ADVERTISEMENT

ಎರಡನೇ ಹಂತದ ಚುನಾವಣೆ ಸಂತೆ, ಜಾತ್ರೆ ನಿಷೇಧ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 3:11 IST
Last Updated 23 ಡಿಸೆಂಬರ್ 2020, 3:11 IST

ಕಲಬುರ್ಗಿ: ಗ್ರಾಮ ಪಂಚಾಯಿತಿಯ ಎರಡನೇ ಹಂತದ ಚುನಾವಣೆಯು ಜಿಲ್ಲೆಯಲ್ಲಿ ಡಿಸೆಂಬರ್ 27ರಂದು ನಡೆಯಲಿದೆ. ಚುನಾವಣೆಯನ್ನು ಮುಕ್ತ, ಶಾಂತಿಯುತ ಹಾಗೂ ನ್ಯಾಯಸಮ್ಮತವಾಗಿ ಜರುಗಿಸಲು ಚುನಾವಣೆ ನಡೆಯುವ ಗ್ರಾಮ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಗೆ ಅನ್ವಯಿಸುವಂತೆ ಮತದಾನ ದಿನದಂದು ಎಲ್ಲಾ ರೀತಿಯ ಸಂತೆ ಮತ್ತು ಜಾತ್ರೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ವಿ.ವಿ.ಜ್ಯೋತ್ಸ್ನಾ ಅವರು ಮಂಗಳವಾರ ಆದೇಶ ಹೊರಡಿಸಿದ್ದಾರೆ.

ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ (ಮತದಾನ ಮುಕ್ತಾಯಕ್ಕೆ 48 ಗಂಟೆ ಮುಂಚೆ) ಮತದಾನ ಮುಕ್ತಾಯಕ್ಕೆ 2 ದಿನ ಮುನ್ನ ಅಂದರೆ 2020ರ ಡಿಸೆಂಬರ್ 25ರ ಸಾಯಂಕಾಲ 5 ಗಂಟೆಯಿಂದ ಡಿಸೆಂಬರ್ 27 ಸಂಜೆ 5 ಗಂಟೆಯವರೆಗೆ ಎಲ್ಲಾ ತರಹದ ಮದ್ಯದ ಅಂಗಡಿಗಳನ್ನು ಸೇರಿದಂತೆ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚುವಂತೆ ಸಹ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಮತದಾನ ಕೇಂದ್ರದ 100 ಮೀಟರ್ ವ್ಯಾಪ್ತಿಯೊಳಗೆ ಸಿ.ಆರ್.ಪಿ.ಸಿ. ಕಾಯ್ದೆ 1973ರ ಕಲಂ 144ರ ಅನ್ವಯ ಚುನಾವಣೆಗೆ ಸಂಬಂಧಪಟ್ಟ ಮತದಾರರು ಹಾಗೂ ಸಿಬ್ಬಂದಿ ಹೊರತುಪಡಿಸಿ ಇತರೆ ವ್ಯಕ್ತಿಗಳ ಪ್ರವೇಶ ನಿರ್ಬಂಧಿಸಲಾಗಿದೆ.

ವೇತನ ಸಹಿತ ರಜೆ ಘೋಷಣೆ: ಇದೇ ಡಿಸೆಂಬರ್ 27ರಂದು ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೋಂದಾಯಿಸಿರುವ ಅರ್ಹ ಮತದಾರರು ಮತ ಚಲಾಯಿಸಲು ಅನುಕೂಲವಾಗುವಂತೆ ಎಲ್ಲಾ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಕಚೇರಿಗಳ ಸರ್ಕಾರಿ ನೌಕರರು, ಶಾಲಾ ಕಾಲೇಜುಗಳ (ಅನುದಾನಿತ ಶಿಕ್ಷಣ ಶಿಕ್ಷಣ ಸಂಸ್ಥೆಗಳು ಒಳಗೊಂಡಂತೆ) ಸರ್ಕಾರಿ ನೌಕರರಿಗೆ ಮತದಾನ ದಿನದಂದು ವೇತನ ಸಹಿತ ರಜೆಯನ್ನು ಘೋಷಿಸಲಾಗಿದೆ.

ADVERTISEMENT

ಇದಲ್ಲದೆ ವ್ಯವಹಾರಿಕ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಅಥವಾ ಇನ್ನಿತರ ಸಾರ್ವಜನಿಕ ಸಂಸ್ಥೆಗಳಲ್ಲಿ ಖಾಯಂ ಹಾಗೂ ದಿನಗೂಲಿ ಮೇಲೆ ಕಾರ್ಯನಿರ್ವಹಿಸುತ್ತಿರುವ ನೌಕರರು ಸಹ ಮತದಾನ ದಿನದಂದು ವೇತನ ಸಹಿತ ರಜೆ ಪಡೆಯಲು ಅರ್ಹರಿರುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.