ADVERTISEMENT

ಉತ್ಸವದಲ್ಲಿ ಪಾಲ್ಗೊಳ್ಳದಂತೆ ಸರ್ಕಾರ ಮೌಖಿಕ ಸೂಚನೆ: ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 7:22 IST
Last Updated 3 ಫೆಬ್ರುವರಿ 2025, 7:22 IST
ಕಲಬುರಗಿ ಜಿಲ್ಲೆಯ ಸೇಡಂ ಹೊರವಲಯದಲ್ಲಿ ಭಾನುವಾರ ಭಾರತೀಯ ಸಂಸ್ಕೃತಿ ಉತ್ಸವದ ಆಹಾರ ಮತ್ತು ಆರೋಗ್ಯ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು 
–ಪ್ರಜಾವಾಣಿ ಚಿತ್ರ
ಕಲಬುರಗಿ ಜಿಲ್ಲೆಯ ಸೇಡಂ ಹೊರವಲಯದಲ್ಲಿ ಭಾನುವಾರ ಭಾರತೀಯ ಸಂಸ್ಕೃತಿ ಉತ್ಸವದ ಆಹಾರ ಮತ್ತು ಆರೋಗ್ಯ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದರು  –ಪ್ರಜಾವಾಣಿ ಚಿತ್ರ   

ಸೇಡಂ (ಕಲಬುರಗಿ): ‘ಪಕ್ಷಾತೀತವಾದ ಭಾರತೀಯ ಸಂಸ್ಕೃತಿ ಉತ್ಸವದಲ್ಲೂ ರಾಜ್ಯ ಸರ್ಕಾರ ರಾಜಕಾರಣ ಮಾಡಿದೆ. ಯಾವುದೇ ಶಾಲಾ ಮಕ್ಕಳು, ಸರ್ಕಾರಿ ಅಧಿಕಾರಿಗಳು ಪಾಲ್ಗೊಳ್ಳದಂತೆ ಮೌಖಿಕ ಸೂಚನೆ ಕೊಟ್ಟಿದೆ. ಅದೇ ಸೂಚನೆ ಲಿಖಿತವಾಗಿ ಕೊಡುವ ಧೈರ್ಯವನ್ನೂ ಸರ್ಕಾರ ತೋರಿಲ್ಲ’ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ಉತ್ಸವದಲ್ಲಿ ಪಾಲ್ಗೊಂಡ ಬಳಿಕ ಭಾನುವಾರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಇದು ಧೈರ್ಯವಿಲ್ಲದ ಹಾಗೂ ನಮ್ಮ ವಿಚಾರಧಾರೆ ವಿರೋಧವುಳ್ಳ ಸರ್ಕಾರವಾಗಿದೆ. ಮಕ್ಕಳಲ್ಲಿ ಯಾಕೆ ವಿಷ ಬೀಜ ಬಿತ್ತಬೇಕು?’ ಎಂದು ಪ್ರಶ್ನಿಸಿದರು.

ADVERTISEMENT

‘ಕೊತ್ತಲ ಬಸವೇಶ್ವರ ವಿದ್ಯಾಸಂಸ್ಥೆ ಕಳೆದ ಎರಡ್ಮೂರು ದಶಕಗಳಲ್ಲಿ ಏನು ಮಾಡಿದೆ ಎಂಬುದನ್ನಾದರೂ ಸರ್ಕಾರ ಅಧ್ಯಯನ ಮಾಡಬೇಕಿತ್ತು. ಸ್ಥಳೀಯ ಶಾಸಕರೂ ಅದರ ಆಧಾರದಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರದ ನಿರ್ಧಾರದಿಂದ ನಮಗೆ ದುಃಖವಾಗಿದೆ’ ಎಂದ ಅವರು ‘ಕಲಬುರಗಿಯಲ್ಲೂ ಈ ಉತ್ಸವಕ್ಕೆ ವಿರೋಧ ಮಾಡಿರುವುದು ಯಾವುದಕ್ಕಾಗಿ?  ಭಾರತೀಯ ವಿಚಾರಧಾರೆ, ಕೃಷಿ ಪದ್ಧತಿ, ಆರೋಗ್ಯ ಪದ್ಧತಿ, ಕಲೆಯನ್ನೇ ಜನಕ್ಕೆ ಹೇಳಿಕೊಡುವುದು ತಪ್ಪೇ?’ ಎಂದು ಕೇಳಿದರು.

ಸರ್ಕಾರದ ವಿರೋಧದ ಬಗ್ಗೆ ಉತ್ಸವದ ಭಾಷಣದಲ್ಲೂ ಪ್ರಸ್ತಾಪಿಸಿದ ಸಚಿವರು, ‘ನಾವೆಲ್ಲ ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಆದರೆ, ಯಾವುದು ಸಂಸ್ಕೃತಿ ಉಳಿಸುತ್ತೆ, ಶಿಕ್ಷಣವನ್ನು ಮುಂದುವರಿಸುವ ಯತ್ನಗಳಿಗೆ ಪಕ್ಷ ರಾಜಕಾರಣ ಬಿಟ್ಟು ಬೆಂಬಲಿಸುವ ವಿಚಾರ ಕಲಿಯಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.