ಆಳಂದ: ತಾಲ್ಲೂಕಿನಲ್ಲಿ ಬುಧವಾರ ಸುರಿದ ಧಾರಾಕಾರ ಮಳೆ ಹಾಗೂ ನೆರೆಯ ಮಹಾರಾಷ್ಟ್ರದಿಂದ ಅಮರ್ಜಾ ನದಿ ವ್ಯಾಪ್ತಿಯಲ್ಲಿನ ಪ್ರವಾಹಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಕಂದಾಯ, ಕೃಷಿ ಇಲಾಖೆ ಅಧಿಕಾರಿಗಳು ಮಳೆ ಹಾನಿಯ ಪ್ರಾಥಮಿಕ ಸಮೀಕ್ಷೆ ಕೈಗೊಳ್ಳಲು ಅಧಿಕಾರಿಗಳಿಗೆ ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ತಿಳಿಸಿದರು.
ತಾಲ್ಲೂಕಿನ ಜೀರಹಳ್ಳಿ, ಶಕಾಪುರ, ಖಾನಾಪುರ, ಪಡಸಾವಳಿ, ಚಿಂಚೋಳಿ, ನಿರಗುಡಿ, ಸಾವಳೇಶ್ವರ, ಹಿರೋಳ್ಳಿ ಮತ್ತಿತರ ಗ್ರಾಮಗಳಿಗೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹಾನಿಯ ಕುರಿತು ಪರಿಶೀಲನೆ ನಡೆಸಿದರು.
ಸೆ.14ರಂದು ಕೃಷಿ, ಕಂದಾಯ, ತೋಟಗಾರಿಕೆ ಮತ್ತು ಗ್ರಾಪಂ ಪಿಡಿಒಗಳ ಸಭೆ ಮಾಡಲಾಗುವುದು. ಸಭೆಯಲ್ಲಿ ಆಯಾ ಗ್ರಾಮದಲ್ಲಿ ಮಳೆಗೆ ಹಾನಿಯಾದ ಬೆಳೆ ಹಾಗೂ ಪ್ರವಾಹದಿಂದ ಹಾನಿಗೊಳ್ಳಗಾದ ಸಂಪರ್ಕ ರಸ್ತೆ, ಸೇತುವೆ, ಸರ್ಕಾರಿ ಕಟ್ಟಡ ಮತ್ತು ರೈತರ ಹೊಲದಲ್ಲಿನ ಬಾವಿ, ಬದು ಮತ್ತು ಜಾನುವಾರುಗಳ ಸಮಗ್ರ ಸಮೀಕ್ಷೆ ವರದಿ ಪಡೆದು, ಸಂಕಷ್ಟದಲ್ಲಿರುವ ರೈತರ ನೆರವು ನೀಡುವಂತೆ ಚರ್ಚೆ ನಡೆಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಈ ಕುರಿತು ಸಿದ್ದತೆ ಮಾಡಿಕೊಳ್ಳಲು ಸ್ಥಳದಲ್ಲಿದ್ದ ತಹಶೀಲ್ದಾರ್ ಅಣ್ಣಾರಾವ ಪಾಟೀಲ ಅವರಿಗೆ ಬಿ.ಆರ್ ಪಾಟೀಲ ಸೂಚಿಸಿದರು.
ಕಳೆದ 50 ವರ್ಷದಲ್ಲಿ ನಮ್ಮೂರಿನಲ್ಲಿ ಈ ಪ್ರಮಾಣದಲ್ಲಿ ಹಳ್ಳದ ನೀರು ನುಗ್ಗಿ ಹಾನಿಯಾಗಿರಲಿಲ್ಲ, ನೆರೆಯ ಮಹಾರಾಷ್ಟ್ರದ ಗಡಿಯಲ್ಲಿ ಅಧಿಕ ಮಳೆ ಹಿನ್ನಲೆಯಲ್ಲಿ ತೊಗರಿ, ಸೋಯಾಬಿನ್ ಬೆಳೆ ಜತೆ ಹಳ್ಳದ ದಂಡೆಯಲ್ಲಿರುವ ಹಲವು ರೈತರ ಬೆಳೆ, ರಸ್ತೆ ಸಂಪೂರ್ಣ ಹಾಳಾಗಿದೆ ಎಂದು ಚಿಂಚೋಳಿ.ಬಿ ಗ್ರಾಮದ ರೈತ ಕಾಶಿನಾಥ ಫರತಾಪುರೆ ಅವರು ಶಾಸಕರ ಮುಂದೆ ಮಳೆಹಾನಿಯ ಭೀಕರತೆ ಬಿಚ್ಚಿಟ್ಟರು.
ಇದೇ ಸಂದರ್ಭದಲ್ಲಿ ವಿವಿಧ ಗ್ರಾಮದ ರೈತರೂ ಮಳೆ ಹಾನಿ ಕುರಿತು ತಮ್ಮ ಅಳಲು ತೋಡಿಕೊಂಡು ಪರಿಹಾರಕ್ಕೆ ಒತ್ತಾಯಿಸಿದರು. ತಹಶೀಲ್ದಾರ್ ಅಣ್ಣಾರಾವ ಪಾಟೀಲ, ಪಶು ಸಂಗೋಪನಾ ಜಿಲ್ಲಾ ಉಪ ನಿರ್ದೇಶಕ ಸಂಜಯ ರೆಡ್ಡಿ,ತಾಲ್ಲೂಕು ಅಧಿಕಾರಿ ಯಲ್ಲಪ್ಪ ಇಂಗಳೆ, ತಾಪಂ ಇಒ ಮಾನಪ್ಪ ಕಟ್ಟಿಮನಿ, ಎಇಇ ಸಂಗಮೇಶ ಬಿರಾದಾರ, ಸಿಪಿಐ ಪ್ರಕಾಶ ಯಾತನೂರು, ಕೃಷಿ ಅಧಿಕಾರಿ ಬನಸಿದ್ಧ ಬಿರಾದಾರ, ಹೊನ್ನಪ್ಪ ಅಳಗಿ, ರಜನೀಶ ಜಂಗಲೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.