ADVERTISEMENT

ಕನ್ನಡ ಸಾಹಿತ್ಯಕ್ಕೆ ಕಲ್ಯಾಣದ ಕೊಡುಗೆ ಅಪಾರ: ಸಿದ್ಧರಾಮ ಹೊನ್ಕಲ್‌

ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 14:35 IST
Last Updated 18 ಜುಲೈ 2024, 14:35 IST
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸೇವಾ ನಿವೃತ್ತರಾದ ಸೂರ್ಯಕಾಂತ ಸುಜ್ಯಾತ್ ಹಾಗೂ ಪತ್ನಿಯನ್ನು ಸನ್ಮಾನಿಸಲಾಯಿತು. ಎಚ್‌.ಟಿ.ಪೋತೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸೇವಾ ನಿವೃತ್ತರಾದ ಸೂರ್ಯಕಾಂತ ಸುಜ್ಯಾತ್ ಹಾಗೂ ಪತ್ನಿಯನ್ನು ಸನ್ಮಾನಿಸಲಾಯಿತು. ಎಚ್‌.ಟಿ.ಪೋತೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು   

ಕಲಬುರಗಿ: ‘ಕನ್ನಡ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕದ ಲೇಖಕರ, ಅನುವಾದಕರ ಕೊಡುಗೆ ಅನನ್ಯವಾಗಿದೆ. ಕನ್ನಡದ ಆದ್ಯಕೃತಿ ಶ್ರೀವಿಜಯ ವಿರಚಿತ ಕವಿರಾಜಮಾರ್ಗ ಕೃತಿ ಹಾಗೂ 12ನೇ ಶತಮಾನದ ವಚನಾಂದೋಲನ ಕ್ರಾಂತಿ ಕನ್ನಡ ಜಗತ್ತಿಗೆ ಮಾದರಿಯಾಗಿತ್ತು ಎಂಬುದು ನಮ್ಮೆಲ್ಲರ ಹೆಮ್ಮೆ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿದ್ಧರಾಮ ಹೊನ್ಕಲ್‌ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರೊ. ಸೂರ್ಯಕಾಂತ ಸುಜ್ಯಾತ್ ಹಾಗೂ ಪ್ರೊ. ವೆಂಕಣ್ಣ ಡೊಣ್ಣೆಗೌಡ ಅವರ ಸೇವಾ ನಿವೃತ್ತಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು.

‘ಕನ್ನಡ ಸಾಹಿತ್ಯ ಹುಲುಸಾಗಿ ಬೆಳೆಯಲು ಅನುಕೂಲಕರ ವಾತಾವರಣವಿದೆ. ಈ ದಿಸೆಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯು ಕ್ರಿಯಾಶೀಲವಾಗಿ ಕಾರ್ಯೋನ್ಮುಖವಾಗಿದೆ. ನಿವೃತ್ತಗೊಂಡ ಶಿಕ್ಷಕರಿಗೆ ಸನ್ಮಾನ ಮಾಡುತ್ತಿರುವುದು ಇದೊಂದು ಸತ್‌ಪರಂಪರೆಯಾಗಿದೆ. ಸೂರ್ಯಕಾಂತ ಸುಜ್ಯಾತ್ ಅವರು ಸೃಜನಶೀಲ ಮತ್ತು ಅನುವಾದ ಸಾಹಿತ್ಯದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಕನ್ನಡ ಸಾರಸ್ವತಲೋಕಕ್ಕೆ 17 ಕೃತಿ ಅರ್ಪಿಸಿದ್ದಾರೆ’ ಎಂದರು.

ADVERTISEMENT

ಪ್ರೊ. ದಸ್ತಗೀರಸಾಬ್‌ ದಿನ್ನಿ ಮಾತನಾಡಿ, ‘ಸುಜ್ಯಾತ್ ಬಡತನ, ಶೋಷಣೆ, ಅವಮಾನ, ವೈಚಾರಿಕತೆ ಮಾನವೀಯ ಮೌಲ್ಯಗಳನ್ನು ಒಳಗೊಂಡ ಕೃತಿಗಳನ್ನು ರಚಿಸಿದ್ದಾರೆ. ಸಂಖ್ಯೆಗಿಂತ ಮೌಲ್ಯ, ಗಟ್ಟಿಯಾದ ಬರಹ ಮುಖ್ಯವೆಂದುಕೊಂಡು ವಸ್ತುನಿಷ್ಠವಾಗಿ ಕಟ್ಟಿಕೊಟ್ಟಿದ್ದಾರೆ’ ಎಂದು ಅವರ ಕೃತಿಗಳ ಮೇಲೆ ಬೆಳಕು ಚೆಲ್ಲಿದರು.

ಪ್ರೊ. ವೆಂಕಣ್ಣ ಡೊಣ್ಣೇಗೌಡ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ.ಎಚ್.ಟಿ.ಪೋತೆ ಮಾತನಾಡಿದರು. ಶ್ರೀಶೈಲ ನಾಗರಾಳ ಉಪಸ್ಥಿತರಿದ್ದರು. ಪ್ರೊ. ಸುನೀಲ ಜಾಬಾದಿ ನಿರೂಪಿಸಿದರು. ಪ್ರೇಮ ಅಪಚಂದ ಸ್ವಾಗತಿಸಿದರು, ಕೃಷ್ಣ ಕಾಕಲವಾರ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.