ADVERTISEMENT

ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಇಳಿಮುಖ

ಅಕ್ರಮ ಸೇಂದಿ ಮಾರಾಟ, ಕಳ್ಳಭಟ್ಟಿ ತಯಾರಿಕೆ ಪ್ರಕರಣ ಇನ್ನೂ ಜೀವಂತ

ಬಸೀರ ಅಹ್ಮದ್ ನಗಾರಿ
Published 10 ಜನವರಿ 2026, 7:50 IST
Last Updated 10 ಜನವರಿ 2026, 7:50 IST
   

ಕಲಬುರಗಿ: ಜಿಲ್ಲೆಯಲ್ಲಿ ಅಬಕಾರಿ ಅಕ್ರಮ ಚಟುವಟಿಕೆಗಳು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿವೆ. 2022–23ನೇ ಅಬಕಾರಿ ವರ್ಷಕ್ಕೆ (ಜುಲೈನಿಂದ ಜೂನ್‌) ಹೋಲಿಸಿದರೆ 2024–25ರಲ್ಲಿ ಪ್ರಕರಣಗಳ ಸಂಖ್ಯೆ ಅರ್ಧದಷ್ಟು ತಗ್ಗಿದೆ. ಅಬಕಾರಿ ಇಲಾಖೆ ನೀಡಿರುವ ಅಂಕಿ ಅಂಶಗಳು ಇದನ್ನು ದೃಢಪಡಿಸುತ್ತಿವೆ.

ಅಬಕಾರಿ ಅಕ್ರಮಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಧಿಕಾರಿಗಳು, ಕಳೆದ ಮೂರೂವರೆ ವರ್ಷಗಳಲ್ಲಿ ಏಳು ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೇ, ವಿವಿಧ ಬಗೆಯ ಮದ್ಯ, ವಾಹನಗಳು ಸೇರಿದಂತೆ ₹8 ಕೋಟಿಗೂ ಅಧಿಕ ಮೊತ್ತದ ಸ್ವತ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.‌

ಜಿಲ್ಲೆಯಲ್ಲಿರುವ ಏಳು ಅಬಕಾರಿ ವಲಯಗಳಲ್ಲಿ 2022–23ರಲ್ಲಿ 3,455 ಮಂದಿ ವಿರುದ್ಧ ಕಾನೂನು ಕ್ರಮಕೈಗೊಂಡು, 2,732 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 330 ಘೋರ ಅಪರಾಧಗಳು ಸೇರಿವೆ. ಆ ವರ್ಷ ಒಟ್ಟು ₹3.33 ಕೋಟಿ ಮೊತ್ತದ ವಸ್ತುಗಳನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.

ADVERTISEMENT

ಮದ್ಯ ಅಕ್ರಮಕ್ಕೆ ಸಂಬಂಧಿಸಿದಂತೆ 2023–24ರಲ್ಲಿ 280 ಘೋರ ಅಪರಾಧಗಳು ಸೇರಿದಂತೆ 2,123 ಪ್ರಕರಣಗಳನ್ನು ದಾಖಲಿಸಿ, 2,799 ಮಂದಿ ವಿರುದ್ಧ ಕ್ರಮಕೈಗೊಂಡಿದ್ದಾರೆ.

2024–25ರಲ್ಲಿ 102 ಘೋರ ಅಪರಾಧಗಳು ಸೇರಿದಂತೆ 1,396 ಪ್ರಕರಣಗಳನ್ನು ದಾಖಲಿಸಿರುವ ಅಬಕಾರಿ ಅಧಿಕಾರಿಗಳು, 1,776 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

2025–26ರ ಡಿಸೆಂಬರ್‌ ಅಂತ್ಯದ ತನಕ 781 ಪ್ರಕರಣಗಳನ್ನು ದಾಖಲಿಸಿರುವ 700ಕ್ಕೂ ಅಧಿಕ ಮಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.

ಯಾವೆಲ್ಲ ಪ್ರಕರಣಗಳು?

ಚಿಲ್ಲರೆ ಮದ್ಯ ವಹಿವಾಟು, ಹೆಚ್ಚಿನ ದರಕ್ಕೆ ಮದ್ಯ ಮಾರಾಟ, ನಿಗದಿತ ಸಮಯ ಮೀರಿ ವಹಿವಾಟು ಸೇರಿದಂತೆ ಅಬಕಾರಿ ಸನ್ನದು ಷರತ್ತುಗಳನ್ನು ಉಲ್ಲಂಘಿಸುವ ಅಂಗಡಿಗಳ ವಿರುದ್ಧ ಅಬಕಾರಿ ಅಧಿಕಾರಿಗಳು ಕಠಿಣ ಕ್ರಮಕೈಗೊಂಡಿದ್ದಾರೆ. 1,456 ಇಂಥ ಅಪರಾಧಗಳಲ್ಲಿ 1,456 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಇನ್ನುಳಿದಂತೆ ಉದ್ಯಾನ, ಬೀದಿಗಳು ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ–ಸೇವನೆಗೆ ಸಂಬಂಧಿಸಿದಂತೆ 2022ರ ಜುಲೈನಿಂದ 2025ರ ಡಿಸೆಂಬರ್‌ ತನಕ 4,800ಕ್ಕೂ ಅಧಿಕ ಪ್ರಕರಣಗಳು ಅಧಿಕಾರಿಗಳು ದಾಖಲಿಸಿದ್ದಾರೆ.

ಸೇಂದಿಗೆ ಬೀಳದ ಕಡಿವಾಣ: 

ಜಿಲ್ಲೆಯ ಚಿತ್ತಾಪುರ, ಸೇಡಂ, ಚಿಂಚೋಳಿ ಭಾಗದಲ್ಲಿ ಈಗಲೂ ಅಕ್ರಮವಾಗಿ ಸೇಂದಿ ಮಾರಾಟ, ಅಧಿಕಾರಿಗಳ ಕಣ್ಣು ತಪ್ಪಿಸಿ ಕಳ್ಳಭಟ್ಟಿ ತಯಾರಿಸುವುದು ನಿಂತಿಲ್ಲ.

ಕಳೆದ ಮೂರೂವರೆ ವರ್ಷದಲ್ಲಿ 8,880ಕ್ಕೂ ಅಧಿಕ ಲೀಟರ್‌ ಸೇಂದಿಯನ್ನು ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಇದೇ ಅವಧಿಯಲ್ಲಿ 450ಕ್ಕೂ ಅಧಿಕ ಲೀಟರ್‌ ಕಳ್ಳಭಟ್ಟಿ ಹಾಗೂ 3,300ಕ್ಕೂ ಅಧಿಕ ಲೀಟರ್‌ ಬೆಲ್ಲದಕೊಳೆಯನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.