿನಲ್ಲಿ ಎರಡು ಬಗೆ. ಜೆಸ್ಕಾಂನಿಂದ ಅಧಿಕೃತ ವಿದ್ಯುತ್ ಸಂಪರ್ಕ ಪಡೆಯದೇ ನೇರವಾಗಿ ವಿದ್ಯುತ್‌ ಪೂರೈಸುವ ತಂತಿಗೆ ಕೊಕ್ಕೆ ಹಾಕುವುದು ಮೀಟರ್ ತಪ್ಪಿಸಿ (ಬೈ ಪಾಸ್) ನೇರವಾಗಿ ವಿದ್ಯುತ್‌ ಸಂಪರ್ಕ ಪಡೆಯುವುದು ಒಂದು ಬಗೆ. ಇಂಥವನ್ನು ಅಪರಾಧ ಪ್ರಕರಣ ಎಂದು ಗುರುತಿಸಲಾಗುತ್ತದೆ. ಇದಕ್ಕೆ ದಂಡದ ಜೊತೆಗೆ ಜೈಲು ಶಿಕ್ಷೆ ಹಾಗೂ ಕೊನೆಯ ಅಸ್ತ್ರವಾಗಿ ವಿದ್ಯುತ್ ಸಂಪರ್ಕವನ್ನೇ ಕಡಿತಗೊಳಿಸಲು ಅವಕಾಶವಿರುತ್ತದೆ. ಜೆಸ್ಕಾಂನಿಂದ ಅಧಿಕೃತ ಸಂಪರ್ಕ ಪಡೆದು ಮೀಟರ್‌ ಅಳವಡಿಸಿಕೊಂಡಿದ್ದರೂ ಅನುಮತಿ ಪಡೆದ ಮಿತಿಗಿಂತ ಹೆಚ್ಚು ವಿದ್ಯುತ್ ಬಳಸುವುದು ಪರವಾನಗಿ ಪಡೆದ ಪ್ರದೇಶವನ್ನು ದಾಟಿ ಬೇರೆಡೆಗೆ ವಿದ್ಯುತ್‌ ಬಳಕೆ ಉದ್ದೇಶಿತ ಕಾರ್ಯ ಬಿಟ್ಟು ಅನ್ಯ ಉದ್ದೇಶಕ್ಕೆ ವಿದ್ಯುತ್‌ ಬಳಕೆ ಮಾಡುವುದು ಇನ್ನೊಂದು ಬಗೆ. ಇದನ್ನು ‘ಅಪರಾಧವಲ್ಲದ ಪ್ರಕರಣ’ ಪರಿಗಣಿಸಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗುತ್ತದೆ.

ಎಸ್ಪಿ ಡಿವೈಎಸ್ಪಿ ಹುದ್ದೆ ಖಾಲಿ

ಏಳು ಜಿಲ್ಲೆಗಳ ಕಾರ್ಯವ್ಯಾಪ್ತಿ ಹೊಂದಿರುವ ಜೆಸ್ಕಾಂ ಜಾಗೃತ ದಳದಲ್ಲಿ ಕಳೆದ ಹಲವು ತಿಂಗಳಿನಿಂದ ಎಸ್ಪಿ ಡಿವೈಎಸ್ಪಿ ಹುದ್ದೆಗಳು ಖಾಲಿ ಇವೆ.  ‘ಎಸ್ಪಿ ಡಿವೈಎಸ್ಪಿ ಹುದ್ದೆಗಳು ಖಾಲಿ ಇದ್ದರೂ ಜೆಸ್ಕಾಂ ಜಾಗೃತ ದಳವು ಚುರುಕಿನ ಕಾರ್ಯಾಚರಣೆ ನಡೆಸುತ್ತಿದೆ. ಎಲ್ಲ ಏಳು ಜಿಲ್ಲೆಗಳಲ್ಲಿ ಜಾಗೃತ ದಳದ ಠಾಣೆಗಳಿದ್ದು ಇನ್‌ಸ್ಪೆಕ್ಟರ್‌ ಪಿಎಸ್‌ಐ ಎಇಇ ಎಇ ಇರುತ್ತಾರೆ. ಜೊತೆಗೆ ಮೂವರು ಹೆಡ್‌ಕಾನ್‌ಸ್ಟೆಬಲ್‌ಗಳು ಹಾಗೂ ಆರು ಮಂದಿ ಕಾನ್‌ಸ್ಟೆಬಲ್‌ಗಳು ನಿಯಮಿತವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಸಲ ಹೆಚ್ಚಿನ ‍ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಿದೆ. ಎಸ್ಪಿ ಡಿವೈಎಸ್ಪಿ ಹುದ್ದೆಗಳು ಭರ್ತಿಯಾದರೆ ಜಾಗೃತ ದಳಕ್ಕೆ ಇನ್ನಷ್ಟು ಬಲ ಬರಲಿದೆ’ ಎಂಬುದು ಅಧಿಕಾರಿಗಳ ಅಂಬೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.