ADVERTISEMENT

ಜೂನ್ 14ರಂದು ಆರೋಗ್ಯ ಆವಿಷ್ಕಾರ ಯೋಜನೆಗೆ ಅಡಿಗಲ್ಲು: ಡಾ.ಅಜಯ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:09 IST
Last Updated 3 ಜೂನ್ 2025, 13:09 IST
ಡಾ.ಅಜಯ್ ಸಿಂಗ್‌
ಡಾ.ಅಜಯ್ ಸಿಂಗ್‌   

ಕಲಬುರಗಿ: ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ವತಿಯಿಂದ ಹಮ್ಮಿಕೊಂಡ ‘ಆರೋಗ್ಯ ಆವಿಷ್ಕರ’ ಯೋಜನೆಯಡಿ ₹ 873 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭವು ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ಜೂನ್ 14ರಂದು ಜರುಗಲಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿಳಿಸಿದರು. 

‘ಅಂದಿನ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಸೇರಿದಂತೆ ಸಚಿವರು, ಶಾಸಕರು ಪಾಲ್ಗೊಳ್ಳುವರು’ ಎಂದು ಮಂಗಳವಾರ ಮಾಧ್ಯಮಗಳಿಗೆ ಹೇಳಿದರು.

‘ಆರೋಗ್ಯ ಆವಿಷ್ಕರ ಯೋಜನೆಯಡಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸದಾಗಿ 24 ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿ), 10 ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್‌ಸಿ), 7 ನಗರ ಪಿಎಚ್‌ಸಿ, ನಾಲ್ಕು ನಗರ ಸಿಎಚ್‌ಸಿ, 25 ಸಿಎಚ್‌ಸಿಗಳ ಹಾಸಿಗೆಗಳನ್ನು 30ರಿಂದ 50ಕ್ಕೆ ಹೆಚ್ಚಳ, 6 ಸಿಎಚ್‌ಸಿಗಳ ಹಾಸಿಗೆಗಳನ್ನು 30ರಿಂದ 100ಕ್ಕೆ ಏರಿಕೆ ಮಾಡಿ, ಅಗತ್ಯವಾದ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುವುದು’ ಎಂದರು.

ADVERTISEMENT

‘ಕಮಲಾಪುರದ ಸಮುದಾಯ ಆರೋಗ್ಯ ಕೇಂದ್ರದ ಹಾಸಿಗೆ ಸಾಮರ್ಥ್ಯವನ್ನು 100ಕ್ಕೆ ಏರಿಕೆಯಾಗಲಿದೆ. ಒಂಬತ್ತು ತಾಲ್ಲೂಕು ಆಸ್ಪತ್ರೆಗಳ ಬೆಡ್‌ಗಳನ್ನು 100ರಿಂದ 150ಕ್ಕೆ ಹೆಚ್ಚಿಸಲಾಗುವುದು. ಎರಡು ಉಪವಿಭಾಗ ಆಸ್ಪತ್ರೆಗಳನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗಳನ್ನಾಗಿ ಮೇಲ್ದರ್ಜೆಗೆ ಏರಿಕೆಯಾಗಲಿವೆ. ಇವುಗಳ ಜತೆಗೆ ಆಂಬುಲೆನ್ಸ್‌ಗಳು, ಡಯಾಲಿಸಿಸ್ ಕೇಂದ್ರಗಳ ಸ್ಥಾಪನೆ ಸೇರಿದಂತೆ 88 ಕೆಲಸಗಳಿಗೆ ಕೆಕೆಆರ್‌ಡಿಬಿಯು ಸುಮಾರು ₹ 400 ಕೋಟಿ ಅನುದಾನ ನೀಡುತ್ತಿದೆ. ಈ ಎಲ್ಲಾ ಯೋಜನೆಗಳಿಗೆ ಪಕ್ಷದ ನಾಯಕರು ಅಡಿಗಲ್ಲು ಹಾಕುವರು’ ಎಂದು ಮಾಹಿತಿ ನೀಡಿದರು.

‘ಆರೋಗ್ಯ ಕೇಂದ್ರಗಳ ನಿರ್ಮಾಣದ ಎಲ್ಲಾ ಅನುದಾನವನ್ನು ಕೆಕೆಆರ್‌ಡಿಬಿ ಕೊಡುತ್ತಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್, ಖನಿಜ ನಿಧಿಯಿಂದಲೂ ಅನುದಾನ ಬರುತ್ತಿದೆ. ನಮ್ಮ ಭಾಗದ ಹಳ್ಳಿಗರಿಗೆ ಆರೋಗ್ಯ ಸೇವೆಗಳು ಸಿಗಲಿ, ಮಂಡಳಿಯ ಅನುದಾನ ಸಮರ್ಪಕವಾಗಿ ಬಳಕೆಯಾಗಲಿ ಎಂಬ ಸದುದ್ದೇಶವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕ್ರಿಯಾ ಯೋಜನೆಗಳು ಸಲ್ಲಿಕೆಗೆ ಗಡುವು:

‘ರಾಜ್ಯ ಸರ್ಕಾರವು ₹ 5,000 ಕೋಟಿ ಅನುದಾನ ಕೊಡಲು ಬದ್ಧವಾಗಿದೆ. ಮಂಡಳಿಯ ಮೈಕ್ರೊ ಮತ್ತು ಮ್ಯಾಕ್ರೊ ಯೋಜನೆಗಳಿಗೆ ಕಲ್ಯಾಣ ಕರ್ನಾಟಕದ ಶಾಸಕರು ಜೂನ್ 30ರ ಒಳಗಾಗಿ ತಮ್ಮ ಕ್ಷೇತ್ರಗಳ ಕ್ರಿಯಾ ಯೋಜನೆಗಳನ್ನು ಸಲ್ಲಿಕೆ ಮಾಡಬೇಕು. ಕ್ರಿಯಾ ಯೋಜನೆಗಳು ಬೇಗ ಸಲ್ಲಿಕೆ ಮಾಡಿದರೆ ಈ ವರ್ಷದಲ್ಲಿ ₹ 4,500 ಕೋಟಿ ಖರ್ಚು ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಈ ವೇಳೆ ಶಾಸಕ ಅಲ್ಲಮಪ್ರಭು ಪಾಟೀಲ, ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ ಬಾಬು ಉಪಸ್ಥಿತರಿದ್ದರು.

ಪ್ರಜಾಸೌಧ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ

ಕಲ್ಯಾಣ ಕರ್ನಾಟಕ ಭಾಗದ ಹೊಸದಾಗಿ ರಚನೆಯಾದ 18 ತಾಲ್ಲೂಕುಗಳ ಪೈಕಿ 16 ತಾಲ್ಲೂಕುಗಳಿಗೆ ತಲಾ ₹ 8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ (ಮಿನಿ ವಿಧಾನಸೌಧ) ಕಟ್ಟಡಗಳ ನಿರ್ಮಾಣಕ್ಕೆ ಜೂನ್ 9ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಡಿಗಲ್ಲು ನೆರವೇರಿಸುವರು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್ ತಿಳಿಸಿದರು. ‘ರಾಯಚೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಕಂದಾಯ ಸಚಿವ ಕೃಷ್ಣ ಬೈರೇಗೌಡ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೇರಿದಂತೆ ಹಲವರು ಪಾಲ್ಗೊಳ್ಳುವರು. ಪ್ರತಿ ಕಟ್ಟಡಕ್ಕೆ ಕಂದಾಯ ಇಲಾಖೆ ಮತ್ತು ಕೆಕೆಆರ್‌ಡಿಬಿ ತಲಾ ₹ 4.30 ಕೋಟಿ ಅನುದಾನ ನೀಡಲಿದೆ. ಒಟ್ಟು ₹ 137.60 ಕೋಟಿ ವೆಚ್ಚ ಮಾಡಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.