ADVERTISEMENT

ಅಫಜಲಪುರ | ಕಬ್ಬಿಗೆ ಬೆಲೆ ನಿಗದಿಪಡಿಸದ ಕಾರ್ಖಾನೆಗಳು: ಆತಂಕದಲ್ಲಿ ಬೆಳೆಗಾರರು

ಹೆಚ್ಚುವರಿ ಮೊತ್ತ ಬಿಡುಗಡೆಗೊಳಿಸಲು ಆಗ್ರಹ

ಶಿವಾನಂದ ಹಸರಗುಂಡಗಿ
Published 26 ನವೆಂಬರ್ 2023, 7:40 IST
Last Updated 26 ನವೆಂಬರ್ 2023, 7:40 IST
ಅಫಜಲಪುರ ತಾಲ್ಲೂಕಿನ ಹವಳಗ ರೇಣುಕಾ ಸಕ್ಕರೆ ಕಾರ್ಖಾನೆಗೆ ರೈತರ ಕಬ್ಬು ಸಾಗಾಟವಾಗುತ್ತಿರುವುದು
ಅಫಜಲಪುರ ತಾಲ್ಲೂಕಿನ ಹವಳಗ ರೇಣುಕಾ ಸಕ್ಕರೆ ಕಾರ್ಖಾನೆಗೆ ರೈತರ ಕಬ್ಬು ಸಾಗಾಟವಾಗುತ್ತಿರುವುದು   

ಅಫಜಲಪುರ: ಕೇಂದ್ರ ಸರ್ಕಾರವು, ಪ್ರತಿ ಟನ್‌ ಕಬ್ಬಿಗೆ ₹3,282 ಎಫ್‌ಆರ್‌ಪಿ ದರವನ್ನು ನಿಗದಿಪಡಿಸಿದೆ. ಆದರೆ ಈವರೆಗೂ ತಾಲ್ಲೂಕಿನಲ್ಲಿರುವ ಕಾರ್ಖಾನೆಗಳ ಮಾಲೀಕರು, ಕಬ್ಬಿಗೆ ಬೆಲೆ ನಿಗದಿಪಡಿಸಿಲ್ಲ. ಜತೆಗೆ ಕಬ್ಬನ್ನು ನುರಿಸುತ್ತಿದ್ದು, ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.

ತಾಲ್ಲೂಕಿನಲ್ಲಿ ಹಲವು ರೈತ ಸಂಘಟನೆಗಳು ಸೇರಿ ಕಬ್ಬು ನುರಿಸುವುದನ್ನು ಆರಂಭಿಸುವುದಕ್ಕೂ ಮೊದಲೇ ಕಬ್ಬಿಗೆ ಬೆಲೆ ನಿಗದಿಪಡಿಸಿ, ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದ್ದವು. ಈ ಸಂಬಂಧ ಜಿಲ್ಲಾಧಿಕಾರಿಯೊಂದಿಗೆ ಎರಡು ಬಾರಿ ಸಭೆಯನ್ನು ನಡೆಸಲಾಗಿತ್ತು. ಆದರೆ ಈವರೆಗೂ ಕಬ್ಬಿಗೆ ಬೆಲೆ ನಿಗದಿಪಡಿಸಿಲ್ಲ. ಹೀಗಾಗಿ ಕಾರ್ಖಾನೆಗಳ ಮಾಲೀಕರು, ಕಬ್ಬಿಗೆ ಬೆಲೆ ನಿಗದಿ ಪಡಿಸಬೇಕು ಎಂದು ತಾಲ್ಲೂಕಿನ ರೈತ ಸಂಘಟನೆಗಳು ಆಗ್ರಹಿಸಿವೆ.

ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರೇಣುಕಾ ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆಯವರು ಕಳೆದ ಸಾಲಿನಲ್ಲಿ ಕೇಂದ್ರ ಸರ್ಕಾರ ₹3,282 ಎಫ್ಆರ್‌ಪಿ ನಿಗದಿಪಡಿಸಿದ್ದವು. ಈ ಬಾರಿ ರೇಣುಕಾ ಸಕ್ಕರೆ ಕಾರ್ಖಾನೆ ₹2,550 ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆ ₹ 2,500 ಮಾತ್ರ ನೀಡಿವೆ. ಜತೆಗೆ ₹732 ಸಾರಿಗೆ ಮತ್ತು ಕಟಾವು ಮೊತ್ತ ಕಡಿತಗೊಳಿಸಿದ್ದು, ಪ್ರತಿ ಟನ್‌ಗೆ ಬಾಕಿಯಿರುವ ರೇಣುಕಾ ಸಕ್ಕರೆ ಕಾರ್ಖಾನೆ ₹112 ಮತ್ತು ಕೆಪಿಆರ್ ಸಕ್ಕರೆ ಕಾರ್ಖಾನೆ ₹ 50 ಮೊತ್ತವನ್ನು ಕಬ್ಬು ಬೆಳೆಗಾರರಿಗೆ ಪಾವತಿಸಬೇಕು. ಹಿಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಕಬ್ಬು ಬೆಳೆಗಾರರ ಮತ್ತು ಕಾರ್ಖಾನೆ ಪ್ರಮುಖರ ಸಭೆಯಲ್ಲಿ ಕೂಡ ಧ್ವನಿ ಎತ್ತಿದರೂ ಪ್ರಯೋಜನವಾಗಿಲ್ಲ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ತಿಳಿಸಿದರು.

ADVERTISEMENT

ತಾಲೂಕಿನಲ್ಲಿ ಪ್ರಸ್ತುತ ವರ್ಷ ಸುಮಾರು 90 ಸಾವಿರ ಎಕರೆ ಕಬ್ಬು ಕಟಾವಾಗಬೇಕಿದೆ. ಆದರೆ ಸುಮಾರು 40 ಸಾವಿರ ಎಕರೆ ಕಬ್ಬು ಮಳೆ ಕೊರತೆಯಿಂದ ಒಣಗಿದೆ. ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ನಿಗದಿಯಾಗಿದ್ದು, ಎಫ್ಆರ್‌ಪಿ ₹3,423 ದರವಿದೆ. ಹೀಗಾಗಿ ನಮ್ಮಲ್ಲಿಯೂ ಉತ್ತಮ ದರ ನೀಡಬೇಕು ಎಂದು ಜಿಲ್ಲಾ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ರಮೇಶ ಹೂಗಾರ ಒತ್ತಾಯಿಸಿದ್ದಾರೆ.

ಬೆಳಗಾವಿ ಹಾಗೂ ಬಾಗಲಕೋಟೆಗಳಲ್ಲಿ ಕಾರ್ಖಾನೆಗಳ ನಡುವೆ ಸ್ಪರ್ಧೆಯಿದೆ. ಹೀಗಾಗಿ ಉತ್ತಮ ದರ ಕೊಡುತ್ತಾರೆ. ಎಂದು  ರೇಣುಕಾ ಸಕ್ಕರೆ ಕಾರ್ಖಾನೆ ‍ಪ್ರಧಾನ ವ್ಯವಸ್ಥಾಪಕ ಸಂಗಮನಾಥ ಜಮಾದಾರ ಹೇಳಿದ್ದಾರೆ ಎಂದು ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬ್ಬಿಗೆ ಬೆಲೆ ನಿಗದಿಪಡಿಸಿರುವ ಬೆಲೆಯನ್ನು ಬಹಿರಂಗಪಡಿಸಲು ಹೋರಾಟ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳು ಸಭೆ ಮಾಡಿದ್ದಾರೆ. ಈ ಭಾಗದ ಶಾಸಕರು ಮತ್ತು ಸಕ್ಕರೆ ಸಚಿವರು, ನಡೆಸಿರುವ ಸಭೆಗಳಿಂದ ಪ್ರಯೋಜನವಾಗುತ್ತಿಲ್ಲ. ಸಕ್ಕರೆ ಕಾರ್ಖಾನೆಯವರು, ರೈತರ ಬೇಡಿಕೆಗಳಿಗೆ ಕ್ಯಾರೇ ಎನ್ನುತ್ತಿಲ್ಲ. ಕಬ್ಬು ಬೆಳೆಗಾರರು ಕಷ್ಟ ಅನುಭವಿಸುವ ಪರಿಸ್ಥಿತಿ ಬಂದಿದೆ. ಕಬ್ಬು ಬೆಳೆಗಾರರು, ಕಾರ್ಖಾನೆಯವರು ನಿಗದಿಪಡಿಸಿರುವ ಬೆಲೆಗೆ ಕಬ್ಬು ಕಳುಹಿಸುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲದಂತಾಗಿದೆ ಎಂದು ರಾಜುಗೌಡ ಪಾಟೀಲ ಬಾಸಗಿ ಹಾಗೂ ಗುರು ಚಾಂದಕವಟೆ ಬೇಸರ ವ್ಯಕ್ತಪಡಿಸಿದರು.

ತಾಲೂಕು ಜಲಸಮಿತಿ ಒಕ್ಕೂಟದ ಅಧ್ಯಕ್ಷ ಸಿದ್ದು ದಣ್ಣೂರು
ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೂಗಾರ್
ತಾಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ್
ಸಕ್ಕರೆ ಕಾರ್ಖಾನೆಯವರು ಸರ್ಕಾರದ ಮಾತು ಕೇಳುತ್ತಿಲ್ಲ. ರೈತರಿಗೆ ಬೇರೆ ಮಾರ್ಗವಿಲ್ಲ. ಅನಿವಾರ್ಯವಾಗಿ ಕಾರ್ಖಾನೆಯವರು ನಿಗದಿ ಮಾಡಿದ ಬೆಲೆಗೆ ಕಬ್ಬು ಪೂರೈಸಬೇಕಿದೆ. ಹೀಗಾಗಿ ಹೊಸ ಕಾನೂನು ರೂಪಿಸಬೇಕಿದೆ
ಸಿದ್ದು ದಣ್ಣೂರು, ತಾಲ್ಲೂಕು ಜಲಸಮಿತಿ ಒಕ್ಕೂಟದ ಅಧ್ಯಕ್ಷ
ರಾಜ್ಯದಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಒಂದೇ ದರ ನಿಗದಿ ಮಾಡುವಂತೆ ಸರ್ಕಾರ ನಿಯಮ ರೂಪಿಸಬೇಕು. ಅದರಲ್ಲಿ ಕೇಂದ್ರ ಸರ್ಕಾರವು ಭಾಗಿಯಾಗಬೇಕು. ರೈತರಿಗೆ ಅನ್ಯಾಯವಾಗದಂತೆ ಬೆಲೆ ನಿಗದಿ ಮಾಡಬೇಕು
ರಮೇಶ ಹೂಗಾರ, ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.