ಪ್ರಜಾವಾಣಿ ವಾರ್ತೆ
ಕಲಬುರಗಿ: ‘ಅಹಿಂಸಾ ಹೋರಾಟದಿಂದ ಏನನ್ನಾದರೂ ಸಾಧನೆ ಮಾಡಬಹುದು ಎಂದು ನಿರೂಪಿಸಿದ ಮಹಾತ್ಮ ಗಾಂಧಿ ಅವರ ಅಹಿಂಸಾತತ್ವ, ತ್ಯಾಗ ನಮಗೆ ದಾರಿದೀಪವಾಗಿದೆ’ ಎಂದು ಭಾರತ ಸೇವಾದಳ ಜಿಲ್ಲಾ ಸಮಿತಿ ಅಧ್ಯಕ್ಷರೂ ಆದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಭಾರತ ಸೇವಾದಳ ಜಿಲ್ಲಾ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಅವರ 156ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗಾಂಧೀಜಿ ಅವರು 21 ವರ್ಷಗಳ ಕಾಲ ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿ ನಾಗರಿಕ ಹಕ್ಕುಗಳಿಗಾಗಿ, ಹಿಂಸೆ, ಶೋಷಣೆಯ ವಿರುದ್ಧ ಹೋರಾಟ ಮಾಡಿದ್ದರು. 1915ರಲ್ಲಿ ಭಾರತಕ್ಕೆ ಬಂದು ದೇಶದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, ಅಹಿಂಸೆಯ ಮೂಲಕವೇ ಸ್ವಾತಂತ್ರ್ಯ ತಂದುಕೊಟ್ಟರು’ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿ ಸವಿತಾ ಬಿ.ನಾಸಿ ವಿಶೇಷ ಉಪನ್ಯಾಸ ನೀಡಿ, ‘ಒಬ್ಬ ಹೆಣ್ಣು ಮಧ್ಯರಾತ್ರಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿದಾಗ ನಿಜವಾದ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ ಎಂದು ಗಾಂಧೀಜಿ ಹೇಳಿದ್ದರು. ಆದರೆ, ಇಂದು ಹಗಲು ಹೊತ್ತೇ ಮಹಿಳೆಯರು ಸುರಕ್ಷಿತವಾಗಿಲ್ಲ. ವರದಿಯ ಪ್ರಕಾರ ಪ್ರತಿ ಒಂದು ಗಂಟೆಯೊಳಗೆ ಅತ್ಯಾಚಾರ, ಆತ್ಮಹತ್ಯೆ ಸೇರಿ 17 ಅಪರಾಧಗಳು ನಡೆದಿರುತ್ತವೆ. ಇದು ಗಾಂಧೀಜಿಯವರ ಕನಸಾ? ನಾವು ಯೋಚಿಸಬೇಕಿದೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ಶ್ರೀಶೈಲ ಸಾರಂಗಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಮೌಲಾನಾ ಸೈಯದ್ ಖಾಸಿಂ ಬುಖಾರಿ ಖಾದ್ರಿ, ಸಂಕಲ್ಪ ವಿಹಾರ ಮತ್ತು ಧಮ್ಮ ತರಬೇತಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷೆ ಭಿಕ್ಕುಣಿ ಸುಮನ, ಸಂತ ಮೇರಿ ಚರ್ಚ್‍ನ ಫಾದರ್ ಆರಿಯೋನ್ ವಾಸ್, ಬೆಂಗಳೂರಿನ ಕರ್ನಾಟಕ ಜೈನ್ ಅಸೋಸಿಯೇಶನ್ ಕಾರ್ಯಕಾರಿ ಸಮಿತಿ ಸದಸ್ಯ ದೀಪಕ್ ಪಂಡಿತ್ ಹಾಗೂ ಗುರು ನಾನಕ್ ಮಠದ ಭಾಯ್‍ದೀಪ್ ಸಿಂಗ್ (ಗ್ರಂಥಿ) ಅವರು ಧರ್ಮಸಂದೇಶ ಸಾರಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯೂ ಇರುವ ಪ್ರಯುಕ್ತ ಗಾಂಧೀಜಿ ಜೊತೆಗೆ ಶಾಸ್ತ್ರಿ ಅವರ ಭಾವಚಿತ್ರಕ್ಕೂ ಪೂಜೆ ಸಲ್ಲಿಸಲಾಯಿತು.
ಶಾಸಕ ಅಲ್ಲಮಪ್ರಭು ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಸಾಹಿತಿ ಚಿ.ಸಿ.ನಿಂಗಣ್ಣ, ಸುರೇಶ ಬಡಿಗೇರ ಉಪಸ್ಥಿತರಿದ್ದರು.
ಶ್ರೀಧರ ಹೊಸಮನಿ ಹಾಗೂ ತಂಡದವರು ಗಾಯನ ಮಾಡಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಜಡಿಯಪ್ಪ ಗೆದ್ಲಗಟ್ಟಿ ಸ್ವಾಗತಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು. ಭಾರತ ಸೇವಾದಳ ಜಿಲ್ಲಾ ಸಮಿತಿಯ ಚಂದ್ರಶೇಖರ ಜಮಾದಾರ ವಂದಿಸಿದರು.
ಸರ್ವಧರ್ಮೀಯರಿಗೆ ವೇದಿಕೆ ಒದಗಿಸಿದ ಕಾರ್ಯಕ್ರಮ | ಗಾಂಧಿ ಪ್ರಿಯ, ಸದ್ಭಾವನಾ ಗೀತೆಗಳ ಗಾಯನ | ಭಾರತ ಸೇವಾದಳದಿಂದ ಸರ್ವಧರ್ಮೀಯ ಪ್ರಾರ್ಥನೆ
ಜೈ ಜವಾನ್ ಜೈ ಕಿಸಾನ್ ಘೋಷಣೆಯೊಂದಿಗೆ ಈ ದೇಶಕ್ಕೆ ರೈತ ಮತ್ತು ಸೈನಿಕ ಇಬ್ಬರೂ ಅಗತ್ಯ ಎಂದು ಸಾರಿದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದಕ್ಷ ಪ್ರಧಾನಿಯಾಗಿದ್ದರುಶಶೀಲ್ ಜಿ.ನಮೋಶಿ ವಿಧಾನ ಪರಿಷತ್ ಸದಸ್ಯ
ಪ್ರಬಂಧ ಸ್ಪರ್ಧೆ; ನಗದು ಬಹುಮಾನ
ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ₹3 ಸಾವಿರ ದ್ವಿತೀಯ ₹2 ಸಾವಿರ ಮತ್ತು ತೃತೀಯ ₹1 ಸಾವಿರ ನಗದು ಬಹುಮಾನ ವಿತರಣೆ ಮಾಡಲಾಯಿತು. ಪ್ರೌಢಶಾಲಾ ವಿಭಾಗ: ಪ್ರದೀಪ್ ಪಿ.ಕೆ.–1 ಮಾಣಿಕಮ್ಮ ಎಸ್.–2 ವಿಜಯಲಕ್ಷ್ಮೀ ಎಚ್–3; ಪದವಿಪೂರ್ವ ವಿಭಾಗ: ಭಾಗ್ಯಲಕ್ಷ್ಮೀ ಅಶೋಕ–1 ಶಿವಾನಿ ಮಲ್ಲಿಕಾರ್ಜುನ–2 ತೈರುಮ್‌ನಿಸಾ–3; ಪದವಿ–ಸ್ನಾತಕೋತ್ತರ ವಿಭಾಗ: ಅಲಿಶಾ ಮಹೆಬೂಬ್–1 ಶೃತಿ ನಾರಾಯಣ–2 ಅನುಪ್ರಿಯಾ ಮಾಳಗೆ–3
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.