ADVERTISEMENT

ಕಲಬುರಗಿ: ‘ಜ್ಞಾನ’ ದೇಗುಲದಲ್ಲಿ ಸಿಡಿದ ಸ್ವಾತಂತ್ರ್ಯದ ‘ಕಿಡಿ’

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 4:54 IST
Last Updated 15 ಆಗಸ್ಟ್ 2022, 4:54 IST
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದಲ್ಲಿ ಸ್ಥಾಪಿತವಾದ ಗ್ರಂಥಾಲಯ (ಚಿತ್ರ ಕೃಪೆ: ಶರಣಬಸವೇಶ್ವರ ಸಂಸ್ಥಾನ)
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದಲ್ಲಿ ಸ್ಥಾಪಿತವಾದ ಗ್ರಂಥಾಲಯ (ಚಿತ್ರ ಕೃಪೆ: ಶರಣಬಸವೇಶ್ವರ ಸಂಸ್ಥಾನ)   

ಕಲಬುರಗಿ: ಬ್ರಿಟಿಷರ ಹಾಗೂ ಹೈದರಾಬಾದ್ ನಿಜಾಮನ ದಬ್ಬಾಳಿಕೆ ದಾಸ್ಯದಲ್ಲಿ ನಲುಗಿದ್ದ ಜನರ ಮನದಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸಿ, ಅವರನ್ನು ಚಳವಳಿಗೆ ನೂಕುವುದಕ್ಕೆ ಮುಖ್ಯ ಭೂಮಿಕೆಯಾಗಿದ್ದು ಜಿಲ್ಲೆಯ ಅಂದಿನ ಗ್ರಂಥಾಲಯಗಳು, ವಿದ್ಯಾ ಸಂಸ್ಥೆಗಳು ಹಾಗೂ ಸಾಹಿತ್ಯಿಕ ಚಟುವಟಿಕೆಗಳು.

ಬ್ರಿಟಿಷರ ನಿಷ್ಠಾವಂತ ಮಿತ್ರನಾಗಿದ್ದ ನಿಜಾಮ ಹಾಗೂ ರಜಾಕಾರರ ಕಣ್ತಪ್ಪಿಸಿ, ರಾಷ್ಟ್ರೀಯವಾದದ ಆಂದೋಲನಗಳು ನಡೆಸಿ, ಜನರಲ್ಲಿ ರಾಷ್ಟ್ರ ಪ್ರಜ್ಞೆ ಮೂಡಿಸುವುದು ಕಷ್ಟವಾಗಿತ್ತು. ಇದನ್ನು ಅರಿತ ಅಂದಿನ ಹೋರಾಟಗಾರರು ಗ್ರಂಥಾಲಯಗಳನ್ನು ತೆರೆದು ಸ್ಥಳೀಯ ಭಾಷೆಯ ಪತ್ರಿಕೆ, ಪುಸ್ತಕ ಮತ್ತು ನಿಯತಕಾಲಿಕೆಗಳ ಮೂಲಕ ರಾಷ್ಟ್ರೀಯ ಚಳವಳಿಯೊಂದಿಗೆ ನಿಕಟ ಸಂಬಂಧ ಕಾಯ್ದುಕೊಂಡರು.

1889ರಲ್ಲಿ ಮಿಡ್ಲ್ ಸ್ಕೂಲ್‌ನಲ್ಲಿ (ಈಗಿನ ಸರ್ಕಾರಿ ಕಿರಿಯ ಕಾಲೇಜು) ಇಮಾಮ್–ಉಲ್–ಮುಲ್ಕ್ ಗ್ರಂಥಾಲಯ ತೆರೆಯಲಾಯಿತು. ಇದು ಜಿಲ್ಲೆಯ ಪ್ರಥಮ ಗ್ರಂಥಾಲಯ. ನಂತರ 1898ರಲ್ಲಿ ಶರಣಬಸವೇಶ್ವರ ಸಂಸ್ಥಾನದ ಆಶ್ರಯದಲ್ಲಿ ವಾಚನಾಲಯ ಆರಂಭಿಸಲಾಯಿತು. ಈ ಭಾಗದಲ್ಲಿ ರಾಷ್ಟ್ರೀಯ ಪ್ರಜ್ಞೆ ಬೆಳೆಸುವ ಮುಖ್ಯ ಉದ್ದೇಶದಿಂದ ದೊಡ್ಡಪ್ಪ ಅಪ್ಪ ಅವರು 1918ರಲ್ಲಿ ಶರಣ ಬಸವೇಶ್ವರ ಕನ್ನಡ ವಾಚನಾಲಯ ಮತ್ತು ಪುಸ್ತಕ ಭಂಡಾರ ಸ್ಥಾಪಿಸಿದರು. 1930ರಲ್ಲಿ ಎನ್.ವಿ. ಶಾಲೆಯ ಸಂಸ್ಥಾಪಕ ವಿಠಲರಾವ್ ದೇವಲಗಾಂವಕರ್ ಅವರು ರಾಷ್ಟ್ರೀಯ ಗ್ರಂಥಾಲಯ ಸಂಘ ಹಾಗೂ 1931ರಲ್ಲಿ ಚಿಂಚೋಳಿಯ ಉಸ್ಮಾನಿಯಾ ಮಿಡ್ಲ್ ಸ್ಕೂಲ್‌ನಲ್ಲಿ ಗ್ರಂಥಾಲಯ ತೆರೆದರು.

ADVERTISEMENT

1924ರಲ್ಲಿನ ಸ್ಟೇಟ್ ಪಬ್ಲಿಕ್ ಲೈಬ್ರರಿ (ಈಗಿನ ನಗರ ಕೇಂದ್ರ ಗ್ರಂಥಾಲಯ), 1932ರ ಕನ್ನಡ ಸಾಹಿತ್ಯ ಸಂಘದ ಗ್ರಂಥಾಲಯ, 1944ರ ಮರಾಠಿ ಸಾಹಿತ್ಯ ಮಂಡಳ, ಇರ್ಫಾನ್‌ ದರ್ಗಾ ಗ್ರಂಥಾಲಯ, ಹಿಂದೂಸ್ತಾನಿ ಚರ್ಚ್ ಲೈಬ್ರರಿ, ಆರ್ಯ ಸಮಾಜ ಗ್ರಂಥಾಲಯಗಳು ಸ್ಥಾಪನೆಯಾದವು. ರಾಷ್ಟ್ರೀಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಜನರಲ್ಲಿ ರಾಷ್ಟ್ರೀಯ ಜಾಗೃತಿ ಮೂಡಿಸುವುದು ಅವುಗಳ ಮುಖ್ಯ ಧ್ಯೇಯವಾಗಿತ್ತು.

ಕನ್ನಡ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ, ಹರಿಜನ, ಲೋಕಮತ, ಸತ್ಯಾಗ್ರಹ ಧರ್ಮ, ತಿಲಕರ ಬಸವ ಭೂಮಿ, ಮರಾಠಾ ಭಾಷೆಯ ಕೇಸರಿ, ಧರ್ಮ ಸಂಜೀವಿನಿ, ನಿಜಾಮ್ ವಿಜಯ್, ಸೊಲ್ಲಾಪುರ ಸಮಾಚಾರ್, ಕಲ್ಯಾಣ ವಾಣಿ ಮತ್ತು ಉರ್ದು ಪತ್ರಿಕೆಗಳಾದ ಶಿಯಾಸತ್ ರಹಬರಿ–ಇ–ಡೆಕ್ಕನ್ ಮತ್ತು ಇಮ್ರೋಜ್‌ನಂತಹವೂ ಗ್ರಂಥಾಲಯಗಳಲ್ಲಿ ಲಭ್ಯವಿದ್ದವು. ಬಹುತೇಕ ಪತ್ರಿಕೆಗಳಲ್ಲಿ ದೇಶಭಕ್ತಿಯ ಮನೋಭಾವವನ್ನು ಪ್ರೇರೇಪಿಸುವ ಸಂಗತಿಗಳು ಮುದ್ರಣವಾಗುತ್ತಿದ್ದವು.

ಗ್ರಂಥಾಲಯದ ಜತೆಗೆ ಸಾಹಿತ್ಯದ ಬೆಳವಣಿಗೆ ಹಾಗೂ ವಿದ್ಯಾ ಸಂಸ್ಥೆಗಳಲ್ಲಿನ ರಾಷ್ಟ್ರೀಯ ಭಾವನೆಯ ವಿಚಾರಗಳು ರಾಷ್ಟ್ರೀಯ ಆಂದೋಲನದ ಪ್ರಚಾರಕ್ಕೆ ಪುಷ್ಟಿ ನೀಡಿತ್ತು. ಆಂಧ್ರಾ ಮಹಾಸಭೆ ಹಾಗೂ ಮರಾಠವಾಡಾ ಪರಿಷತ್ತುಗಳು ಕೈಜೋಡಿಸಿ ಜನರಲ್ಲಿ ರಾಜಕೀಯ ಜಾಗೃತಿ ಮೂಡಿಸುವಂತಾಯಿತು. ಇದೇ ಅವಧಿಯಲ್ಲಿ ಗಾಂಧೀಜಿ ಆರಂಭಿಸಿದ್ದ ‘ಭಾರತ ಬಿಟ್ಟು ತೊಲಗಿ ಚಳವಳಿ’ ಬ್ರಿಟಿಷರ ಆಡಳಿತದ ತಳಹದಿಯನ್ನೇ ಅಲುಗಾಡಿಸಿತು. ಇದರ ಕಾವು ನಿಜಾಮನಿಗೂ ತಟ್ಟಿತು.‌

‘ಸಾರ್ವಜನಿಕ ಗ್ರಂಥಾಲಯಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾಹಿತ್ಯಿಕ ಚಟುವಟಿಕೆಗಳು ಕಲಿಕೆಯ ಜತೆಗೆ ನಿಜಾಮರ ಮತ್ತು ಬ್ರಿಟಿಷರ ವಿರುದ್ಧ ದಂಗೆಯೇಳಲು ಓದುಗರಿಗೆ ಶಕ್ತಿಯನ್ನು ತುಂಬಿದವು. ರಾಷ್ಟ್ರೀಯ ಪುನರುಜ್ಜೀವನದ ತಂಗಾಳಿ ಜಿಲ್ಲೆಯಾದ್ಯಂತ ಹಬ್ಬಿ ಸಾಮಾಜಿಕ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೂ ಕಾರಣವಾದವು. ರಾಷ್ಟ್ರೀಯ ಪ್ರಜ್ಞೆಯನ್ನು ಎಚ್ಚರಿಸಿ, ಧರ್ಮಸಹಿಷ್ಣುತೆಯೊಂದಿಗೆ ಬದುಕುವ ಆದರ್ಶಗಳನ್ನು ಅವು ತಿಳಿಸಿದವು’ ಎನ್ನುತ್ತಾರೆ ಜಿಲ್ಲೆಯ ಹಿರಿಯರು.

ಲಭ್ಯವಿದ್ದ ಪುಸ್ತಕಗಳು

ಗ್ರಂಥಾಲಯಗಳ ಪುಸ್ತಕಗಳ ಖರೀದಿಗೆ ವ್ಯಾಪಾರಿಗಳು, ಧಾರ್ಮಿಕ ಸಂಸ್ಥೆಗಳು, ಆರ್ಯ ಸಮಾಜ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಹಿಂದೂ ಮಹಾಸಭಾದಿಂದ ಧನ ಸಂಗ್ರಹಿಸಲಾಗುತ್ತಿತ್ತು.

ದಾನಿಗಳಿಂದ ಬಂದ ಹಣದಲ್ಲಿ ಸತ್ಯಾಗ್ರಹ, ಧಾರಣ, ಸತ್ಯಾರ್ಥ ಪ್ರಕಾಶದಂತಹ ಪುಸ್ತಕಗಳು, ಶಿವಾಜಿ, ಕಿತ್ತೂರು ರಾಣಿ ಚೆನ್ನಮ್ಮ, ಬಸವೇಶ್ವರ, ಭಗತ್ ಸಿಂಗ್, ಝಾನ್ಸಿ ರಾಣಿ ಲಕ್ಷ್ಮಿಬಾಯಿ ಅವರ ಜೀವನ ಚರಿತ್ರೆ ಪುಸ್ತಕಗಳು ಇದ್ದವು. ಗಳಗನಾಥರ ಕಾದಂಬರಿಗಳಾದ ಮಾಧವ ಕರ್ಣ ವಿಲಾಸ, ಈಶ್ವರಿ ಸೂತ್ರದಂತಹ ಐತಿಹಾಸಿಕ ಗ್ರಂಥಗಳನ್ನು ಇರಿಸಲಾಗಿತ್ತು. ಭಾರತದ ಗತವೈಭವದ ಮೇಲೆ ಬೆಳಕು ಚೆಲ್ಲುವ ಹಾಗೂ ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿದ ಭಾರತೀಯರ ಶೌರ್ಯದ ಕಥೆಗಳು ಸಹ ಓದಲು ಸಿಗುತ್ತಿದ್ದವು.

ಸಾಹಿತ್ಯದ ಸಂಘಟನೆಗಳ ಪಾತ್ರ

ಕರ್ನಾಟಕದ ಕುಲಪುರೋಹಿತ ಆಲೂರು ವೆಂಕಟರಾಯರು ಪ್ರಚುರಪಡಿಸಿದ ‘ಕರ್ನಾಟಕ ಅಂತರ್ಗತ ಭಾರತ ಮಾತೆ’ ತತ್ವವು ಸಾಹಿತ್ಯದ ಹೋರಾಟಕ್ಕೆ ಸ್ಫೂರ್ತಿಯಾಯಿತು. ನಿಜಾಮ ಸರ್ಕಾರದ ರಾಜಕೀಯ ನಿರ್ಬಂಧಗಳು ಬಲಗೊಂಡಂತೆ ಸಾಹಿತ್ಯ ರಚನೆಯಲ್ಲಿ ಸ್ವಾತಂತ್ರ್ಯ ಬಯಕೆಯ ವಿಚಾರಗಳು ಪ್ರಬಲವಾಗಿ ವ್ಯಕ್ತವಾದವು. ಇದರಿಂದ ಸಾಹಿತ್ಯಿಕ ಸಂಘ–ಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.

1942ರಲ್ಲಿ ಅಂದಿನ ಅವಿಭಜಿತ ಕಲಬುರಗಿ ಜಿಲ್ಲೆಯ ಸುರಪುರದ ರಂಗಂಪೇ‌ಟೆಯಲ್ಲಿ ಎ.ಆರ್‌. ಬುದ್ಧಿವಂತ ಶೆಟ್ಟರು, ಸಗರ ಕೃಷ್ಣಾಚಾರ್ಯ ಅರೇಕಲ್ ಹಾಗೂ 1946ರಲ್ಲಿ ಶಹಾಬಾದ್‌ನಲ್ಲಿ ಗೋಪಾಲರಾವ್ ಕಟ್ಟಿ, ತಮ್ಮಣ್ಣಾಚಾರ್ಯ ಅರೇಕಲ್ ಅವರು ಕನ್ನಡ ಸಾಹಿತ್ಯ ಸಂಘ ಹಾಗೂ ಕಲಬುರಗಿಯಲ್ಲಿ ತವಗ ಭೀಮಸೇನರಾಯರು ಹೈದರಾಬಾದ್ ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪಿಸಿದರು. ಈ ಮೂಲಕ ಉಪನ್ಯಾಸ, ನಾಡಹಬ್ಬ, ನಾಡ ಭಕ್ತಿ ಗಾಯನದಂತಹ ಕನ್ನಡ ಪರ ಕೆಲಸಗಳನ್ನು ಮಾಡಿ, ಜಿಲ್ಲೆಯ ಜನರಲ್ಲಿ ಭಾಷೆಯ ಬಗೆಗೆ ಪ್ರೀತಿ, ಸ್ವಾಭಿಮಾನ, ರಾಷ್ಟ್ರ ಪ್ರೇಮ ಉಂಟುಮಾಡಿ, ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸಹಾಯ ಮಾಡಿದವು.

ಪ್ರತಿಬಂಧಕ್ಕೂ ಜಗ್ಗದೆ ಆ.15ರಂದು ಧ್ವಜ ಹಾರಾಟ

1947ರ ಆ 15ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ವಾರ್ತೆ ರೇಡಿಯೊಗಳ ಮೂಲಕ ಈ ಪ್ರಾಂತ್ಯದ ಜನರ ಕಿವಿಗಳಿಗೆ ಕರ್ಣಾನಂದ ಉಂಟುಮಾಡಿತು. ಆದರೆ, ಸ್ವಾತಂತ್ರ್ಯ ಧ್ವಜ ಹಾರಿಸಿದವರನ್ನು ಕ್ರಿಮಿನಲ್‌ ಆಪಾದನೆಯಡಿ ಬಂಧಿಸಲಾಯಿತು. ಇದಕ್ಕೆ ಸೊಪ್ಪು ಹಾಕದೆ ನಾರಾಯಣರಾವ್ ಭೀಮರಾವ್ ದೇಶಪಾಂಡೆ ಅವರು ಎಂಎಸ್‌ಕೆ ಮಿಲ್‌ ಒಳಗೆ ರಾಷ್ಟ್ರ ಧ್ವಜ ಹಾರಿಸಿದರು. ಬಳಿಕ ಅವರನ್ನು 1 ವರ್ಷ 40 ದಿನ ಜೈಲಿನಲ್ಲಿ ಇರಿಸಲಾಯಿತು.

ಸ್ವಾತಂತ್ರ್ಯದ ದಿನ ಕಪಟರಾಳ ಕೃಷ್ಣರಾಯರು, ದತ್ತಾತ್ರೇಯ ಅವರಾದಿ, ಭಾವುರಾವ್ ದೇವುಳಗಾಂವಕರ್,
ಅಶ್ವತ್ಥರಾವ್ ವಕೀಲ, ಅನಿರುದ್ಧ ದೇಸಾಯಿ ಸೇರಿ ಸುಮಾರು 60 ಜನರ ಫುಟ್‌ಬಾಲ್ ತಂಡ ಎನ್‌.ವಿ. ಮೈದಾನದಲ್ಲಿ
ಸೇರಿತ್ತು. ಕಕ್ಕೇರಿ ಹನುಮಂತರಾಯ ಅವರ ಮನೆ ಮುಂದೆ ಬೆಳಿಗ್ಗೆ 6ಕ್ಕೆ ರಾಷ್ಟ್ರ ಧ್ವಜ ಹಾರಿಸಿದರು. ಬಳಿಕ ಮೆರವಣಿಗೆಯಲ್ಲಿ ಸಾಗಿ ಜಗತ್ ಬಳಿ ಪೊಲೀಸರು ಕಂಡಾಗ, ಓಡಿ ಹೋಗಿ ಬಂಧನದಿಂದ ತಪ್ಪಿಸಿಕೊಂಡರು. ದೇಶವೆಲ್ಲ ಸಂಭ್ರಮದಲ್ಲಿ ಇದ್ದಾಗ ಈ ಪ್ರಾಂತ್ಯದ ಜನರು ಮಾತ್ರ ತಮ್ಮ ಹಕ್ಕುಬಾಧ್ಯತೆಗಾಗಿ ರಜಾಕಾರರ ಘೋರ ಹಾವಳಿ ವಿರುದ್ಧ ಮತ್ತೊಂದು ಚಳವಳಿ ಹೂಡಬೇಕಾಯಿತು.

ರಾಷ್ಟ್ರೀಯ ಧ್ಯೇಯೋದ್ಧೇಶದ ಶಿಕ್ಷಣ ಸಂಸ್ಥೆಗಳು

ಬ್ರಿಟಿಷರು ಪರೋಕ್ಷವಾಗಿ ನಿಜಾಮನ ಮುಖೇನ ಸಂಸ್ಥಾನದ ಆಡಳಿದ ಮೇಲೆ ಹತೋಟಿ ಇಟ್ಟುಕೊಂಡಿದ್ದರು. ಹೈದರಾಬಾದ್ ಸಾಮ್ರಾಜ್ಯದಲ್ಲಿ ಜನರು ಬಹಿರಂಗವಾಗಿ ವಿರೋಧ ಮಾಡುವುದು ಅಸಾಧ್ಯವಾಗಿತ್ತು. ಜತೆಗೆ ನಿಜಾಮನ ಸರ್ಕಾರ ಕಾಂಗ್ರೆಸ್‌ನ ಮೇಲೆ ನಿಷೇಧ ಹೇರಿತ್ತು. ಇಷ್ಟೆಲ್ಲ ಅಡೆತಡೆ ಇದ್ದರೂ ರಾಷ್ಟ್ರೀಯ ಭಾವನೆಯು ಜಿಲ್ಲೆಯಾದ್ಯಂತ ವ್ಯಾಪಕವಾಗಿ ಪ್ರಸಾರವಾಗಿತ್ತು. ಇದಕ್ಕೆ ಮುಖ್ಯ ಕಾರಣ ಶಿಕ್ಷಣ ಕ್ಷೇತ್ರದಲ್ಲೂ ರಾಷ್ಟ್ರೀಯ ಧ್ಯೇಯೋದ್ಧೇಶಗಳನ್ನು ಗುರಿಯಾಗಿ ಇರಿಸಿಕೊಂಡು ಕೆಲವು ದೇಸಿ ವಿದ್ಯಾಸಂಸ್ಥೆಗಳು ಅಸ್ತಿತ್ವಕ್ಕೆ ಬಂದವು.

ರಾಷ್ಟ್ರೀಯ ಹಿತವನ್ನೇ ತಮ್ಮ ಶಾಲೆಯ ಶಿಸ್ತಿನ ಪಾಲನೆಯ ತತ್ವವಾಗಿ ಪಾಲಿಸುತ್ತಿದ್ದವು. ಅವುಗಳಲ್ಲಿ ಪ್ರಮುಖವಾದವು 1907ರಲ್ಲಿನ ವಿಠಲರಾವ್ ದೇವಲಗಾಂವಕರ್‌ ಅವರ ನೂತನ ವಿದ್ಯಾಲಯ, 1918ರಲ್ಲಿ ದೊಡ್ಡಪ್ಪ ಅಪ್ಪ ಅವರ ಶರಣ ಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ 1934ರಲ್ಲಿ ಮಹಾದೇವಿ ಕನ್ಯಾ ಶಾಲೆ ಮತ್ತು ಇತರೆ ಸಂಸ್ಥೆಗಳು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.