ADVERTISEMENT

ದೇಶದಾದ್ಯಂತ ESIC ಆಸ್ಪತ್ರೆಗಳ ಪೂರ್ಣ ಸಾಮರ್ಥ್ಯ ಬಳಕೆಗೆ ಕ್ರಮ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 13:39 IST
Last Updated 23 ಡಿಸೆಂಬರ್ 2025, 13:39 IST
<div class="paragraphs"><p>ಶೋಭಾ ಕರಂದ್ಲಾಜೆ</p></div>

ಶೋಭಾ ಕರಂದ್ಲಾಜೆ

   

ಕಲಬುರಗಿ: ‘ಇಎಸ್‌ಐಸಿ ಆಸ್ಪತ್ರೆಗಳನ್ನು ಇಎಸ್‌ಐ ಕಾರ್ಡ್ ಹೊಂದಿದವರಿಗಷ್ಟೇ ಅಲ್ಲದೇ ಸಾಮಾನ್ಯ ರೋಗಿಗಳಿಗೆ ಮುಕ್ತಗೊಳಿಸಿದರೂ ಲಭ್ಯವಿರುವ ವೈದ್ಯಕೀಯ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಕೃಷಿ ಕಾರ್ಮಿಕರು, ಗಿಗ್, ಗಾರ್ಮೆಂಟ್ಸ್‌ ಸೇರಿದಂತೆ ಅಸಂಘಟಿತ ವಲಯದವರಿಗೂ ಇಎಸ್‌ಐ ಕಾರ್ಡ್ ನೀಡಲಾಗುವುದು’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ನಗರದ ಸೇಡಂ ರಸ್ತೆಯ ಇಎಸ್‌ಐಸಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ಮಂಗಳವಾರ ಕ್ರೀಡಾ ಸಂಕೀರ್ಣ, ಮೇಲ್ಚಾವಣಿಯ ಸೌರ ವಿದ್ಯುತ್ ವ್ಯವಸ್ಥೆ ಮತ್ತು ಅಂತರ್ಜಲ ಮರುಪೂರಣ ಸೌಲಭ್ಯ ಉದ್ಘಾಟಿಸಿ ಮಾತನಾಡಿದ‌ ಅವರು, ‘ಕಲಬುರಗಿ ಇಎಸ್‌ಐಸಿ ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ 560 ಇದ್ದರೂ ಶೇ 52ರಷ್ಟು ಮಾತ್ರ ಭರ್ತಿಯಾಗುತ್ತಿವೆ. ಹೀಗಾಗಿ, ಇನ್ನಷ್ಟು ಹಾಸಿಗೆಗಳನ್ನು ಹೆಚ್ಚಿಸುವ ಪ್ರಸ್ತಾವ ಇಲ್ಲ. ಇಎಸ್‌ಐಸಿಯ ವೈದ್ಯಕೀಯ, ದಂತ ವೈದ್ಯಕೀಯ, ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ 1,800ಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಐಪಿ ಕಾರ್ಡ್ ಇದ್ದವರಷ್ಟೇ ಅಲ್ಲದೇ ಕಾರ್ಡ್ ಇಲ್ಲದ ಜನಸಾಮಾನ್ಯರಿಗೂ ಇಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ನೀಡುವುದು ನಮ್ಮ ಗುರಿಯಾಗಿದೆ. ಹಾಗಾಗಿ, ಆಸ್ಪತ್ರೆ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲಾಗುವುದು’ ಎಂದರು.

ADVERTISEMENT

ವಿದ್ಯಾರ್ಥಿಗಳು ಮನಸ್ಸು ಹಾಗೂ ದೇಹ ಆರೋಗ್ಯಕರವಾಗಿರಬೇಕು ಎಂದರೆ ನಿತ್ಯ ವ್ಯಾಯಾಮವನ್ನು ಮಾಡಬೇಕು. ಅದಕ್ಕಾಗಿಯೇ ಕ್ಯಾಂಪಸ್‌ನಲ್ಲಿ ಜಿಮ್ ಉದ್ಘಾಟಿಸಲಾಗಿದೆ. ಅದರ ಸೌಲಭ್ಯವನ್ನು ಎಲ್ಲರೂ ಪಡೆಯಬೇಕು. ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಬೇಕೆಂಬ ಬೇಡಿಕೆ ಬಂದಿದ್ದು, ಈ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇಎಸ್‌ಐ ಆಸ್ಪತ್ರೆ ಡೀನ್‌ ಡಾ.ಸಂತೋಷ್ ವಿ. ಕ್ಷೀರಸಾಗರ ಮಾತನಾಡಿ, ‘ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಾಲೇಜು ಪೂರಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಮತ್ತು ಅಸ್ಪತ್ತೆ ಗುಣಮಟ್ಟದ ಸೇವೆ ಒದಗಿಸಲು ಶ್ರಮಿಸಲಾಗುತ್ತಿದೆ’ ಎಂದರು.

ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ದಂತ ವೈದ್ಯಕೀಯ ವಿಭಾಗದ ಡೀನ್ ಡಾ.ಪ್ರಶಾಂತ ಪಾಟೀಲ, ಇಎಸ್ಐಸಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಎಚ್. ಕಡ್ಲಿಮಟ್ಟಿ, ಉಪ ವೈದ್ಯಕೀಯ ಅಧೀಕ್ಷಕಿ ಡಾ.ಪದ್ಮಜಾ, ಇಎಸ್ಐಸಿ ಜಂಟಿ‌ ನಿರ್ದೇಶಕ ಎಸ್.ವಿ.ಯುವರಾಜ, ಪ್ರಾದೇಶಿಕ ನಿರ್ದೇಶಕ ಎಂ.ಸುಬ್ರಮಣ್ಯಮ್ ಸೇರಿದಂತೆ ಬೋಧಕ–ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳ ಅಹವಾಲು ಆಲಿಸಿದ ಸಚಿವೆ

ಇಎಸ್‌ಐಸಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆಗೆ ಬಂದಿದ್ದ ಸಚಿವೆ ಶೋಭಾ ಕರಂದ್ಲಾಜೆ ಅವರು ವಿದ್ಯಾರ್ಥಿಗಳ ಅಹವಾಲು ಆಲಿಸಿದರು.

ನರ್ಸಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ತಮಗೆ ಸ್ಟೈಫಂಡ್ ಬರುತ್ತಿಲ್ಲ ಎಂದರು. ಮತ್ತೊಬ್ಬ ವಿದ್ಯಾರ್ಥಿ ತಮ್ಮ ವಿಭಾಗದಲ್ಲಿನ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರ ಕೆಟ್ಟು ಹೋಗಿದೆ ಎಂದರು.

ಸಂಬಂಧಪಟ್ಟ ಸಿಬ್ಬಂದಿಯನ್ನು ಕರೆಸಿಕೊಂಡು ವಿವರಣೆ ಕೇಳಿದ ಸಚಿವೆ ಶೋಭಾ, ‘ಎಂಆರ್‌ಐ ಉಪಕರಣವನ್ನು ಶೀಘ್ರವೇ ಅಳವಡಿಸಲಾಗುವುದು. ಈ ಬಗ್ಗೆ ಇಎಸ್‌ಐನ ಮಹಾನಿರ್ದೇಶಕರ ಜೊತೆಗೆ ಮಾತುಕತೆ ನಡೆಸುವೆ’ ಎಂದು ಭರವಸೆ ನೀಡಿದರು.

ಇಎಸ್‌ಐನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪ್ರಾಧ್ಯಾಪಕರೊಬ್ಬರು, ‘ತಮ್ಮ ಸೇವೆ ಎರಡು ವರ್ಷ ಸೇವಾವಧಿ ಪೂರ್ಣಗೊಂಡ ಬಳಿಕ ಮುಕ್ತಾಯವಾಗಲಿದೆ. ಆದರೆ, ಇಲ್ಲಿಯೇ ಮುಂದುವರಿಯುವ ಇಚ್ಛೆ ಇದೆ’ ಎಂದರು. ನರ್ಸ್ ಹುದ್ದೆಯಲ್ಲಿರುವ ಮಹಿಳೆಯೊಬ್ಬರು, ‘ನಮಗೆ ಓದು ಮುಂದುವರಿಸುವ ಇಚ್ಛೆ ಇದ್ದರೂ ಸೂಕ್ತ ರಜೆ ಸಿಗುವುದಿಲ್ಲ’ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಉತ್ತರಿಸಿದ ಸಚಿವೆ ಶೋಭಾ, ‘ರಾಜ್ಯ ಸರ್ಕಾರದ ಸೇವೆಯಿಂದ ಇಎಸ್‌ಐಗೆ ಹಾಗೂ ಖಾಸಗಿ ಕಾಲೇಜುಗಳಿಂದ ಇಎಸ್‌ಐ ಸೇವೆಗೆ ಬರುವ ಬಹಳ ಜನ ಈ ಬೇಡಿಕೆ ಇರಿಸಿದ್ದಾರೆ. ಈ ಬಗ್ಗೆ ಸಮಾಲೋಚನೆ ನಡೆಸಲಾಗುವುದು’ ಎಂದು ಹೇಳಿದರು. 

‘ಇವರೇ ನಿಮ್ಮ ಶಾಸಕರು!’

ವೇದಿಕೆಯಲ್ಲಿದ್ದ ಶಾಸಕ ಬಸವರಾಜ ಮತ್ತಿಮಡು ಅವರನ್ನು ಸಭೆಯಲ್ಲಿ ಪರಿಚಯಿಸಿದ ಸಚಿವೆ ಶೋಭಾ ಅವರು, ‘ಇವರೇ ನಿಮ್ಮ ಕ್ಷೇತ್ರದ ಶಾಸಕರು’ ಎಂದರು. ದತ್ತಾತ್ರೇಯ ಪಾಟೀಲ ರೇವೂರ ಅವರನ್ನು ತೋರಿಸಿ, ‘ಇವರು ಈ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಮುಂದಿನ ಬಾರಿ ನಿಶ್ಚಿತವಾಗಿ ಗೆಲ್ಲುತ್ತಾರೆ’ ಎಂದರು.

ವೇದಿಕೆಯಲ್ಲಿ ಸಚಿವೆಯೊಂದಿಗೆ ಬಿಜೆಪಿ ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಗಿ, ಮಹಾದೇವ ಬೆಳಮಗಿ ಆಸೀನರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.