ADVERTISEMENT

ಕಲಬುರಗಿ: ಗಣೇಶ ವಿಸರ್ಜನಾ ಮೆರವಣಿಯಲ್ಲಿ ಹಲ್ಲೆ; ಮೂವರು ಆರೋಪಿಗಳ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 5:00 IST
Last Updated 2 ಸೆಪ್ಟೆಂಬರ್ 2025, 5:00 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಕಲಬುರಗಿ: ಐದನೇ ದಿನದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ಅವಾಚ್ಯವಾಗಿ ನಿಂದಿಸಿದ್ದನ್ನು ಪ್ರಶ್ನಿಸಿದವರ ಮೇಲೆ ಮೂವರು ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ನಗರದ ದುಬೈ ಕಾಲೊನಿ ನಿವಾಸಿಗಳಾದ ಶರಣಕುಮಾರ ರಟಕಲ್‌, ಮಲ್ಲಿಕಾರ್ಜುನ ರಟಕಲ್‌ ಹಲ್ಲೆಗೊಳಗಾಗಿ ಗಾಯಗೊಂಡವರು.

‘ಸಂಜಯಗಾಂಧಿ ನಗರದ ದುಬೈ ಕಾಲೊನಿಯ ಬಜರಂಗ ಗುಡಿಯಲ್ಲಿ ಕೂರಿಸಿದ ಗಣಪತಿ ವಿಸರ್ಜನೆ ವೇಳೆ ನನ್ನ ಮಗ ಮಲ್ಲಿಕಾರ್ಜುನ ನೃತ್ಯ ಮಾಡುವಾಗ ರೇವಣಸಿದ್ದಪ್ಪ ನಿಗ್ಗುಡಗಿ ಅವಾಚ್ಯವಾಗಿ ನಿಂದಿಸಿದ್ದ. ಯಾಕೆ ಹೊಲಸು ಬೈಯುತ್ತಿಯಾ ಎಂದು ಮಲ್ಲಿಕಾರ್ಜನ ಪ್ರಶ್ನಿಸಿದ್ದ. ಆಗ ರೇವಣಸಿದ್ದಪ್ಪ ಹಾಗೂ ಇತರ ಇಬ್ಬರು ಸೇರಿ ಹೊಡೆದಾಡುತ್ತಿದ್ದಾಗ ಜಗಳ ಬಿಡಿಸಿ ಮನೆಗೆ ಕರೆ ತಂದೆ. ಈ ವಿಷಯ ತಿಳಿದ ನನ್ನ ಇನ್ನೊಬ್ಬ ಮಗ ಶರಣಕುಮಾರ ಹಲ್ಲೆ ಪ್ರಶ್ನಿಸಲು ಗುಡಿಯತ್ತ ಹೋದ. ನಾನೂ ಹಿಂದೆಯೇ ಹೋದೆ. ರೇವಣಸಿದ್ದಪ್ಪ ಹಾಗೂ ಆತನೊಂದಿಗೆ ಇರುವವರನ್ನು ನನ್ನ ಮಗ ಶರಣಕುಮಾರ ಪ್ರಶ್ನಿಸಿದಾಗ ಬೈಕ್‌ನ ಡಿಕ್ಕಿಯಲ್ಲಿದ್ದ ಚಾಕು ತೆಗೆದು ಹಲ್ಲೆ ಮುಂದಾದರು’ ಎಂದು ದೂರಿನಲ್ಲಿ ಚನ್ನಪ್ಪ ರಟಕಲ್ ತಿಳಿಸಿದ್ದಾರೆ.

‘ನಮ್ಮನ್ನು ಹಿಂಬಾಲಿಸಿಕೊಂಡು ಬಂದ ರೇವಣಸಿದ್ದಪ್ಪ ಮತ್ತು ಆರ್.ಕೆ.ಮಲ್ಲು ಹಾಗೂ ಇನ್ನೊಬ್ಬ ಸೇರಿಕೊಂಡು ಮನೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ, ನನ್ನ ಮಗ ಶರಣಕುಮಾರನನ್ನು ಹೊರಗೆ ಎಳೆದುಕೊಂಡು ಬಂದು ಚಾಕುವಿನಿಂದ ಬೆನ್ನು ಹಾಗೂ ಭುಜದ ಮೇಲೆ ಹೊಡೆದು ಗಾಯಗೊಳಿಸಿದರು. ಬಳಿಕ ಒಂದು ಕಲ್ಲು ಮತ್ತು ಒಂದು ಇಟ್ಟಿಗೆ ತೆಗೆದುಕೊಂಡು ನನ್ನ ಮಗನ ತಲೆ ಮೇಲೆ ಹೊಡೆದರು’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಈ ಕುರಿತು ಮೂವರ ವಿರುದ್ಧ ಚೌಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜಾಟ: ಪ್ರಕರಣ ದಾಖಲು

ಕಲಬುರಗಿಯ ಶಿವಶಕ್ತಿ ಬಡಾವಣೆಯ ಭವಾನಿ ನಗರದ ಗ್ಯಾರೇಜ್‌ ಎದುರಿನ ಖಾಲಿ ಜಾಗದಲ್ಲಿ ಇಸ್ಪೀಟ್‌ ಆಡುತ್ತಿದ್ದ ಆರೋಪದಡಿ ನಾಲ್ವರ ವಿರುದ್ಧ ಚೌಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳಿಂದ ₹ 20,230 ಜಪ್ತಿ ಮಾಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.