ಬಸವಕಲ್ಯಾಣ: ಗಣೇಶ ಚತುರ್ಥಿಗೆ ಎಲ್ಲೆಡೆ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಹಬ್ಬ ಆಚರಿಸಲಾಗುತ್ತದೆ. ಆದರೆ, ತಾಲ್ಲೂಕಿನ ಉಮಾಪುರದಲ್ಲಿ ಹಳೆಯ ಕಾಲದ ದೇವಸ್ಥಾನದಲ್ಲಿನ ಗಣೇಶನ ವಿಗ್ರಹಕ್ಕೆ ವಾರದಿಂದ ಪೂಜೆ ಸಲ್ಲಿಸಿ ಜಾತ್ರೆ ಆಯೋಜಿಸಲಾಗುತ್ತದೆ. ಸಾವಿರಾರು ಜನರು ಪಾಲ್ಗೊಳ್ಳುವ ಈ ಭಾಗದಲ್ಲಿನ ಏಕೈಕ ಗಣಪತಿ ಜಾತ್ರೆ ಇದಾಗಿದೆ.
ನಗರಕ್ಕೆ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಉತ್ತರಕ್ಕೆ ಉಮಾಪುರವಿದೆ. ಊರಿನ ಅನೇಕ ಕಡೆ ಮತ್ತು ಸುತ್ತಲಿನಲ್ಲಿ ಹಲವಾರು ಐತಿಹಾಸಿಕ ಸ್ಥಳಗಳಿವೆ. ಊರು ಮತ್ತು ರಾಷ್ಟ್ರೀಯ ಹೆದ್ದಾರಿ ಮಧ್ಯದ ಭಾಗಕ್ಕೆ ರಾಯವಾಡೆ ಭಾಗ ಎಂದು ಕರೆಯಲಾಗುತ್ತದೆ. ಇಲ್ಲಿ ಬಿಜ್ಜಳನ ಅರಮನೆ ಇತ್ತು. ಅದರ ಕೆಲ ಕುರುಹುಗಳಿವೆ ಎಂಬುದು ಗ್ರಾಮಸ್ಥರ ಅನಿಸಿಕೆಯಾಗಿದೆ.
ಹೀಗೆ ಚಾಲುಕ್ಯರು ಹಾಗೂ ಕಲಚೂರಿ ಬಿಜ್ಜಳನ ಕಾಲದ ಕೆಲ ಅವಶೇಷಗಳು, ಸುಂದರ ಶಿಲ್ಪಕಲಾಕೃತಿಗಳು ಅಲ್ಲಲ್ಲಿ ಚೆದುರಿದ್ದು ಜೊತೆಗೆ ಇದಕ್ಕೂ ಹಳೆಯ ನಾಗರ ಶೈಲಿಯ ಗೋಪುರಗಳುಳ್ಳ ಉಮಾ -ಮಹೇಶ್ವರನ ದೇವಸ್ಥಾನಗಳಿವೆ. ಎರಡೂ ಗೋಪುರಗಳು ಒಂದಕ್ಕೊಂದು ಹೋಲುತ್ತವೆ. ಎತ್ತರದ ನಕ್ಷತ್ರಾಕಾರದ ಅಧಿಷ್ಠಾನದ ಮೇಲೆ ಸುಂದರ ಕೆತ್ತನೆಯ ಕಲ್ಲುಗಳ ಗರ್ಭಗೃಹಗಳಿವೆ. ಪೂರ್ವಾಭಿಮುಖವಾದ ಈ ದೇವಸ್ಥಾನಗಳ ಎದುರಲ್ಲಿ ಮುಖಮಂಟಪ ಮತ್ತು ಸಭಾ ಮಂಟಪಗಳಿವೆ. ಗೋಡೆಯಲ್ಲಿ ಆಕರ್ಷಕ ಪ್ರಭಾವಳಿ, ವಿವಿಧ ಭಂಗಿಯ ಶಿಲ್ಪಗಳು, ವೀರಗಲ್ಲುಗಳಿವೆ. ಪ್ರಾಚ್ಯವಸ್ತು ಇಲಾಖೆಯಿಂದ ಶಿಥಿಲ ಗೋಡೆಗಳನ್ನು ಕೆಡವಿ ಪುನರ್ ನಿರ್ಮಿಸಲಾಗಿದೆ. ದೇವಸ್ಥಾನ ಸಮಿತಿಯಿಂದ ಆವರಣಗೋಡೆ, ದಾಸೋಹ ಕೊಠಡಿ ಕಟ್ಟಲಾಗಿದೆ.
ಎದುರಿನ ಉತ್ತರಾಭಿಮುಖವಾದ ಆಳೆತ್ತರ ಗಣೇಶನಿಗೆ ಮಾತ್ರ ಯಾವುದೇ ಆಸರೆ ಇಲ್ಲ. ಎತ್ತರದ ಕಟ್ಟೆಯ ಮೇಲಿನ ಈ ವಿಗ್ರಹಕ್ಕೆ ಹಬ್ಬಗಳಂದು ಅನೇಕರು ನೈವೇದ್ಯ ಅರ್ಪಿಸಿ ಹರಕೆ ತೀರಿಸುತ್ತಾರೆ. ಚತುರ್ಥಿ ದಿನದಿಂದ, ಹರಿನಾಮ ಸಪ್ತಾಹ ಮತ್ತಿತರೆ ಕಾರ್ಯಕ್ರಮಗಳು ನಡೆದು 11ನೇ ದಿನಕ್ಕೆ ಮೊಸರಿನ ಗಡಿಗೆ ಒಡೆಯುವ ಗೋಪಾಲಕಾಲಾ ಆಯೋಜಿಸುವ ಸಂಪ್ರದಾಯವಿದೆ. ಸೆ.5ರಂದು ಧ್ವಜ, ಮಂತ್ರದಂಡ ಮತ್ತು ಪಲ್ಲಕ್ಕಿ ಮೆರವಣಿಗೆ ನಡೆಯುವುದು. ಮರುದಿನ ಇಡೀ ದಿನ ಮಹಾಪ್ರಸಾದ ವಿತರಿಸಲಾಗುತ್ತದೆ. ತೆಲಂಗಾಣ, ಮಹಾರಾಷ್ಟ್ರದ ಭಕ್ತರೂ ಪಾಲ್ಗೊಳ್ಳುತ್ತಾರೆ.
ಜಿಲ್ಲೆಯಲ್ಲಿಯೇ ಅತಿ ಪುರಾತನ ತಾಣ ಹರಿನಾಮ ಸಪ್ತಾಹ | ಭಜನೆ ಆಯೋಜನೆ ಸೆ.5ಕ್ಕೆ ಪಲ್ಲಕ್ಕಿ ಉತ್ಸವ | 6ಕ್ಕೆ ಮಹಾಪ್ರಸಾದ
ಜಾತ್ರೆಗೆ ಜನಪ್ರತಿನಿಧಿಗಳು ರಾಜ್ಯ ಮತ್ತು ಮಹಾರಾಷ್ಟ್ರದ ಅಪಾರ ಭಕ್ತರು ಬರುವುದರಿಂದ ದೇವಸ್ಥಾನದ ಸುತ್ತಲಿನಲ್ಲಿ ಸ್ವಚ್ಛತೆ ಇತರೆ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆಮಲ್ಲನಗೌಡ ಪಾಟೀಲ ಪಿಡಿಒ
ಉಮಾಪುರ- ಲಾಹೇಶ್ವರ ಎರಡು ಊರು
ಇಡೀ ಗ್ರಾಮವನ್ನು ಉಮಾಪುರ ಎಂದೇ ಕರೆಯಲಾಗುತ್ತದೆ. ಆದರೆ ಕಂದಾಯ ಇಲಾಖೆ ದಾಖಲೆಗಳಂತೆ ಹಾಗೂ ಮೌಖಿಕವಾಗಿ ಊರಿನ ಪೂರ್ವದ ಅರ್ಧ ಭಾಗ ಮತ್ತು ಪಶ್ಚಿಮದ ಭಾಗವನ್ನು ಉಮಾಪುರ ಮತ್ತು ಲಾಹೇಶ್ವರ ಎಂದು ಎರಡು ಹೆಸರಿನಿಂದ ಗುರುತಿಸಲಾಗುತ್ತದೆ. ಉಮಾ ಮತ್ತು ಮಹೇಶ್ವರ ಜೋಡಿ ದೇವಸ್ಥಾನಗಳಿರುವ ಕಾರಣ ಹೀಗೆ ಕರೆದಿರಬಹುದು. ಮಹೇಶ್ವರ ಎಂಬುದು ಲಾಹೇಶ್ವರ ಆಗಿರುವ ಸಾಧ್ಯತೆ ಇದೆ. ಆದರೆ ಹಳ್ಳಿಯನ್ನು ಎರಡು ಭಾಗದಲ್ಲಿ ಏಕೆ ಪ್ರತ್ಯೇಕಿಸಲಾಗಿದೆ ಎಂಬ ಮಾಹಿತಿ ಮಾತ್ರ ದೊರಕುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.