ಕಲಬುರಗಿ: ಇತ್ತೀಚೆಗೆ ಕಲಬುರಗಿಯ ಬಹಮನಿ ಕೋಟೆಗೆ ಭೇಟಿ ನೀಡಿದ್ದ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಆಸ್ಟ್ರೇಲಿಯಾ, ಜರ್ಮನಿ, ಸ್ಪೇನ್ ದೇಶದ 27 ಪ್ರವಾಸಿಗರು ಕೋಟೆಯ ಜಾಮಿಯಾ ಮಸೀದಿ, ದರ್ಗಾ ಹಾಗೂ ಇತರೆ ಸ್ಮಾರಕಗಳನ್ನು ನೋಡಿ ಹೋಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದೇಶಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಬೇಬಿ ಮೊಗೇರ ತಿಳಿಸಿದ್ದಾರೆ.
‘ಕೋಟೆಯಲ್ಲಿ ಕೊಳಚೆ ನೀರು, ಕೋಟೆ ನೋಡದೇ ವಾಪಸಾದ ಪ್ರವಾಸಿಗರು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಇತ್ತೀಚೆಗೆ ಪ್ರಕಟವಾಗಿದ್ದ ವರದಿಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿರುವ ಅವರು, ‘ಇಂಡಿಯಾ ವಿಸ್ತಾಸ್ ಟ್ರಾವೆಲ್ಸ್ ಏಜೆನ್ಸಿಯ ಜಾರ್ಜ್ ಥಾಮಸ್ ನೇತೃತ್ವದಲ್ಲಿ ಪ್ರವಾಸಿಗರು ಕೋಟೆಯ ಹಿಂಬದಿಯಲ್ಲಿರುವ ಹಾಥಿ ಗೇಟ್ ದರ್ವಾಜಾ ಮೂಲಕ ಕೋಟೆಯಲ್ಲಿರುವ ಮಸೀದಿ, ದರ್ಗಾ, ಇತರೆ ಸ್ಮಾರಕಗಳನ್ನು ವೀಕ್ಷಣೆ ಮಾಡಿದ್ದಾಗಿ ತಿಳಿಸಿದ್ದಾರೆ. ಯಾವುದೇ ವಿದೇಶಿ ಪ್ರವಾಸಿಗರು ಕೋಟೆ ನೋಡದೇ ವಾಪಸ್ ಹೋಗಿಲ್ಲ ಎಂದು ತಿಳಿಸಿದ್ದಾರೆ. ಈ ತಂಡಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಪೀಟರ್ ವೆಬ್ ಅವರು ಇಲ್ಲಿರುವ ರಸ್ತೆ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ತೀವ್ರವಾದ ಬೇಸರ ವ್ಯಕ್ತಪಡಿಸಿದ್ದಾಗಿ ಜಾರ್ಜ್ ಥಾಮಸ್ ಮಾಹಿತಿ ನೀಡಿದ್ದಾರೆ. ಅವರು ಕೋಟೆಯಲ್ಲಿರುವ ಅವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆಯೇ ವಿನಃ ಕೋಟೆ ನೋಡದೆಯೇ ವಾಪಸ್ ಹೋಗಿಲ್ಲ’ ಎಂದಿದ್ದಾರೆ.
ಕಳೆದ ವರ್ಷ 204 ವಿದೇಶಿ ಪ್ರವಾಸಿಗರು ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇಬ್ಬರು ಪ್ರವಾಸಿ ಮಿತ್ರರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಭದ್ರತಾ ಸಿಬ್ಬಂದಿ ಕೋಟೆಯಲ್ಲಿ ಇರುತ್ತಾರೆ. ಕೋಟೆಗೆ ಭೇಟಿ ನೀಡಲಿರುವ ಪ್ರವಾಸಿಗರಿಗೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದ್ದು, ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.