ADVERTISEMENT

ರೈತ ದಿನಾಚರಣೆ ವಿಶೇಷ ಲೇಖನ: ಕೃಷಿ ಮಂತ್ರವಾದ ಕಲ್ಪವೃಕ್ಷ

ಕೃಷಿಗಾಗಿ ಜರ್ಮನಿಯಿಂದ ತಾಯ್ನಾಡಿಗೆ ಮರಳಿದ ಶ್ರೀನಿಧಿ ಪಾಟೀಲ ದಂಪತಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 3:14 IST
Last Updated 23 ಡಿಸೆಂಬರ್ 2025, 3:14 IST
ಚಿಮ್ಮನಚೋಡದ ತಮ್ಮ ತೋಟದಲ್ಲಿರುವ ತೆಂಗಿನ ಸಸಿಗಳಿಗೆ ತೆಂಗಿನ ಕಾಯಿಯ ಸಿಪ್ಪೆಯ ಪುಡಿ ಹಾಕುತ್ತಿರುವ ಶ್ರೀನಿಧಿ ಪಾಟೀಲ
ಚಿಮ್ಮನಚೋಡದ ತಮ್ಮ ತೋಟದಲ್ಲಿರುವ ತೆಂಗಿನ ಸಸಿಗಳಿಗೆ ತೆಂಗಿನ ಕಾಯಿಯ ಸಿಪ್ಪೆಯ ಪುಡಿ ಹಾಕುತ್ತಿರುವ ಶ್ರೀನಿಧಿ ಪಾಟೀಲ   

ಚಿಂಚೋಳಿ: ಇವರ ತೋಟಕ್ಕೆ ಹೋದರೆ ಅದೊಂದು ಕೃಷಿಯ ಪ್ರಯೋಗ ಶಾಲೆಯಂತೆ ಗೋಚರಿಸುತ್ತದೆ. ಎಲ್ಲಿ ನೋಡಿದರಲ್ಲಿ ತೆಂಗಿನ ಕಾಯಿ ಸುಲಿದ ಸಿಪ್ಪೆಯ ಮತ್ತು ಎಳನೀರು ಕುಡಿದು ಬಿಸಾಕಿದ ತೆಂಗಿನ ಕಾಯಿಯ ಚಿಪ್ಪುಗಳ ರಾಶಿ ಕಾಣುತ್ತದೆ. ಜೊತೆಗೆ ನಿರ್ವಹಣೆಗಾಗಿ ಕಾಯುತ್ತಿದ್ದ ಹಲವು ದಶಕಗಳ ಹಳೆಯದಾದ ಗಗನ ಚುಂಬಿಸುವ ತೆಂಗಿನ ಮರಗಳು ಸ್ವಾಗತಿಸುತ್ತವೆ.

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಶ್ರೀನಿಧಿ ಪಾಟೀಲ ಮತ್ತು ವರ್ಷಾ ಪಾಟೀಲ ದಂಪತಿ ರಾಸಾಯನಿಕ ಮುಕ್ತ ಕೃಷಿಗಾಗಿ ಹಲವು ಪ್ರಯೋಗ ನಡೆಸುತ್ತ ಗಮನ ಸೆಳೆದಿದ್ದಾರೆ. ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಶ್ರೀನಿಧಿ ಜರ್ಮನ್‌ನಲ್ಲಿ ನೆಲೆಸಿದ್ದರು. ಕೋವಿಡ್‌ ಸಮಯದಲ್ಲಿ ಭಾರತಕ್ಕೆ ಬಂದಾಗ ತಮ್ಮ ತೋಟದ ಅಭಿವೃದ್ಧಿ ಕಡೆಗೆ ಗಮನ ಹರಿಸಿದರು. ಕೋವಿಡ್‌ ನಂತರ ಮತ್ತೆ ಜರ್ಮನ್‌ಗೆ ತೆರಳಿದ್ದರೂ, ಸ್ವಗ್ರಾಮದಲ್ಲಿದ್ದ ಪಿತ್ರಾರ್ಜಿತ 10 ಎಕರೆ ಜಮೀನಿನಲ್ಲಿ ತೆಂಗು, ನಿಂಬೆ, ಸೀಬೆ ಬೇಸಾಯಕ್ಕೆ ಮುಂದಾದರು.

ರಾಜಮಂಡ್ರಿಯಿಂದ ಸಸಿ ತಂದು ನೆಟ್ಟರು. ಆದರೆ, ಸೀಬೆ ಗಿಡಗಳು ಒಣಗಿದವು. ಶೇ 5 ನಿಂಬೆ ಹಾಗೂ ತೆಂಗಿನ ಸಸಿಗಳು ಒಣಗಿದವು. ಜರ್ಮನಿಯಿಂದಲೇ ತೋಟ ನಿರ್ವಹಣೆ ಮಾಡುವುದು ಕಷ್ಟವಾಯಿತು. ಆಗ ಉದ್ಯೋಗಕ್ಕೆ ರಾಜೀನಾಮೆ ನೀಡಿ ತಾಯ್ನಾಡಿಗೆ ಮರಳುವ ತೀರ್ಮಾನ ಮಾಡಿದರು. ಪತ್ನಿ ವರ್ಷಾ ಅವರು ಪತಿಯ ಅಭಿಪ್ರಾಯಕ್ಕೆ ಸಮ್ಮತಿಸಿದರು. ತಾಯ್ನಾಡಿಗೆ ಬಂದು ಮೂರು ತಿಂಗಳಿನಿಂದ ಸ್ವಂತ ಬೇಸಾಯದಲ್ಲಿ ತೊಡಗಿದ್ದಾರೆ.

ADVERTISEMENT

ರೈತರು ರಾಸಾಯನಿಕಗಳನ್ನು ಬಳಸಿ ಹೆಚ್ಚು ಖರ್ಚು ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಆದರೆ, ಶ್ರೀನಿಧಿ ಅವರ ಬಂಡವಾಳ ಎಂದರೆ ಕುಡಿದು ಬಿಸಾಕಿದ ಎಳನೀರಿನ ಚಿಪ್ಪು, ತೆಂಗಿನ ಕಾಯಿ ಸುಲಿದ ನಂತರ ದೊರೆಯುವ ಸಿಪ್ಪೆ. ಇವುಗಳನ್ನು ಟ್ರ್ಯಾಕ್ಟರ್‌ನಲ್ಲಿ ಕಲಬುರಗಿ ನಗರದಿಂದ ಚಿಮ್ಮನಚೋಡ ಗ್ರಾಮದ ತೋಟಕ್ಕೆ ತಂದು ಒಂದೆಡೆ ಗುಡ್ಡೆ ಹಾಕಿದಾಗ ಜನ ನಗುತ್ತಿದ್ದರು. ಆದರೆ, ಈಗ ಇವರ ಪ್ರಯೋಗ ಯಶಸ್ಸು ಗಳಿಸಿದ್ದು ಬೇರೆ ರೈತರು ಇಣುಕಿ ನೋಡುವಂತಾಗಿದೆ.

ಒಂದೂವರೆ ವರ್ಷದ ಹಿಂದೆ ರಾಜಮಂಡ್ರಿಯಿಂದ ತೆಂಗಿನ ಸಸಿಗಳನ್ನು ತಂದು ನೆಟ್ಟಿದ್ದರು. ಅವುಗಳು ನಿರೀಕ್ಷೆಯಂತೆ ನೆಲಬಿಟ್ಟು ಮೇಲೆಳಲಿಲ್ಲ. ಇದಕ್ಕೆ ತನ್ನದೇ ಆದ ಪರಿಹಾರ ಹುಡುಕುತ್ತ ಹೋದ ಶ್ರೀನಿಧಿ ಪಾಟೀಲ ತೆಂಗಿನ ಕಾಯಿಯ ಸಿಪ್ಪೆ ತಂದು ಅವುಗಳನ್ನು ಸಂಸ್ಕರಿಸಿ ಪುಡಿ ಮಾಡಿ ಅದನ್ನು ಗಿಡದ ಸುತ್ತಲೂ ಪಾತಿ ಮಾಡಿದ ಸ್ಥಳದಲ್ಲಿ ಹಾಕಿದರು.

ಕೆಲವು ಕಡೆ ಸಸಿ ಕಾಂಡಕ್ಕೆ ತಗುಲುವಂತೆ ಹಾಕಿದ್ದರಿಂದ ಅಧಿಕ ಉಷ್ಣಾಂಶದಿಂದ ಅಲ್ಲಲ್ಲಿ ಕೆಳ ಭಾಗದ ಎಲೆಗಳು ಒಣಗಿದಂತೆ ಗೋಚರಿಸಿವೆ. ಇದರಿಂದ ಹೊಲದಲ್ಲಿ ತೇವಾಂಶ ಹೆಚ್ಚಾಯಿತು. ಇಂಗಾಲದ ಪ್ರಮಾಣ ವೃದ್ಧಿಸಿತು. ಎರೆಹುಳುಗಳ ಸಂಖ್ಯೆ ಹೆಚ್ಚಿತು. ಮಣ್ಣಿನ ಫಲವತ್ತತೆ ಹೆಚ್ಚಾಗುವುದರ ಜತೆಗೆ ತೆಂಗಿನ ಸಿಪ್ಪೆ ಹರಡಿದ ಸ್ಥಳದಲ್ಲಿ ಕಳೆ ಬೆಳೆಯದೇ ಕಳೆ ವಿರೋಧಿಯಾಗಿಯೂ ಗಮನ ಸೆಳೆಯಿತು.

ಇದಕ್ಕಾಗಿಯೇ ಇವರು ತೆಂಗಿನ ಚಿಪ್ಪುಗಳನ್ನು ಪುಡಿ ಮಾಡುವ ಯಂತ್ರ ತಂದು ಬಳಸುತ್ತಿದ್ದಾರೆ. 6 ತಿಂಗಳ ಹಿಂದೆ ಕಳಾಹೀನಗೊಂಡಿದ್ದ ತೆಂಗಿನ ಸಸಿಗಳು ಈಗ ನಳನಳಿಸುವಂತಾಗಿದೆ. ಇದರ ಜತೆಗೆ ನಿಂಬೆ ಗಿಡಗಳು ಚಿಗುರತೊಡಗಿದ್ದು, ನಿರ್ವಹಣೆಯಿಲ್ಲದೇ ಕಳಾಹೀನಗೊಂಡಿದ್ದ ದಶಕಗಳ ಹಿಂದಿನ ತೆಂಗಿನ ಮರಗಳು ಗರಿಬಿಟ್ಟು ಒಂದೊಂದು ಗಿಡದಲ್ಲಿ ನೂರಾರು ಕಾಯಿಗಳ ಫಲಹೊತ್ತು ಕಣ್ಣು ಕುಕ್ಕುತ್ತಿವೆ. ಹೊಸ ಪ್ರಯೋಗ ಫಲ ನೀಡಿದೆ. ಎಳನೀರಿನ ಹಿತ ಹೆಚ್ಚಾಗಿದ್ದು, ಕಾಯಿಯಲ್ಲಿ ನೀರು ಜಾಸ್ತಿಯಾಗಿದೆ ಎನ್ನುತ್ತಾರೆ ಶ್ರೀನಿಧಿ ಪಾಟೀಲ.

ರಾಸಾಯನಿಕ ಯೂರಿಯಾ ತೊರೆದು ಪರ್ಯಾಯ ಯೂರಿಯಾ ತಯಾರಿಗೆ ಇವರು ಮೀನುಮಾಂಸ ಮತ್ತು ಬೆಲ್ಲದ ಮೊರೆ ಹೋಗಿದ್ದಾರೆ. ಮೀನುಮಾಂಸ, ಬೆಲ್ಲ ಎರಡೂ ಸಮಪ್ರಮಾಣದಲ್ಲಿ ತಂದು ಬ್ಯಾರಲ್‌ನಲ್ಲಿ 90 ದಿನ ಕೊಳೆ ಹಾಕಬೇಕು. 2/3 ದಿನಕ್ಕೊಮ್ಮೆ ಅದರ ಮುಚ್ಚಳ ತೆರೆದು ಒಂದೆರಡು ನಿಮಿಷ ಬಿಟ್ಟು ಮತ್ತೆ ಮುಚ್ಚಬೇಕು. ಹೀಗೆ ಮಾಡುವ ಮೂಲಕ ಇವರು ಫಿಶ್ ಅಮೈನೋ ಎಸಿಡ್ ತಯಾರಿಸಿ ಪರ್ಯಾಯ ಯುರಿಯಾ ರೂಪದಲ್ಲಿ ಬಳಸುತ್ತಿದ್ದಾರೆ. ಇದು 1 ಲೀಟರ್ ನೀರಿಗೆ 1 ಎಂ.ಎಲ್‌ನಂತೆ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬಹುದು. ಇಲ್ಲವೇ ಡ್ರೆಂಚ್ ನೀರಿನಲ್ಲಿ ಹರಿಸಿ ಬೆಳೆಗಳಿಗೆ ಒದಗಿಸಬಹುದು. ಇದರಿಂದ ಬೆಳೆಗಳ ಬೆಳವಣಿಗೆ ಸುಧಾರಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ (ಶ್ರೀನಿಧಿ ಪಾಟೀಲ ಮೊ: 9071179999) ಸಂಪರ್ಕಿಸಬಹುದು. 

ತಮ್ಮ ತೋಟದಲ್ಲಿ ತೆಂಗಿನ ಗಿಡಗಳ ಮಧ್ಯೆ ಹರಡಿದ ತೆಂಗಿನಕಾಯಿ ಸಿಪ್ಪೆಯ ಪುಡಿ ತೋರಿಸುತ್ತಿರುವ ರೈತ ಶ್ರೀನಿಧಿ ಪಾಟೀಲ
ಯಂತ್ರದ ಸಹಾಯದಿಂದ ತೆಂಗಿನ ಕಾಯಿಯ ಚಿಪ್ಪು ಮತ್ತು ಸಿಪ್ಪೆ ಪುಡಿ ಮಾಡುತ್ತಿರುವುದು
ತೆಂಗಿನ ಕಾಯಿಗಳ ಚಿಪ್ಪುಗಳು
ತೆಂಗಿನ ಕಾಯಿಯ ಚಿಪ್ಪುಗಳು ಪುಡಿ ಮಾಡಿದ ನಂತರ ದೊರೆತ ಸಿಪ್ಪೆ
ಚಿಕ್ಕ ಪ್ಲಾಸ್ಟಿಕ್ ಡಬ್ಬಿಯಲ್ಲಿ ಫಿಶ್ ಅಮೈನೊ ಎಸಿಡ್ ತಯಾರಿಸಿರುವುದನ್ನು ಶ್ರೀನಿಧಿ ಪಾಟೀಲ ತೋರಿಸಿದರು
ಪರ್ಯಾಯ ಯೂರಿಯಾ ಎಂದು ಕರೆಯುವ ಮೀನುಮಾಂಸ ಮತ್ತು ಬೆಲ್ಲ ಕೊಳೆ ಹಾಕಿ ಫಿಶ್ ಅಮೈನೊ ಎಸಿಡ್ ತಯಾರಿಸಲು ಡ್ರಮ್‌ನಲ್ಲಿ ಕೊಳೆಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.