ADVERTISEMENT

ಜೆಸ್ಕಾಂಗೆ ಬರಬೇಕಿದೆ ₹ 1065 ಕೋಟಿ ಸಬ್ಸಿಡಿ ಹಣ!

ಸಬ್ಸಿಡಿ ಮೊತ್ತ ನೀಡಲು ರಾಜ್ಯ ಸರ್ಕಾರ ಮೀನಮೇಷ ಆರೋ‍ಪ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 9:20 IST
Last Updated 13 ಫೆಬ್ರುವರಿ 2020, 9:20 IST

ಕಲಬುರ್ಗಿ: ವಿದ್ಯುತ್‌ ವಿತರಣೆ ಸಂದರ್ಭದಲ್ಲಿ ಜನಪ್ರಿಯ ಯೋಜನೆ ಪ್ರಕಟಿಸುವ ರಾಜ್ಯ ಸರ್ಕಾರ ವಿವಿಧ ಯೋಜನೆಗಳಡಿ ಬಡವರಿಗೆ ವಿದ್ಯುತ್‌ ಪೂರೈಸಿದ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ)ಗೆ ನೀಡಬೇಕಿದ್ದನ ₹ 1065 ಕೋಟಿ ಸಬ್ಸಿಡಿಯನ್ನು ಬಾಕಿ ಉಳಿಸಿಕೊಂಡಿದೆ ಎಂದು ಹೈದರಾಬಾದ್‌ ಕರ್ನಾಟಕ ಪರಿಸರ ಜಾಗೃತಿ ಮತ್ತು ಹಿತರಕ್ಷಣಾಸಂಸ್ಥೆಯ ಅಧ್ಯಕ್ಷ ದೀಪಕ್‌ ಗಾಲಾ ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗಾಲಾ, ‘2007–08ನೇ ಸಾಲಿನಲ್ಲಿ ₹ 527.55 ಕೋಟಿ ಸಬ್ಸಿಡಿ ಮೊತ್ತವನ್ನು ಜೆಸ್ಕಾಂಗೆ ಪಾವತಿಸಬೇಕಿತ್ತು. ಪ್ರತಿವರ್ಷವೂ ಆ ಮೊತ್ತ ಹಾಗೆಯೇ ಉಳಿದು ನವೆಂಬರ್‌ 2019ರ ವೇಳೆಗೆ ₹ 1065.63 ಕೋಟಿಗೆ ತಲುಪಿದೆ. ಸರ್ಕಾರ ಸಕಾಲಕ್ಕೆ ಸಬ್ಸಿಡಿ ಪಾವತಿ ಮಾಡದೇ ಇದ್ದುದರಿಂದ ಜೆಸ್ಕಾಂ ವಿದ್ಯುತ್‌ ಖರೀದಿಸಲು ಸಾಲ ಮಾಡಬೇಕಾದ ಪರಿಸ್ಥಿತಿಗೆ ಬಂದಿದೆ. ಜೊತೆಗೆ, ತನ್ನ ಭಾರವನ್ನು ಇಳಿಸಿಕೊಳ್ಳಲು ಗ್ರಾಹಕರ ಮೇಲೆ ವಿದ್ಯುತ್‌ ದರ ಹೆಚ್ಚಳದ ಹೊರೆಯನ್ನು ಹೊರಿಸಲು ಮುಂದಾಗಬೇಕಿದೆ. ಈ ಬಗ್ಗೆ ರಾಜ್ಯ ಸರ್ಕಾರ ತಕ್ಷಣವೇ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗಕ್ಕೂ (ಕೆಇಆರ್‌ಸಿ) ದೂರು ನೀಡಿರುವ ಗಾಲಾ, 2007–08ರಿಂದ ಇಲ್ಲಿಯವರೆಗೆ ಸಬ್ಸಿಡಿ ಮೊತ್ತಕ್ಕೆ ಶೇ 12ರಷ್ಟು ವಾರ್ಷಿಕ ಬಡ್ಡಿ ದರವನ್ನು ಪಾವತಿಸಬೇಕು. ಇದು ವಿದ್ಯುತ್ ಕಾಯ್ದೆ–2003ರಲ್ಲಿಯೇ ಸ್ಪಷ್ಟವಾಗಿದ್ದು, ಸರ್ಕಾರ ವಿದ್ಯುತ್‌ ಸರಬರಾಜು ಕಂಪನಿಗಳಿಗೆ ನೀಡಬೇಕಾದ ಸಬ್ಸಿಡಿ ಬಾಕಿ ಹಾಗೂ ಬಡ್ಡಿಯನ್ನು ವಿಧಿಸಲು ಯಾವುದೇ ವಿನಾಯಿತಿ ನೀಡಿಲ್ಲ. ಹಾಗಾಗಿ, ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಗ್ರಾಹಕರು ವಿದ್ಯುತ್ ಬಿಲ್‌ ಪಾವತಿಸಲು ವಿಳಂಬ ಮಾಡಿದರೆ ಅವರಿಂದ ಜೆಸ್ಕಾಂ ಬಡ್ಡಿ ವಸೂಲಿ ಮಾಡುತ್ತದೆ. ತನಗೆ ಬರಬೇಕಾದ ಬಾಕಿಗೆ ಬಡ್ಡಿಯನ್ನು ಏಕೆ ಆಕರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

2018ರಲ್ಲಿ ವಿದ್ಯುತ್‌ ನಿಯಂತ್ರಣ ಆಯೋಗಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ ಮೇಲಷ್ಟೇ ಜೆಸ್ಕಾಂ ಸಬ್ಸಿಡಿ ಬಾಕಿಗೆ ಬಡ್ಡಿ ಹಣವನ್ನೂ ಸೇರಿಸಿ ನೀಡಬೇಕು ಎಂದು ಇಂಧನ ಇಲಾಖೆಗೆ ಪತ್ರ ಬರೆಯಿತು. ಆದರೆ, ಇಲಾಖೆ ಈ ಪ್ರಸ್ತಾವವನ್ನು ತಿರಸ್ಕರಿಸಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.