ADVERTISEMENT

ಕಲಬುರ್ಗಿ: ಲಂಬೋದರನಿಗೆ ಭಕ್ತಿಯ ವಿದಾಯ

ಐದು ದಿನ ಪೂಜೆಗೊಂಡ ವಿಘ್ನ ನಿವಾರಕನ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 4:59 IST
Last Updated 15 ಸೆಪ್ಟೆಂಬರ್ 2021, 4:59 IST
ಕಲಬುರ್ಗಿಯ ಶರಣಬಸವೇಶ್ವರ ಕೆರೆಯ ಬಳಿ ಮಂಗಳವಾರ ಗಣೇಶಮೂರ್ತಿ ವಿಸರ್ಜನೆಗೆ ಬಂದ ಹೆಣ್ಣುಮಕ್ಕಳು
ಕಲಬುರ್ಗಿಯ ಶರಣಬಸವೇಶ್ವರ ಕೆರೆಯ ಬಳಿ ಮಂಗಳವಾರ ಗಣೇಶಮೂರ್ತಿ ವಿಸರ್ಜನೆಗೆ ಬಂದ ಹೆಣ್ಣುಮಕ್ಕಳು   

ಕಲಬುರ್ಗಿ: ನಗರದಲ್ಲಿ ಮಂಗಳವಾರ ಐದನೇ ದಿನದ ಗಣಪತಿ ಮೂರ್ತಿಗಳ ವಿಸರ್ಜನೆ ಸರಳವಾಗಿ ನೆರವೇರಿತು. ಕೊರೊನಾ ವೈರಾಣು ಹರಡುವ ಭೀತಿಯ ಕಾರಣ ಈ ಬಾರಿ ಕೂಡ ಗುಂಪು ಮೆರವಣಿಗೆ ಹಾಗೂ ಸಂಗೀತ ವಾದ್ಯಗಳ ಮೇಳಕ್ಕೆ ಕಡಿವಾಣ ಹಾಕಲಾಗಿತ್ತು.

ಕೆಲ ಸಾರ್ವಜನಿಕ ಗಣಪತಿ ಮಂಡಳಿಗಳ ಸದಸ್ಯರು ಗುಂಪಾಗಿ ಮೆರವಣಿಗೆಯಲ್ಲಿ ಬಂದರು. ಹೆಚ್ಚಿನ ಜನ ಕುಟುಂಬ ಸಮೇತರಾಗಿ ಬಂದು ಮೂರ್ತಿ ವಿಸರ್ಜನೆ ಮಾಡಿದರು.

ನಗರ ಹಾಗೂ ಜಿಲ್ಲೆಯಾದ್ಯಂತ ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆ ವೇಳೆ ಗುಂಪುಗೂಡುವುದನ್ನು ನಿಷೇಧಿಸಿ ಜಿಲ್ಲಾಡಳಿತ ಈ ಮುಂಚೆಯೇ ಆದೇಶ ಹೊರಡಿಸಿದೆ.ಪ್ರತಿ ವರ್ಷ ಮೂರ್ತಿಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುತ್ತ, ಡಿ.ಜೆ ಸಂಗೀತ ಹಾಕಿಕೊಂಡು ಕುಣಿದು ಕುಪ್ಪಳಿಸುತ್ತಿದ್ದ ಯುವಕರ ದಂಡು ಕಳೆದ ಎರಡು ವರ್ಷಗಳಿಂದ ನಿರಾಸೆ ಅನುಭವಿಸುವಂತಾಗಿದೆ. ಗಣಪತಿ ಪ್ರತಿಷ್ಠಾಪನಾ ಮಂಟಪಗಳೂ ಸಂಕ್ಷಿಪ್ತವಾಗಿದ್ದವು. ಝಗಮಗಿಸುವ ವಿದ್ಯುದ್ದೀಪಾಲಂಕಾರ, ಲೌಡ್‌ಸ್ಪೀಕರ್‌ಗಳ ಬಳಕೆ ಕೂಡ ಕಂಡುಬರಲಿಲ್ಲ.

ADVERTISEMENT

ಇಲ್ಲಿನ ಶರಣಬಸವೇಶ್ವರ (ಅಪ್ಪ) ಕೆರೆಯ ಬಳಿ ಇರುವ ಕಲ್ಯಾಣಿಯಲ್ಲಿ ಮೂರ್ತಿ ವಿಸರ್ಜನೆಗೆ ಮಂಗಳವಾರ ಸಂಜೆ ಚಾಲನೆ ದೊರೆಯಿತು. ಯುವಕ– ಯುವತಿಯರ, ಪುರುಷರು, ಮಹಿಳೆಯರು, ಮಕ್ಕಳು, ಹಿರಿಯರು... ಹೀಗೆ ಹಲವರು ಕುಟುಂಬ ಸಮೇತರಾಗಿ ಮೂರ್ತಿಗಳನ್ನು ಹೊತ್ತು ಬಂದರು. ಮತ್ತೆ ಕೆಲವರು ಸ್ನೇಹಿತರ ಗುಂಪು ಕಟ್ಟಿಕೊಂಡು ಸಂಭ್ರಮದಿಂದ ವಿಸರ್ಜನೆಗೆ ಸಾಗಿದರು. ಮಾರ್ಗ ಮಧ್ಯೆ ಕೆಲವರು ಅಲ್ಲಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.‌

ಕಲ್ಯಾಣಿಯಲ್ಲಿ ದಟ್ಟಣೆ ನಿಯಂತ್ರಣ: ಶರಣಬಸವೇಶ್ವರ (ಅಪ್ಪ) ಕೆರೆಯ ಆವರಣದಲ್ಲಿ ನಿರ್ಮಿಸಿರುವ ಕಲ್ಯಾಣಿಯಲ್ಲಿ (ಹೊಂಡ) ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಮೂರ್ತಿ ವಿಸರ್ಜನೆ ವೇಳೆ ಯುವಕರು ಹೊಂಡಕ್ಕೆ ಇಳಿದು ಅಲ್ಲಿಯೇ ಪೂಜೆ ಮಾಡುವುದು, ಮೂರ್ತಿ ಮುಳುಗಿಸುವುದು ರೂಢಿ.

ಆದರೆ, ಈ ದಟ್ಟಣೆ ತಡೆಯುವ ಉದ್ದೇಶದಿಂದ ಪ್ರಸಕ್ತ ವರ್ಷ ಹೊಂಡದ ಬಳಿಗೆ ಇಬ್ಬರು ಮಾತ್ರ ತೆರಳಲು ಅವಕಾಶ ನೀಡಲಾಯಿತು. ಅವರ ಸಹಾಯಕ್ಕೆ ಪಾಲಿಕೆಯಿಂದಲೇ ಸಿಬ್ಬಂದಿ ನಿಯೋಜಿಸಲಾಗಿತ್ತು.

ಕಲ್ಯಾಣಿ ಆವರಣದ ಹೊರಗೇ ಮೂರ್ತಿಗೆ ಪೂಜೆ ಸಲ್ಲಿಸಿ, ಆಲಂಕಾರಿಕ ವಸ್ತು ಹಾಗೂ ಆರಭರಣಗಳನ್ನು ತೆಗೆಯುವ ವ್ಯವಸ್ಥೆ ಮಾಡಲಾಗಿತ್ತು. ದೂರದಲ್ಲೇ ಎಲ್ಲ ವಾಹನಗಳನ್ನೂ ತಡೆದು ನಿಲ್ಲಿಸಲಾಯಿತು.ದೊಡ್ಡ ಗಣಪನ ಮೂರ್ತಿಗಳನ್ನು ಟ್ರ್ಯಾಕ್ಟರ್‌, ಮಿನಿ ಲಾರಿ, ಗೂಡ್ಸ್‌ ಆಟೊಗಳಲ್ಲಿ ತರಲಾಯಿತು. ರಾತ್ರಿ 11ರ ನಂತರವೂ ಹಲವು ಮೂರ್ತಿಗಳ ವಿಸರ್ಜನೆ ಕಾರ್ಯ ನಡೆದೇ ಇತ್ತು. ಕಲ್ಯಾಣಿ ಸುತ್ತ ಪೊಲೀಸ್‌ ಬಂದೊ ಬಸ್ತ್‌ ಏರ್ಪಡಿಸಲಾಗಿತ್ತು.

ದೊಡ್ಡ ಮೂರ್ತಿಗಳ ವಿಸರ್ಜನೆಗಾಗಿ ಪಾಲಿಕೆ ವತಿಯಿಂದ ಕ್ರೇನ್‌ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಈ ಬಾರಿ 5 ಅಡಿಗಿಂತ ಎತ್ತರದ ಗಣಪತಿ ಮಾಡದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದರಿಂದ ಬಹುಪಾಲು ಮೂರ್ತಿಗಳು ಚಿಕ್ಕದಾಗಿಯೇ ಇದ್ದವು. ಕೆಲವು ಮೂರ್ತಿಗಳನ್ನು ಮಾತ್ರ ಪಾಲಿಕೆ ಸಿಬ್ಬಂದಿಯೇ ಮುಂದಾಗಿ ಕ್ರೇನ್‌ನಲ್ಲಿ ಮೂರ್ತಿ ತಂದು ಕಲ್ಯಾಣಿಯಲ್ಲಿ ಮುಳುಗಿಸಲು ಸಹಕರಿಸಿದರು.ಮನೆಗಳಲ್ಲೂ ಪ್ರತಿಷ್ಠಾಪಿಸಿದ ಚಿಕ್ಕ ಗಣಪತಿ ಮೂರ್ತಿಗಳನ್ನೂ ತಂದ ಮನೆಯ ಸದಸ್ಯರು, ಸಂಭ್ರಮದಿಂದ ವಿಸರ್ಜಿಸಿದರು. ಗಣಪತಿಬಪ್ಪ ಮೋರಯಾ, ಮಂಗಳಮೂರ್ತಿ ಮೋರಯಾ... ಘೋಷಣೆಗಳು ಮೊಳಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.