ADVERTISEMENT

ಭರ್ತಿಯಾಗದ ಶೇ 90ರಷ್ಟು ಜಲಾಶಯಗಳು

ಕಲಬುರ್ಗಿ, ಬೀದರ್‌, ಯಾದಗಿರಿ ಜಿಲ್ಲೆಗಳಲ್ಲಿ ಬರದ ಸ್ಥಿತಿ

ಮನೋಜ ಕುಮಾರ್ ಗುದ್ದಿ
Published 14 ಆಗಸ್ಟ್ 2019, 20:15 IST
Last Updated 14 ಆಗಸ್ಟ್ 2019, 20:15 IST
ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಬೆಣ್ಣೆತೊರಾ ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆ ಇರುವುದು ಪ್ರಜಾವಾಣಿ ಚಿತ್ರ/ತೀರ್ಥಕುಮಾರ ಬೆಳಕೋಟಾ
ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಬೆಣ್ಣೆತೊರಾ ಜಲಾಶಯದಲ್ಲಿ ನೀರು ಸಂಗ್ರಹ ಕಡಿಮೆ ಇರುವುದು ಪ್ರಜಾವಾಣಿ ಚಿತ್ರ/ತೀರ್ಥಕುಮಾರ ಬೆಳಕೋಟಾ   

ಕಲಬುರ್ಗಿ: ಒಂದೆಡೆ ಭೀಮಾ ಮತ್ತು ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿದ್ದರೂಕಲಬುರ್ಗಿ, ಬೀದರ್‌ ಮತ್ತು ಯಾದಗಿರಿಜಿಲ್ಲೆಗಳಲ್ಲಿಯ 11ರ ಪೈಕಿ 10 ಜಲಾಶಯಗಳಲ್ಲಿ ನೀರಿನ ಮಟ್ಟ ಶೇ 25ರಷ್ಟೂ ಇಲ್ಲ!

ಮಹಾರಾಷ್ಟ್ರದ ಉಜನಿ ಹಾಗೂ ವೀರ್‌ ಜಲಾಶಯಗಳಿಂದ ಭೀಮಾ ನದಿಗೆ ನೀರು ಬಿಟ್ಟಿದ್ದರಿಂದ ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜ್‌ನಲ್ಲಿ 2.58 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಪ್ರಮುಖ ಜಲಾಶಯಗಳಾದ ಬೆಣ್ಣೆತೊರಾ, ಅಮರ್ಜಾ, ಚಂದ್ರಂಪಳ್ಳಿ, ಕಾರಂಜಾ, ಕೆಳದಂಡೆ ಮುಲ್ಲಾಮಾರಿ, ಮೇಲ್ದಂಡೆ ಮುಲ್ಲಾಮಾರಿ, ಗಂಡೋರಿ ನಾಲಾ, ಚುಳಕಿ ನಾಲಾ, ಹತ್ತಿಕುಣಿ, ಸೌದಾಗರ್‌ ಜಲಾಶಯಗಳ ಅಚ್ಚುಕಟ್ಟು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ.

ಚಿಂಚೋಳಿ ತಾಲ್ಲೂಕಿನಲ್ಲಿ ಎರಡು ವಾರಗಳ ಹಿಂದೆ ನಿರಂತರವಾಗಿ ಸುರಿದ ಮಳೆ ಒಂದಷ್ಟು ಭರವಸೆ ಮೂಡಿಸಿತ್ತು. ಆದರೆ, ಬಳಿಕ ಮಳೆ ನಿಂತಿದ್ದರಿಂದ ಚಂದ್ರಂಪಳ್ಳಿ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದಿಲ್ಲ. ಕಲಬುರ್ಗಿ ನಗರದ ಕೆಲ ಪ್ರದೇಶಕ್ಕೆ ಕುಡಿಯುವ ನೀರು ಪೂರೈಸುವ ಬೆಣ್ಣೆತೊರಾ ಜಲಾಶಯದ ಒಟ್ಟು ಸಂಗ್ರಹ ಸಾಮರ್ಥ್ಯ 5.3 ಟಿಎಂಸಿ ಅಡಿ. ಅಚ್ಚುಕಟ್ಟು ಪ್ರದೇಶದಲ್ಲಿ ನಿರೀಕ್ಷಿತ ಮಳೆ ಆಗದ ಕಾರಣ ಕೇವಲ 1.63 ಟಿಎಂಸಿ ಅಡಿ ಮಾತ್ರ ನೀರಿದೆ.

ADVERTISEMENT

ಬೀದರ್‌ ಜಿಲ್ಲೆಯ ಕಾರಂಜಾ ಜಲಾಶಯದ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಕಾರಂಜಾ ಸಾಮರ್ಥ್ಯ 7.69 ಟಿಎಂಸಿ ಅಡಿ. ಆದರೆ, ಜಿಲ್ಲೆಯಲ್ಲಿ ಈ ಬಾರಿ ಕಡಿಮೆ ಮಳೆಯಾಗಿದ್ದು, ಜಲಾಶಯದಲ್ಲಿ ಪ್ರಸ್ತುತ 1.30 ಟಿಎಂಸಿ ಅಡಿ ಮಾತ್ರ ನೀರು ಇದೆ. ಕಾರಂಜಾ ಸುತ್ತಮುತ್ತ ಮೂರು ವರ್ಷಗಳಿಂದ ಬರ ಇದ್ದು, ಅದು ಭರ್ತಿ ಆಗಿಲ್ಲ. 2016ರಲ್ಲಿ ಕಾರಂಜಾ ಭರ್ತಿಯಾಗಿತ್ತು.ಆ ನಂತರ ಜಲಾಶಯದಲ್ಲಿ ನೀರಿನ ಪ್ರಮಾಣ ಕುಸಿಯುತ್ತಲೇ ಇದೆ.

1.5 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಅಮರ್ಜಾ ಜಲಾಶಯವೂ ತುಂಬುವ ಲಕ್ಷಣಗಳಿಲ್ಲ. ಗುರುವಾರ ನೀರಿನ ಮಟ್ಟ 0.27 ಟಿಎಂಸಿ ಅಡಿ ಮಾತ್ರ ಇತ್ತು.

ಮೂರು ಜಿಲ್ಲೆಗಳಲ್ಲಿ ಮಳೆ ಕೊರತೆ

ಕಲಬುರ್ಗಿ, ಬೀದರ್‌ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಈ ಬಾರಿಯೂ ವಾಡಿಕೆಯಷ್ಟು ಮಳೆಯಾಗಿಲ್ಲ. ಕಲಬುರ್ಗಿ ಜಿಲ್ಲೆಯಲ್ಲಿ ಶೇ 24ರಷ್ಟು, ಬೀದರ್ ಶೇ 32 ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶೇ 20ರಷ್ಟು ಮಳೆಯ ಕೊರತೆಯಾಗಿದೆ. ಬೀದರ್‌ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಶೇ 90ರಷ್ಟು ಬಿತ್ತನೆಯಾಗಿದ್ದರೆ,ಕಲಬುರ್ಗಿಯಲ್ಲಿ ಶೇ 97ರಷ್ಟು ಬಿತ್ತನೆಯಾಗಿದೆ.

***

’ಕಳೆದ ವರ್ಷ ಗಂಡೋರಿ ನಾಲಾ, ಅಮರ್ಜಾ ಹಾಗೂ ಕೆಳದಂಡೆ ಮುಲ್ಲಾಮಾರಿ ಜಲಾಶಯಗಳಲ್ಲಿ ಹೆಚ್ಚಿನ ನೀರು ಸಂಗ್ರಹವಿತ್ತು. ಈ ವರ್ಷ ನೀರು ಭರ್ತಿಯಾಗಿಲ್ಲ’

-ಮಲ್ಲಿಕಾರ್ಜುನ ಜಾಕಾ , ಕಾರ್ಯನಿರ್ವಾಹಕ ಎಂಜಿನಿಯರ್‌, ಕರ್ನಾಟಕ ನೀರಾವರಿ ನಿಗಮ, ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.