ADVERTISEMENT

ರಾಜ್ಯ ಸರ್ಕಾರಕ್ಕೆ 100: ಸಾಧನೆಗಳ ಪ್ರದರ್ಶನ

ಪ್ರವಾಹ ಬಂದಾಗ ರಾಜ್ಯ ನಲುಗಿದ ರೀತಿ, ಸರ್ಕಾರ ಕೈಗೊಂಡ ಪರಿಹಾರ ಕ್ರಮಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 13:53 IST
Last Updated 28 ಡಿಸೆಂಬರ್ 2019, 13:53 IST
ಕಲಬುರ್ಗಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಆಯೋಜಿಸಿದ ರಾಜ್ಯ ಸರ್ಕಾರದ ನೂರು ದಿನಗಳ ಸಾಧನೆಯ ಪ್ರದರ್ಶನವನ್ನು ಪಾಲಕರು ಮಗುವಿನೊಂದಿಗೆ ವೀಕ್ಷಿಸಿದ್ದು ಹೀಗೆ
ಕಲಬುರ್ಗಿ ಕೇಂದ್ರ ಬಸ್‌ ನಿಲ್ದಾಣದಲ್ಲಿ ಆಯೋಜಿಸಿದ ರಾಜ್ಯ ಸರ್ಕಾರದ ನೂರು ದಿನಗಳ ಸಾಧನೆಯ ಪ್ರದರ್ಶನವನ್ನು ಪಾಲಕರು ಮಗುವಿನೊಂದಿಗೆ ವೀಕ್ಷಿಸಿದ್ದು ಹೀಗೆ   

ಕಲಬುರ್ಗಿ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ, ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳು ಮತ್ತು ಪ್ರವಾಹ ಪರಿಸ್ಥತಿ ನಿಭಾಯಿಸಿದ ಕುರಿತು ಆಯೋಜಿಸಿದ ಪ್ರದರ್ಶನವನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಶನಿವಾರ ಉದ್ಘಾಟಿಸಿದರು.

ಜಿಲ್ಲಾಧಿಕಾರಿ ಬಿ.ಷರತ್‌, ಬಸ್ ನಿಲ್ದಾಣದ ಸಂಚಾರಿ ನಿರೀಕ್ಷಕ ಅನೀಲಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರವಿಚಂದ್ರ ಮತ್ತು ರವಿ ಮಿರಸ್ಕರ್ ಇದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಆಯೋಜಿಸಿದ ಈ ಪ್ರದರ್ಶನ ಡಿ. 30ರವರೆಗೆ ನಡೆಯಲಿದೆ.
ಆಗಸ್ಟ್ ತಿಂಗಳಲ್ಲಿ ಪ್ರವಾಹ ಬಂದಾಗ ಸರ್ಕಾರವು 22 ಜಿಲ್ಲೆಗಳ 103 ತಾಲ್ಲೂಕುಗಳನ್ನು ಪ್ರವಾಹ ಪೀಡಿತ ಎಂದು ಘೋಷಿಸಿತು, ಪರಿಹಾರ ಕಾರ್ಯಕ್ಕೆ ₹ 6,450 ಕೋಟಿ ಮಂಜೂರು, ಕೇಂದ್ರದಿಂದ ₹ 1,200 ಕೋಟಿ ನೆರವು, 4.30 ಲಕ್ಷ ರೈತ ಕುಟುಂಬಗಳ ಬೆಳೆ ಹಾನಿಗೆ ಖುಷ್ಕಿ ಭೂಮಿಯ ಪ್ರತಿ ಹೆಕ್ಟೇರ್‌ಗೆ ₹ 16,800, ನೀರಾವರಿ ಬೆಳೆಗಳಿಗೆ ₹ 23,500 ಹಾಗೂ ವಾಣಿಜ್ಯ ಬೆಳೆಗಳಿಗೆ ₹ 28,000 ಪರಿಹಾರ ವಿತರಣೆಯ ಮಾಹಿತಿ ಇಲ್ಲಿದೆ.

ADVERTISEMENT

ಪ್ರವಾಹದಿಂದ ಹಾನಿಗೊಳಗಾದ 97,920 ಮನೆಗಳ ಪೈಕಿ 92,267 ಮನೆಗಳಿಗೆ ₹ 350 ಕೋಟಿ ಬಿಡುಗಡೆ, ಆಸ್ತಿ-ಪಾಸ್ತಿ ನಷ್ಟ ಅನುಭವಿಸಿದ್ದ 1,38,725 ಫಲಾನುಭವಿಗಳಿಗೆ ₹ 282.53 ಕೋಟಿ ಬ್ಯಾಂಕ್ ಖಾತೆಗಳಿಗೆ ಜಮಾ ಸೇರಿದಂತೆ ಸಂತ್ರಸ್ತರ ಆತ್ಮಸ್ಥೈರ್ಯ ಹೆಚ್ಚಿಸಲು ಕೈಗೊಂಡ ಕ್ರಮಗಳನ್ನು ಇಲ್ಲಿ ಕಾಣಬಹುದು.

ನೇಕಾರರ ಮತ್ತು ಮೀನುಗಾರರ ಸಾಲ ಮನ್ನಾ, ರಾಜ್ಯ ಸರ್ಕಾರದ ಸುಸ್ಥಿರ ಅಭಿವೃದ್ಧಿಯ ಗುರಿಗಳು, ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹೊಸ ಆವಿಷ್ಕಾರಗಳಿಗೆ ಉತ್ತೇಜನ ನೀಡಲು ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ರಚನೆ, ಸ್ಟಾರ್ಟ್‌ ಅಪ್ ವ್ಯವಸ್ಥೆ ಸದೃಢತೆಗೆ ವಿಷನ್ ಗ್ರೂಪ್ ರಚನೆ, ಹೂಡಿಕೆದಾರರಿಗೆ ಆಕರಿಷಿಸಲು ಪೂರಕ ವಾತಾವರಣ ಸೃಷ್ಠಿ, 9 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ ಯೋಜನೆಗಳ ಪೂರ್ಣ ಮಾಹಿತಿ ಇದೆ.

ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ, ಕಲ್ಯಾಣ ಕರ್ನಾಟಕದ ಉದ್ಘೋಷಣೆ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಯ ಕಾರ್ಯಕ್ರಮಗಳು, ಪ್ರವಾಸೋದ್ಯಮಕ್ಕೆ ಉತ್ತೇಜನ, ಆಯುಷ್ಮಾನ್ ಭಾರತ– ಆರೋಗ್ಯ ಕರ್ನಾಟಕ ಹೀಗೆ ಹತ್ತು ಹಲವು ಇಲಾಖೆಗಳ ಯೋಜನೆಗಳು ಒಳಗೊಂಡಿವೆ.

ಕಿರುಹೊತ್ತಿಗೆ ವಿತರಣೆ: ರಾಜ್ಯ ಸರ್ಕಾರದ 100 ದಿನಗಳ ಸಾಧನೆ ಬಿಂಬಿಸುವ ‘ದಿನ 100 ಸಾಧನೆ ನೂರಾರು’ ಕಿರು ಹೊತ್ತಿಗೆ ಮತ್ತು ‘ಜನಪದ’ ಮಾಸಿಕ ಸಂಚಿಕೆಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.