ADVERTISEMENT

ಸೊನ್ನ ಬ್ಯಾರೇಜ್‌ಗೆ ಹೆಚ್ಚುವರಿ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 14:47 IST
Last Updated 5 ಸೆಪ್ಟೆಂಬರ್ 2021, 14:47 IST
ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್‌ಗೆ ಮಹಾರಾಷ್ಟ್ರದ ಸೀನಾ ನದಿಯಿಂದ ಹೆಚ್ಚುವರಿ ನೀರು ಬಂದಿದೆ
ಅಫಜಲಪುರ ತಾಲ್ಲೂಕಿನ ಸೊನ್ನ ಭೀಮಾ ಬ್ಯಾರೇಜ್‌ಗೆ ಮಹಾರಾಷ್ಟ್ರದ ಸೀನಾ ನದಿಯಿಂದ ಹೆಚ್ಚುವರಿ ನೀರು ಬಂದಿದೆ   

ಅಫಜಲಪುರ: ಮಹಾರಾಷ್ಟ್ರದ ಸೋಲಾಪುರ ಮತ್ತು ಟಾಕಳಿ ಸುತ್ತಮುತ್ತ ಕಳೆದ 2– 3 ದಿನಗಳಿಂದ ಮಳೆಯಾಗುತ್ತಿರುವದರಿಂದ ಮಹಾರಾಷ್ಟ್ರದ ಸೀನಾ ನದಿ ತುಂಬಿಕೊಂಡಿದ್ದು, ಹೆಚ್ಚಿನ ನೀರನ್ನು ನದಿಗೆ ಬಿಡುತ್ತಿದ್ದು, ಸುತ್ತಮುತ್ತಲಿನ ಜನ ಎಚ್ಚರಿಕೆಯಿಂದ ಇರಬೇಕೆಂದು ಭೀಮಾ ಏತ ನೀರಾವರಿ ಉಪ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ ಜಾಕಾ ತಿಳಿಸಿದರು.

ತಾಲ್ಲೂಕಿನಲ್ಲಿಯೂ ಭೀಮಾನದಿ ಸುತ್ತಮುತ್ತ ಮಳೆಯಾಗುತ್ತಿದ್ದು, ಸೊನ್ನ ಭೀಮಾ ಡ್ಯಾಂನಲ್ಲಿ ನೀರು ಸಂಗ್ರಹವಾಗುತ್ತಿದೆ. 3 ಟಿಎಂಸಿ ಸಂಗ್ರಹ ಸಾಮರ್ಥ್ಯವಿದ್ದು, ಒಂದು ವೇಳೆ ಡ್ಯಾಂ ತುಂಬಿದರೆ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತದೆ. ಅದಕ್ಕಾಗಿ ನದಿಯ ಕೆಳ ಭಾಗದ ಜನ ಎಚ್ಚರಿಕೆಯಿಂದ ಇರಬೇಕು ಎಂದು ಅವರು ತಿಳಿಸಿದರು.

ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮಾಹಿತಿ ನೀಡಿ, ಹವಾಮಾನ ಇಲಾಖೆ ಪ್ರಕಾರ ಜಿಲ್ಲೆಯಲ್ಲಿ ಸೆ.11 ರವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವದರಿಂದ ಎಲ್ಲಾ ಅಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಬೇಕು. ಪ್ರವಾಹ ಉಂಟಾದಲ್ಲಿ ಜನರ ರಕ್ಷಣೆ ಕೈಗೊಳ್ಳಬೇಕು ಮತ್ತು ಮಳೆಯಿಂದ ಗ್ರಾಮಗಳಲ್ಲಿ ಹಾನಿಯಾಗುವ ಬಗ್ಗೆ ಲಕ್ಷ್ಯ ವಹಿಸಬೇಕು ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.