ADVERTISEMENT

ಸೇಡಂ: ಮೈದುಂಬಿದ ಕಾಗಿಣಾ ನದಿ ದಾಟಿದ ಅಪ್ಪ-ಮಗಳು

ನದಿ ಸೇತುವೆ ನಿರ್ಮಾಣಕ್ಕೆ ಹಲವರ ಒತ್ತಾಯ

ಅವಿನಾಶ ಬೋರಂಚಿ
Published 24 ಜುಲೈ 2025, 5:06 IST
Last Updated 24 ಜುಲೈ 2025, 5:06 IST
ಸೇಡಂನ ಕಾಗಿಣಾ ನದಿ ನೀರಿನ ಪ್ರವಾಹದಲ್ಲಿಯೇ, ಮಗಳ ಕೈಹಿಡಿದು ನದಿ ದಾಟುತ್ತಿರುವುದು
ಸೇಡಂನ ಕಾಗಿಣಾ ನದಿ ನೀರಿನ ಪ್ರವಾಹದಲ್ಲಿಯೇ, ಮಗಳ ಕೈಹಿಡಿದು ನದಿ ದಾಟುತ್ತಿರುವುದು   

ಸೇಡಂ: ತಾಲ್ಲೂಕಿನ ಯಡ್ಡಳ್ಳಿ-ಸಂಗಾವಿ(ಟಿ) ಗ್ರಾಮದ ಮಧ್ಯೆ ಇರುವ ಕಾಗಿಣಾ ನದಿ ಸೇತುವೆ ಮೇಲೆ ಅಪ್ಪ-ಮಗಳು ಜೀವ ಭಯದಲ್ಲಿಯೇ ನದಿ ದಾಟಿದ ಪ್ರಸಂಗ ಬುಧವಾರ ಬೆಳಿಗ್ಗೆ ನಡೆದಿದೆ.

ತಾಲ್ಲೂಕಿನ ಸಂಗಾವಿ (ಟಿ) ಗ್ರಾಮದ ಭೀಮಶ್ಯಾ ಮತ್ತು ಆತನ ಪುತ್ರಿ ರಾಣಿಯನ್ನು ಹರಿಯುವ ನೀರಿನಲ್ಲಿ ಮುಳುಗಡೆಗೊಂಡಿರುವ ಸೇತುವೆ ಮೂಲಕ ನದಿ ದಾಟಿಸಿದ್ದಾರೆ.

ರಾಣಿ ಸೇಡಂನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 6ನೇ ಸೆಮಿಸ್ಟರ್ ವಿದ್ಯಾರ್ಥಿನಿ. ಬುಧವಾರ ಹಿಂದಿ ಪರೀಕ್ಷೆ ಬರೆಯಬೇಕಿರುವ ಅನಿವಾರ್ಯತೆಯಿಂದ ಮಗಳನ್ನು ಕರೆದುಕೊಂಡು ಸೇಡಂಗೆ ಹೊರಟಾಗ ಕಾಗಿಣಾ ನದಿಯಲ್ಲಿ ನೀರಿನ ಪ್ರವಾಹದಲ್ಲಿಯೇ, ಮಗಳ ಬ್ಯಾಗ್ ಹೆಗಲಿಗೆ ಹಾಕಿಕೊಂಡು, ಮಗಳ ಕೈಹಿಡಿದು ನದಿ ದಾಟಿಸಿದ್ದಾರೆ.

ADVERTISEMENT

ನಂತರ ಮಧ್ಯಾಹ್ನ ಪುನಃ ಕಾಲೇಜಿನಿಂದ ಬರುವಾಗಲೂ ಸಹ ಮಗಳನ್ನು ನದಿಯಿಂದ ದಾಟಿಸಿ ಕರೆದುಕೊಂಡು ಬಂದಿದ್ದಾರೆ. ತಂದೆ-ಮಗಳು ನದಿ ದಾಟುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೇತುವೆ ನಿರ್ಮಿಸಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.

ಎರಡು ದಿನಗಳಿಂದ ಗ್ರಾಮದ ಶಾಲೆ ಬಂದ್: ಸಂಗಾವಿ (ಟಿ) ಗ್ರಾಮಸ್ಥರು ಸೇಡಂಗೆ ತೆರಳಬೇಕಾದರೆ ಕಾಗಿಣಾ ನದಿ ಸೇತುವೆ ದಾಟಿ ಯಡ್ಡಳ್ಳಿ ಗ್ರಾಮದ ಮೂಲಕ ತೆರಳಬೇಕು. ಎರಡು ದಿನಗಳಿಂದ ನಿರಂತರ ಮಳೆ ಬರುತ್ತಿರುವುದರಿಂದ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದ್ದು, ಸೇತುವೆ ಮುಳುಗಿದೆ. ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಎರಡು ದಿನಗಳಿಂದ ಬಂದ್ ಆಗಿದೆ.

ಸಂಗಾವಿ(ಟಿ) ಗ್ರಾಮಕ್ಕೆ ಜಲ ದಿಗ್ಬಂಧನ:  ಸಂಗಾವಿ (ಟಿ) ಗ್ರಾಮದ ಸುತ್ತಲೂ ನದಿ ನೀರು ಇರುವುದರಿಂದ ಗ್ರಾಮಸ್ಥರು ನದಿ ದಾಟುವ ಅನಿವಾರ್ಯತೆ ಇದೆ. ಕುರಕುಂಟಾದ ಹಳ್ಳ ಮತ್ತು ಕಾಗಿಣಾ ನದಿ ನೀರು ಗ್ರಾಮದ ಸುತ್ತುವರಿದಿದೆ. ಗ್ರಾಮದಿಂದ ಸುಮಾರು 30ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಸೇಡಂಗೆ ತೆರಳುತ್ತಾರೆ. ಕೂಲಿ ಕಾರ್ಮಿಕರು, ರೈತರು ಹೀಗೆ ನೂರಾರು ರೈತರು ನಿತ್ಯವು ಸಂಚಾರಕ್ಕೆ ಇದೆ ಮಾರ್ಗ. ಸಂಪರ್ಕ ಕಡಿತದಿಂದಾಗಿ ಗ್ರಾಮದಿಂದ ಯಾರೂ ಸಹ ಹೊರಗಡೆ ಹೋಗಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಗ್ರಾಮಸ್ಥ ಶಾಬೋದ್ದಿನ್ ಸಂಗಾವಿ.

ಸೇಡಂಗೆ ಹೋಗಲು ಕಾಗಿಣಾ ನದಿ ದಾಟಿಯೇ ಹೋಗಬೇಕು. ಮಗಳು ಪರೀಕ್ಷೆ ಕುಳಿತುಕೊಳ್ಳಬೇಕಾದ ಅನಿವಾರ್ಯದಿಂದ ಗಟ್ಟಿಮನಸ್ಸು ಮಾಡಿ ಇಬ್ಬರು ಧೈರ್ಯದಿಂದ ನದಿ ದಾಟಿದ್ದೇವೆ.
ಭೀಮಶ್ಯಾ ಗ್ರಾಮಸ್ಥ
ಮಳೆ ಬಂದಾಗಲೆಲ್ಲ ಸೇತುವೆ ನದಿ ನೀರಿನಲ್ಲಿ ಮುಳುಗುತ್ತದೆ. ನೂತನ ಸೇತುವೆ ನಿರ್ಮಿಸುವಂತೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಮನವಿ ಮಾಡಿದ್ದೇವೆ.
ಶಾಬೋದ್ದಿನ್ ಗ್ರಾಮಸ್ಥ
ಪದವಿ ಅಂತಿಮ ವರ್ಷದ ಐಚ್ಛಿಕ ಹಿಂದಿ ಪರೀಕ್ಷೆ ಇದ್ದುದ್ದರಿಂದ ವಿದ್ಯಾರ್ಥಿನಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.
ಪಂಡಿತ.ಬಿ.ಕೆ ಪ್ರಾಚಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇಡಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.