ಕಲಬುರಗಿ: ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ತೆಲಂಗಾಣದಿಂದ ಕಲಬುರಗಿಗೆ ಬಂದು ಆನ್‌ಲೈನ್ ಟ್ರೇಡಿಂಗ್ ಶುರುಮಾಡಿ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ನಾಲ್ಕು ಜಿಲ್ಲೆಗಳ ನೂರಾರು ಜನರಿಂದ ₹20 ಕೋಟಿ ಹೂಡಿಕೆ ಮಾಡಿಕೊಂಡು ವಂಚಿಸಿದ ಆರೋಪಿ ರಾಮು ಅಕುಲ್ ಈಗ ಜೈಲು ಸೇರಿದ್ದಾನೆ.
ಅಕ್ಕಮಹಾದೇವಿ ಕಾಲೊನಿ ನಿವಾಸಿ ಉಲ್ಲಾಸ್ ಅಶೋಕ ನೀಡಿದ್ದ ವಂಚನೆ ದೂರಿನ ಅನ್ವಯ ತೆಲಂಗಾಣ ಮೂಲದ ರಾಮು ಅಕುಲ್ ಅಲಿಯಾಸ್ ರಾಮಚಂದ್ರಚಾರಿ ಬಂಧಿತ ಆರೋಪಿ. ಹೂಡಿಕೆಯ ಆಮಿಷಕ್ಕೆ ಬಳಸಿದ್ದ ವಿವಿಧ ಸ್ಕೀಮ್‌ಗಳ ಬ್ರೋಷರ್, ರಿಯಲ್ ಎಸ್ಟೇಟ್ ಲೇಔಟ್‌ನ ನಕ್ಷೆಗಳು, ಒಪ್ಪಂದದ ನೋಂದಣಿ ಪತ್ರಗಳು, ನಿವೇಶನಗಳ, ನರ್ಸರಿ ಫಾರ್ಮ್ ಸಂಬಂಧಿತ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
‘ವಿಮಾನ ನಿಲ್ದಾಣದ ಎಟಿಸಿ ನೌಕರನಾಗಿದ್ದ ರಾಮು ಅವರು ಸ್ವಯಂ ನಿವೃತ್ತಿ ತೆಗೆದುಕೊಂಡು, ಹೈದರಾಬಾದ್‌ನಲ್ಲಿ ರಿಯಲ್ ಎಸ್ಟೇಟ್ ಹಾಗೂ ಮುಂಬೈನಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟದಲ್ಲಿ ತೊಡಗಿ ನಷ್ಟ ಅನುಭವಿಸಿದ್ದರು. ಕಲಬುರಗಿ ನಗರದ ಸುತ್ತಲೂ ಮಾರಾಟವಾಗದೆ ಉಳಿದ ನಿವೇಶನಗಳ ಬಗ್ಗೆ ತಿಳಿದು, ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ 2019ರಲ್ಲಿ ಕಲಬುರಗಿಗೆ ಬಂದರು. ಇಲ್ಲಿಯೂ ನಷ್ಟ ಅನುಭವಿಸಿದ್ದಾಗ ಅಕ್ಕಮಹಾದೇವಿ ಕಾಲೊನಿಯಲ್ಲಿ ಆನ್‌ಲೈನ್ ಟ್ರೇಡಿಂಗ್ ಗಾಗಿ ವಿನಸ್ ಎಂಟರ್‌ಪ್ರೈಸಸ್ ಶುರು ಮಾಡಿದರು’ ಎಂದು ಕಮಿಷನರ್ ಶರಣಪ್ಪ ಎಸ್.ಡಿ. ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಹೂಡಿಕೆದಾರರನ್ನು ಸೆಳೆಯಲು ₹1 ಲಕ್ಷಕ್ಕೆ ₹15,000ದಿಂದ ₹20,000 ಲಾಭಾಂಶ ಹಾಗೂ ಬೇರೊಬ್ಬರಿಂದ ಹೂಡಿಕೆ ಮಾಡಿಸಿದರೆ ಶೇ 15ರಷ್ಟು ಹೆಚ್ಚುವರಿ ಕಮಿಷನ್ ಕೊಡುವುದಾಗಿ ನಂಬಿಸಿದರು. ‘ಎ’ ವ್ಯಕ್ತಿಯಿಂದ ಹೂಡಿಕೆ ಮಾಡಿಕೊಂಡ ಹಣದಲ್ಲಿಯೇ ‘ಬಿ’ ವ್ಯಕ್ತಿಗೆ ಲಾಭಾಂಶ ನೀಡುತ್ತಿದ್ದ. ಹೀಗೆಯೇ ಒಬ್ಬ ಗ್ರಾಹಕನ ದುಡ್ಡನ್ನು ಇನ್ನೊಬ್ಬರಿಗೆ ಕಮಿಷನ್ ರೂಪದಲ್ಲಿ ನೀಡಿತ್ತಾ ವಂಚನೆ ವಹಿವಾಟಿನ ಜಾಲವನ್ನು ವಿಸ್ತರಿಸಿಕೊಂಡು ನಡೆಸುತ್ತಿದ್ದ. ರಾಮುವಿನ ‘ಹೆಚ್ಚಿನ ಲಾಭಾಂಶ’ ನೀಡುತ್ತಿದ್ದ ವಹಿವಾಟು ನೆರೆಯ ಬೀದರ್, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಿಗೂ ವ್ಯಾಪಿಸಿತ್ತು. ಎಂಟು–ಹತ್ತು ನೌಕರರನ್ನು ನೇಮಿಸಿಕೊಂಡು ಶಹಾಪುರ, ಸೇಡಂಗಳಲ್ಲಿ ಕಚೇರಿಗಳನ್ನು ಸಹ ತೆರೆದಿದ್ದನು’ ಎಂದರು.
‘ರಾಮುವಿನ ಲಾಭಾಂಶಕ್ಕೆ ಮಾರು ಹೋದ ಕೆಲವರು ಎರಡ್ಮೂರು ಬಾರಿ ಮರು ಹೂಡಿಕೆಯೂ ಮಾಡಿದ್ದರು. 2024ರ ಡಿಸೆಂಬರ್ ವೇಳೆಗೆ ಹೂಡಿಕೆದಾರರ ಸಂಖ್ಯೆ 800ರ ಗಡಿ ದಾಟಿತ್ತು. ಅದೇ ವೇಳೆಗೆ ಹೊಸ ಹೂಡಿಕೆದಾರರ ಸಂಖ್ಯೆ ಕ್ಷೀಣಿಸಿತ್ತು. ಲಾಭಾಂಶದ ಹಣ ಕೊಡಲು ಆಗದೆ ಎಲ್ಲಾ ಹೂಡಿಕೆದಾರರ ಸಭೆ ಕರೆದು, ಕೆಲ ದಿನಗಳ ಗಡುವು ಕೋರಿದ್ದ. ಒತ್ತಡ ಹೆಚ್ಚಾಗುತ್ತಿದ್ದಂತೆ ಕಚೇರಿಗೆ ಬೀಗ ಹಾಕಿ ತಲೆ ಮರೆಸಿಕೊಂಡ’ ಎಂದು ಮಾಹಿತಿ ನೀಡಿದರು.
‘ಉಲ್ಲಾಸ್ ದೂರು ನೀಡಿದ ಬಳಿಕ 250ಕ್ಕೂ ಹೆಚ್ಚು ಹೂಡಿಕೆದಾರರು ಪೊಲೀಸರನ್ನು ಸಂಪರ್ಕಿಸಿದ್ದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ‘ಸೆನ್’ ಠಾಣೆಯ ಪೊಲೀಸರು ಆರೋಪಿಯನ್ನು ಹೈದರಾಬಾದ್‌ನಲ್ಲಿ ವಶಕ್ಕೆ ಪಡೆದರು. ವಿಚಾರಣೆ ನಡೆಸಿದಾಗ ವಂಚನೆಯ ಕರಾಳ ಮುಖಗಳು ಹಾಗೂ ವಿವಿಧ ಉದ್ಯಮಗಳಲ್ಲಿ ಹಣ ಹೂಡಿಕೆ ಮಾಡಿದ್ದು ಗೊತ್ತಾಯಿತು’ ಎಂದರು.
‘ಸೆನ್’ ಠಾಣೆಯ ಎಸಿಪಿ ಮಡೋಳಪ್ಪ ನೇತೃತ್ವದ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರಶಂಸಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಕನಿಕಾ ಸಿಕ್ರಿವಾಲ್ ಉಪಸ್ಥಿತರಿದ್ದರು.
‘ಜೈಲು ಬಳಿ 6 ನಿವೇಶನ ಖರೀದಿ, ಶಾಲೆ ತೆರೆಯಲು ಅರ್ಜಿ’:
‘ಹೂಡಿಕೆಯಿಂದ ಬಂದಿದ್ದ ಬಹುತೇಕ ಹಣವನ್ನು ರಾಮು ಅವರು ಕಮಿಷನ್ ರೂಪದಲ್ಲಿ ಹೂಡಿಕೆದಾರರಿಗೆ ಕೊಟ್ಟಿದ್ದರು. ಒಂದಿಷ್ಟು ಹಣದಲ್ಲಿ ಜೈಲಿನ ಸಮೀಪದಲ್ಲಿ ಆರು ನಿವೇಶನಗಳನ್ನು ಖರೀದಿಸಿದ್ದರು. ನರ್ಸರಿ ಶಾಲೆ ತೆರೆಯಲು ಅರ್ಜಿ ಸಹ ಹಾಕಿದ್ದರು’ ಎಂದು ಕಮಿಷನರ್ ಶರಣಪ್ಪ ಎಸ್.ಡಿ. ತಿಳಿಸಿದರು.
‘ವಿನಸ್ ಎಂಟರ್‌ಪ್ರೈಸಸ್, ವಿನಸ್ ಆಗ್ರೊ, ವಿನಸ್ ಇನ್‌ಫ್ರಾವೆಂಚರ್ಸ್ ಹೆಸರಿನ ಸಂಸ್ಥೆಗಳನ್ನು ಸ್ಥಾಪಿಸಿದ್ದ. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನರ್ಸರಿ ಫಾರ್ಮ್‌ನಲ್ಲಿ, ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಸಹ ಹೂಡಿಕೆ ಮಾಡಿದ್ದ. ಆತನ ಹೆಸರಿನಲ್ಲಿನ 12 ಬ್ಯಾಂಕ್ ಖಾತೆಗಳು ಸಹ ಪತ್ತೆಯಾಗಿವೆ. ಹೂಡಿಕೆದಾರರು ಎಷ್ಟು ಹಣವನ್ನು ಹೂಡಿಕೆ ಮಾಡಿದ್ದಾರೆ? ಅವರು ಪಡೆದ ಲಾಭಾಂಶ ಎಷ್ಟು?, ಯಾರೆಲ್ಲಾ ಲಾಭಾಂಶ ಪಡೆದಿಲ್ಲ ಎಂಬುದರ ಸಮಗ್ರ ವಿವರವನ್ನು ಕಲೆಹಾಕಬೇಕಿದೆ. ಒಂದಿಷ್ಟು ದಾಖಲೆಗಳೂ ಸಿಕ್ಕಿವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.