ಪ್ರವೀಣಕುಮಾರ್, ಪಿಡಿಒ
ಕಲಬುರಗಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಹೇಳನ ಮಾಡುವ ರೀತಿಯಲ್ಲಿ ಮೊಬೈಲ್ ಸ್ಟೇಟಸ್ ಇಟ್ಟುಕೊಂಡಿದ್ದ ಜಿಲ್ಲೆಯ ಆಳಂದ ತಾಲ್ಲೂಕಿನ ಸುಂಟನೂರ ಗ್ರಾಮ ಪಂಚಾಯಿತಿ ಪಿಡಿಒ ಪ್ರವೀಣಕುಮಾರ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆಗಸ್ಟ್ 21ರಂದು ಆರೋಪಿ ಪ್ರವೀಣಕುಮಾರ್ ತಮ್ಮ ಮೊಬೈಲ್ ನಲ್ಲಿ ಸಿದ್ರಾಮುಲ್ಲಾಖಾನ್ ಎಂಬ ಬರಹದ ಜೊತೆಗೆ ಸಿದ್ದರಾಮಯ್ಯ ಅವರ ತಲೆಗೆ ಮುಸ್ಲಿಮರು ಧರಿಸುವ ಟೊಪ್ಪಿಗೆ ಹಾಕಿರುವಂತೆ ಎಡಿಟ್ ಮಾಡಲಾದ ಚಿತ್ರವನ್ನು ಸ್ಟೇಟಸ್ ಇಟ್ಟುಕೊಂಡಿದ್ದರು.
ಇದನ್ನು ಗಮನಿಸಿದ ಸುಂಟನೂರ ಗ್ರಾಮದ ಮುಖಂಡ ಮಲ್ಲಿಕಾರ್ಜುನ ಡಣ್ಣೂರ ಪೊಲೀಸರಿಗೆ ದೂರು ನೀಡಿದ್ದರು.
ಗ್ರಾಮದ ಮುಖಂಡ ಮಹಾಲಿಂಗಪ್ಪ ಹರವಾಳ, ಆಳಂದ ತಾಲ್ಲೂಕು ಕುರುಬರ ಸಂಘದ ಯುವ ಘಟಕದ ಅಧ್ಯಕ್ಷ ಬೀರಣ್ಣಾ ಪೂಜಾರಿ ಅವರು ಪಿಡಿಒ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ದೂರು ಆಧರಿಸಿ ನಿಂಬರ್ಗಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
'ಪಿಡಿಒ ಪ್ರವೀಣಕುಮಾರ್ ವಿರುದ್ಧ ಎಫ್ಐಆರ್ ದಾಖಲಾದ ಮಾಹಿತಿ ಹಾಗೂ ಗ್ರಾಮಸ್ಥರು ದೂರು ನೀಡಿರುವ ಕುರಿತು ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ ಅವರ ಗಮನಕ್ಕೆ ತರಲಾಗಿದ್ದು, ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದೇನೆ' ಎಂದು ಆಳಂದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ ಅವರು 'ಪ್ರಜಾವಾಣಿ'ಗೆ ಮಾಹಿತಿ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.