ADVERTISEMENT

ಚಿಂಚೋಳಿ | ಕುಸಿದ ಹಸಿಶುಂಠಿ ದರ: ಬೆಳೆಗಾರರಿಗೆ ಸಂಕಷ್ಟ

ಜಗನ್ನಾಥ ಡಿ.ಶೇರಿಕಾರ
Published 1 ಫೆಬ್ರುವರಿ 2025, 4:57 IST
Last Updated 1 ಫೆಬ್ರುವರಿ 2025, 4:57 IST
ಚಿಂಚೋಳಿ ತಾಲ್ಲೂಕಿನ ಶಿವರಾಂಪುರ ಗ್ರಾಮದ ಉಮಾಪತಿ ಅವರ ಹೊಲದಲ್ಲಿ ಹುಲುಸಾಗಿ ಬೆಳೆದ ಹಸಿಶುಂಠಿ ಬೆಳೆ ಆಕರ್ಷಿಸುತ್ತಿದೆ
ಚಿಂಚೋಳಿ ತಾಲ್ಲೂಕಿನ ಶಿವರಾಂಪುರ ಗ್ರಾಮದ ಉಮಾಪತಿ ಅವರ ಹೊಲದಲ್ಲಿ ಹುಲುಸಾಗಿ ಬೆಳೆದ ಹಸಿಶುಂಠಿ ಬೆಳೆ ಆಕರ್ಷಿಸುತ್ತಿದೆ   

ಚಿಂಚೋಳಿ: ಹಸಿಶುಂಠಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ತಾಲ್ಲೂಕಿನ ಬೆಳೆಗಾರರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಇಲ್ಲಿ ಸುಮಾರು 130ರಿಂದ 150 ಎಕರೆ ಪ್ರದೇಶದಲ್ಲಿ ಹಸಿ ಶುಂಠಿ ಬೆಳೆಯಲಾಗುತ್ತಿದೆ.

ಬೆಳೆಗಾರರು ಇಲ್ಲಿಗೆ ಸಮೀಪದ ತೆಲಂಗಾಣ ರಾಜಧಾನಿ ಹೈದರಾಬಾದ್‌ ಮಾರುಕಟ್ಟೆಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಪ್ರಸ್ತುತ ಹೈದರಾಬಾದ್‌ ಮಾರುಕಟ್ಟೆಯಲ್ಲಿ ಕೆಜಿಗೆ ₹ 35 ರಿಂದ ₹110 ದರವಿದೆ. ಕರ್ನಾಟಕದಲ್ಲಿ ಕನಿಷ್ಠ ₹11ರಿಂದ ₹75 ದರವಿದೆ. ಉತ್ಕೃಷ್ಟ ಗುಣಮಟ್ಟದ ಹಸಿಶುಂಠಿ ₹ 5000 ಕ್ಕೂ ಅಧಿಕ ದರ ದೊರೆಯುತ್ತಿದೆ.

ಮಾರುಕಟ್ಟೆಯಲ್ಲಿ ದರ ಕುಸಿತ ಮುಂದುವರಿದಿದ್ದು, ಬೆಳೆಗಾರರರಲ್ಲಿ ನಷ್ಟದ ಭೀತಿ ಹೆಚ್ಚಿದೆ. ತಾಲ್ಲೂಕಿನ ಶಿವರಾಂಪುರ, ಮೊಗದಂಪುರ, ಪೋಚಾವರಂ, ಶಿವರೆಡ್ಡಿಪಳ್ಳಿ, ಕುಂಚಾವರಂ, ಸಲಗರ ಬಸಂತಪುರ ಸೇರಿದಂತೆ ಮೊದಲಾದ ಕಡೆಗಳಲ್ಲಿ ಸುಮಾರು ನೂರಾರು ಎಕರೆ ಪ್ರದೇಶದಲ್ಲಿ ಹಸಿ ಶುಂಠಿ ಬೆಳೆಯಲಾಗುತ್ತದೆ.

ADVERTISEMENT

ಇಲ್ಲಿ ಮರಳು ಮತ್ತು ಮುರುಮ್ ಮಿಶ್ರಿತ ಕೆಂಪು ಮಣ್ಣಿನ ಜಮೀನುಗಳಿದ್ದು, ಹಸಿಶುಂಠಿ ಬೇಸಾಯಕ್ಕೆ ಪೂರಕವಾಗಿದೆ. ಹೀಗಾಗಿ ನೀರಾವರಿ ಸೌಲಭ್ಯವುಳ್ಳವರು ಹಸಿಶುಂಠಿ ಬೇಸಾಯ ಮಾಡುತ್ತಿದ್ದಾರೆ.

ಇಲ್ಲಿನ ರೈತರು ಔರಂಗಾಬಾದ್‌ ಮತ್ತು ಕೇರಳ ತಳಿಯ ಹಸಿಶುಂಠಿ ಬೆಳೆಯುತ್ತಿದ್ದು, ಸದ್ಯ ತೋಟದಲ್ಲಿ 9 ತಿಂಗಳ ಬೆಳೆಯಿದೆ. ಬೆಳೆ ಮಾಗುವ ಹಂತದಲ್ಲಿದ್ದು, ಎರಡು ತಿಂಗಳಲ್ಲಿ ಭೂಮಿಯಿಂದ ತೆಗೆದು ಮಾರಾಟ ಮಾಡಬಹುದಾಗಿದೆ.

ವ್ಯಾಪಾರಿಗಳು(ದಲ್ಲಾಳಿಗಳು) ರೈತರ ಹೊಲಕ್ಕೆ ಬಂದು ಉತ್ಪನ್ನ ಖರೀದಿಸುತ್ತಾರೆ. 2/3 ಎಕರೆ ಪ್ರದೇಶದಲ್ಲಿ ಹಸಿ ಶುಂಠಿ ಬೆಳೆದ ರೈತರು ದಲ್ಲಾಳಿಗಳನ್ನು ಅಲವಂಬಿಸಿದರೆ, 5 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೇಸಾಯ ನಡೆಸುವ ಬೆಳೆಗಾರರು ತಮ್ಮ ಉತ್ಪನ್ನವನ್ನು ಸ್ವತಃ ಹೈದರಾಬಾದ್‌ಗೆ ಸಾಗಿಸಿ ಮಾರಾಟ ಮಾಡುತ್ತಾರೆ ಎಂದು ಬೆಳೆಗಾರ ಉಮಾಪತಿ ಶಿವರಾಂಪುರ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ಎಕರೆ ಹಸಿಶುಂಠಿ ಬೇಸಾಯಕ್ಕೆ ಅಂದಾಜು ₹1.25 ಲಕ್ಷದಿಂದ ₹ 1.5 ಲಕ್ಷ ಖರ್ಚು ತಗುಲುತ್ತದೆ. ಹೆಚ್ಚಿನ ರೈತರು ಒಂದು ಎಕರೆ ಅದಕ್ಕಿಂತ ಕಡಿಮೆ ಪ್ರದೇಶದಲ್ಲಿ ಬೇಸಾಯ ನಡೆಸಿದರೆ, ಆರ್ಥಿಕವಾಗಿ ಅನುಕೂಲ ಹೊಂದಿರುವ ಮತ್ತು ಹಸಿಶುಂಠಿ ಬೇಸಾಯದ ಅನುಭವ ಹೊಂದಿರುವ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೇಸಾಯ ನಡೆಸುತ್ತಾರೆ.

ಪ್ರತಿ ಎಕರೆಗೆ 7 ಟನ್‌ಗಳಿಂದ 10 ಟನ್‌ಗಳವರಗೆ ಇಳುವರಿ ಲಭಿಸುತ್ತದೆ. ಸದ್ಯದ ಮಾರುಕಟ್ಟೆಯ ದರ ಮುಂದುವರಿದರೆ ಬೆಳೆಗಾರರಿಗೆ ಬೆಳೆ ನಿರ್ವಹಣೆಗೆ ಮಾಡಿದ ವೆಚ್ಚವು ಹಿಂದಿರುವುದು ಕಷ್ಟಸಾಧ್ಯವಾಗಿದೆ. ಹೀಗಾಗಿ ರೈತರು ನಷ್ಟದ ಆತಂಕದಲ್ಲಿದ್ದಾರೆ. ಚಿಂಚೋಳಿ ತಾಲ್ಲೂಕು ಅರೆಮಲೆನಾಡು ಪ್ರದೇಶವಾಗಿದೆ. ಇಲ್ಲಿ ತೋಟಗಾರಿಕಾ ಬೆಳೆಗಳು ಮತ್ತು ಹಣ್ಣು ಹಂಪಲು ಬೇಸಾಯಕ್ಕೆ ಪೂರಕ ವಾತಾವರಣವಿದೆ. ಆದರೆ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಇಲ್ಲದೇ ಬೆಳೆಗಾರರು ತೊಂದರೆಗೆ ಒಳಗಾಗುತ್ತಿದ್ದಾರೆ.

130 ರಿಂದ150 ಎಕರೆಯಲ್ಲಿ ಹಸಿಶುಂಠಿ ಬೇಸಾಯ ಎಕರೆಗೆ 7 ರಿಂದ 10 ಟನ್ ಇಳುವರಿ ಹೈದರಾಬಾದ್‌ ಮಾರುಕಟ್ಟೆ ಅವಲಂಬನೆ
ಸುಮಾರು 10 ಎಕರೆಯಲ್ಲಿ ಹಸಿಶುಂಠಿ ಬೆಳೆಯುತ್ತಿದ್ದೇನೆ. ದರ ಕುಸಿತ ಮುಂದುವರಿದರೆ ಶುಂಠಿಯನ್ನು ನೆಲದಿಂದ ತೆಗೆಯುವುದಿಲ್ಲ. ನೆಲದಲ್ಲಿ ಇದು ಕೆಡುವುದಿಲ್ಲ. ಉತ್ತಮ ದರ ಬಂದಾಗ ತೆಗೆಯುತ್ತೇನೆ
ಉಮಾಪತಿ ಶಿವರಾಂಪುರ ಹಸಿಶುಂಠಿ ಬೆಳೆಗಾರರ
10 ವರ್ಷಗಳಿಂದ ಹಸಿಶುಂಠಿ ಬೇಸಾಯ ಮಾಡುತ್ತಿದ್ದೇನೆ. ಕಳೆದ ವರ್ಷ ಕ್ವಿಂಟಲ್‌ಗೆ ₹ 10-15 ಸಾವಿರ ದರ ಲಭಿಸಿದೆ. ಪ್ರಸಕ್ತ ವರ್ಷ ಮೇನಲ್ಲಿ ದರ ಹೆಚ್ಚುವ ವಿಶ್ವಾಸವಿದೆ
ಶೇಖರ ಮಾಮಿಡಗಿ ಬೆಳೆಗಾರ ಶಿವರಾಂಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.