ADVERTISEMENT

ಪಿಯು: ಪೂರ್ಣ ಪ್ರಮಾಣದ ಮೌಲ್ಯಮಾಪನ ಆರಂಭ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 17:26 IST
Last Updated 1 ಜೂನ್ 2020, 17:26 IST

ಕಲಬುರ್ಗಿ: ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಸೋಮವಾರ (ಜೂನ್‌ 1)ದಿಂದ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದೆ. ಒಟ್ಟು 191 ಸಹಾಯಕ ಮೌಲ್ಯಮಾಪಕರು (ಎಸಿಇ) ಹಾಗೂ 49 ಉಪ ಮೌಲ್ಯಮಾಪಕರು (ಡಿಸಿಇ) ಕೆಲಸಕ್ಕೆ ಹಾಜರಾಗಿದ್ದಾರೆ.

ವಾರ್ಷಿಕ ಪರೀಕ್ಷೆಯ ಕನ್ನಡ ವಿಷಯದ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಗರದಲ್ಲಿ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತದಲ್ಲಿ ಉತ್ತರ ಪತ್ರಿಕೆಗಳ ಬಂಡಲ್‌ ತೆರೆದು, ಟ್ಯಾಗ್‌ ಒಡೆಯುವ ಕೆಲಸ (ಡಿ–ಕೋಡಿಂಗ್‌) ಮಾಡಲು ಕಾಲೇಜು ಪ್ರಾಂಶುಪಾಲರನ್ನು ಉಪ ಮೌಲ್ಯಮಾಪಕರು ಎಂದು ನೇಮಕ ಮಾಡಲಾಗಿದೆ. ಇದಕ್ಕಾಗಿ 59 ಮಂದಿಯ ಪಟ್ಟಿ ನೀಡಲಾಗಿದ್ದು, 49 ಮಂದಿ ಹಾಜರಾಗಿದ್ದಾರೆ.

‘ಸುಮಾರು 300 ಸಹಾಯಕ ಮೌಲ್ಯಮಾಪಕರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಆದರೆ, 200 ಜನ ಮಾತ್ರ ಅಗತ್ಯವಿದ್ದಾರೆ. ಅದರಲ್ಲಿ 191 ಮಂದಿ ಬಂದಿದ್ದರಿಂದ‌ ಪೂರ್ಣ ಪ್ರಮಾಣದ ಕೆಲಸ ನಡೆದಿದೆ.‌ ಕೋವಿಡ್‌ ಭೀತಿಯಿಂದ ಬಹಳಷ್ಟು ಉಪನ್ಯಾಸಕರು ಹಾಜರಾಗಲು ಹಿಂಜರಿದಿದ್ದರು. ಆದರೆ, ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆ‌ಯಿಂದ ಮಾಡಿಕೊಂಡ ಸುರಕ್ಷತಾ ಸಿದ್ಧತೆಗಳ ಬಗ್ಗೆ ಮನವರಿಕೆ ಮಾಡಿದ ಮೇಲೆ ಬಹುಪಾಲು ಮಂದಿ ಬಂದಿದ್ದಾರೆ. ಕನಿಷ್ಠ 14 ದಿನಗಳಲ್ಲಿ ಮೌಲ್ಯಮಾಪನ ಪೂರ್ತಿ ಮುಗಿಯಲಿದೆ’ ಎಂದು ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ ತಿಳಿಸಿದರು.

ADVERTISEMENT

ಊಟ, ವಸತಿ, ಸಾರಿಗೆ ವ್ಯವಸ್ಥೆ: ಹೊರ ಜಿಲ್ಲೆಗಳಿಂದ ಬಂದ 60 ಮೌಲ್ಯಮಾ‍ಪಕರಿಗೆ ಕಲಬುರ್ಗಿಯ ಶ್ರೀಗುರು ವಿದ್ಯಾಪೀಠದಲ್ಲಿ ವಸತಿ, ಉಪಾಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಸಂಸ್ಥೆಯ ಅಧ್ಯಕ್ಷ ಬಸವರಾಜ ದಿಗ್ಗಾವಿ ಅವರು ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟವನ್ನು ಉಚಿತವಾಗಿಯೇ ಉಪನ್ಯಾಸಕರು ಇರುವಲ್ಲಿಗೇ ತಂದು ನೀಡುತ್ತಿದ್ದಾರೆ.

ಅದೇ ರೀತಿ, ದಿಶಾ ಕಾಲೇಜಿನ ಮುಖಂಡ ಶಿವಾನಂದ ಅವರು ವಸತಿ ಸ್ಥಳದಿಂದ ಮೌಲ್ಯಮಾಪನ ಕೇಂದ್ರಕ್ಕೆ ಕರೆದೊಯ್ಯಲು ಉಚಿತವಾಗಿ ಬಸ್‌ ವ್ಯವಸ್ಥೆ ಕಲ್ಪಿಸಿದ್ದಾರೆ. ಎಲ್ಲರಿಗೂ ಸ್ಯಾನಿಟೈಸರ್‌, ಮಾಸ್ಕ್‌ ನೀಡಿದ್ದು ಸುರಕ್ಷಿತ ಅಂತರಕ್ಕಾಗಿ ಒಂದು ಕೊಠಡಿಯಲ್ಲಿ ಮೂವರನ್ನು ಮಾತ್ರ ಕೂಡ್ರಿಸಲಾಗುತ್ತಿದೆ ಎಂದೂ ಡಿಡಿಪಿಯು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.