ಚಿಂಚೋಳಿ: ಬಂಜರು ಭೂಮಿಯಲ್ಲಿ ದ್ರಾಕ್ಷಿ ಬೆಳೆದು ಯಶಸ್ವಿಯಾಗಿರುವ ಪಟ್ಟಣದ ರೈತ ಅನಿಲಕುಮಾರ ಢಗೆ ಕೇವಲ ಮೂರೇ ವರ್ಷದಲ್ಲಿ ಕೋಟ್ಯಧೀಶರರಾಗಿ ಹೊರಹೊಮ್ಮಿದ್ದಾರೆ.
ಮೂಲತಃ ಚಿಂಚೋಳಿಯವರಾದ ಅನಿಲಕುಮಾರ ಒಂದೂವರೆ ದಶಕದ ಹಿಂದೆ ವ್ಯಾಪಾರ ಅರಸಿ ವಿಜಯಪುರಕ್ಕೆ ತೆರಳಿ ಅಲ್ಲಿಯೇ ನೆಲೆಸಿದ್ದರು.
ಅಲ್ಲಿ 15-20 ಕಿ.ಮೀ ದೂರದಿಂದ ಕೊಳವೆ ಮೂಲಕ ನೀರು ತಂದು ನೀರಾವರಿ ಕೈಗೊಂಡು ದ್ರಾಕ್ಷಿ ಬೇಸಾಯ ನಡೆಸುತ್ತಿದ್ದ ಅವರ ಸ್ನೇಹಿತರಿಂದ ಪ್ರೇರಣೆ ಪಡೆದು ಚಿಂಚೋಳಿಗೆ ಬಂದು 11 ಎಕರೆ ಬಂಜರು ಭೂಮಿ ಖರೀದಿಸಿ 5 ವರ್ಷಗಳ ಹಿಂದೆ ದ್ರಾಕ್ಷಿ ಬೇಸಾಯ ಆರಂಭಿಸಿದ್ದರು.
ಬೇಸಾಯ ಆರಂಭಿಸಿದ ಮೂರು ವರ್ಷದಲ್ಲಿ ಆದಾಯದ ಹರಿವು ಆರಂಭವಾಯಿತು. ಈಗ ಪ್ರತಿ ವರ್ಷ ಎಕರೆಗೆ ₹3ರಿಂದ ₹4 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಪ್ರತಿ ಎಕರೆಗೆ 12ರಿಂದ 13 ಟನ್ ಇಳುವರಿ ಪಡೆಯುತ್ತಿರುವ ಇವರು, ಸಮೀಪದ ಹೈದರಾಬಾದ್ ಮಾರುಕಟ್ಟೆಗೆ ಹಣ್ಣುಗಳನ್ನು ಕಳುಹಿಸುತ್ತಾರೆ.
ಗೌಡನಹಳ್ಳಿಯ ಜಮೀನಿನಲ್ಲಿ ಎಕರೆಗೆ 10 ಟನ್ ಇಳುವರಿ ಬಂದರೆ ಗಾರಂಪಳ್ಳಿಯ ಜಮೀನಿನಲ್ಲಿ ಎಕರೆಗೆ 14-15 ಟನ್ ಇಳುವರಿ ಬಂದಿದೆ. ಇದರ ಜತೆಗೆ ಎರಡು ವರ್ಷದಲ್ಲಿ 20 ಟನ್ ಒಣದ್ರಾಕ್ಷಿ ತಯಾರಿಸಿ ಮಾರಾಟ ಮಾಡಿದ್ದಾರೆ. ಇದಕ್ಕೆ ಪ್ರತಿ ಕೆಜಿಗೆ ₹220ರಿಂದ ₹250 ದರ ಲಭಿಸಿದೆ.
ಹಿಂದಿನ ವರ್ಷಗಳಲ್ಲಿ ದ್ರಾಕ್ಷಿ ಹಣ್ಣುಗಳ ಸಗಟು ಮಾರಾಟದಲ್ಲಿ ಪ್ರತಿ ಕೆಜಿಗೆ ₹ 40 ದರ ಲಭಿಸಿದರೆ, ಪ್ರಸಕ್ತ ವರ್ಷ ₹50ರಿಂದ 60 ದರ ಲಭಿಸಿದೆ ಎಂದು ಅನಿಲಕುಮಾರ ಢಗೆ ತಿಳಿಸಿದರು.
ಬೆಳೆ ನಿರ್ವಹಣೆಯ ವಾರ್ಷಿಕ ಖರ್ಚು ವೆಚ್ಚ ಕಳೆದು ₹ 30ರಿಂದ 35 ಲಕ್ಷ ಆದಾಯ ಬಂದಿದೆ. ಕಳೆದ ಮೂರು ವರ್ಷಗಳಿಂದ ನಿರಂತರ ಆದಾಯ ಹರಿದು ಬಂದಿದ್ದರಿಂದ ಮೂರು ವರ್ಷದಲ್ಲಿ ಕೋಟಿ ಆದಾಯ ಪಡೆದಿದ್ದಾರೆ.
ಅನಿಲಕುಮಾರ ಢಗೆ ವ್ಯಾಪಾರದಿಂದ ಬಂದ ಆದಾಯದಿಂದ ಜಮೀನು ಖರೀದಿಸಿ ದ್ರಾಕ್ಷಿ ಬೆಳೆಯುವ ಮೂಲಕ ತಾಲ್ಲೂಕಿನಲ್ಲಿ ಜಲ ಸಂಪನ್ಮೂಲ ಸದ್ಬಳಕೆ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.ಶ್ರೀಕಾಂತ ಪಿಟ್ಟಲ್, ವರ್ತಕ, ಚಿಂಚೋಳಿ
ದ್ರಾಕ್ಷಿ ಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ ಪ್ರಸಕ್ತ ವರ್ಷ ಕೆಜಿಗೆ ₹100ರಂತೆ ಮಾರಾಟವಾಗುತ್ತಿದೆ. ತಾಲ್ಲೂಕಿನ ಗೌಡನಹಳ್ಳಿ ಗಾರಂಪಳ್ಳಿ ಮತ್ತು ಮೊಗದಂಪುರ ಗ್ರಾಮದ 25 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತಿದೆ.ರಾಜಕುಮಾರ ಗೋವಿನ್, ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ, ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.