ADVERTISEMENT

ಗ್ರಾ.ಪಂ. ಸದಸ್ಯರ ಸ್ಥಾನ ₹26.55 ಲಕ್ಷಕ್ಕೆ ಹರಾಜು!

ಯಡ್ರಾಮಿ ತಾಲ್ಲೂಕಿನ ಬಿಳವಾರ ಗ್ರಾಮದ ವಿಡಿಯೊ ವೈರಲ್

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2020, 22:05 IST
Last Updated 5 ಡಿಸೆಂಬರ್ 2020, 22:05 IST

ಯಡ್ರಾಮಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಬಿಳವಾರ ಗ್ರಾಮದ ವಾರ್ಡ್ ಸಂಖ್ಯೆ 1ರ ನಾಲ್ಕು ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಸದಸ್ಯರ ಆಯ್ಕೆಗೆಹರಾಜು ಕೂಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ.

‌‘ಸಾಮಾನ್ಯ ವರ್ಗಕ್ಕೆ ಮೀಸಲಾದ ಸದಸ್ಯ ಸ್ಥಾನವನ್ನು ಪರಿಶಿಷ್ಟ ಜಾತಿಯ ವ್ಯಕ್ತಿ ₹ 8.55 ಲಕ್ಷಕ್ಕೆ, ಪರಿಶಿಷ್ಟ ಜಾತಿ ಮಹಿಳೆ ಸ್ಥಾನಕ್ಕೆ ₹ 7.25 ಲಕ್ಷ, ಪರಿಶಿಷ್ಟ ಜಾತಿ ಪುರುಷ ಸ್ಥಾನಕ್ಕೆ ₹ 5.50 ಲಕ್ಷ, ಪರಿಶಿಷ್ಟ ಪಂಗಡ ಮಹಿಳೆ ಸ್ಥಾನಕ್ಕೆ ₹ 5.25 ಲಕ್ಷ ನೀಡಲು ಹರಾಜು ಕೂಗಲಾಗಿದೆ’ ಎಂದು ಗ್ರಾಮದ ಕೆಲವರು ಆರೋಪಿಸಿದ್ದಾರೆ.

‘ಹರಾಜಿನಲ್ಲಿ ಸ್ಥಾನ ಗಿಟ್ಟಿಸಿಕೊಂಡವರು ನಿಗದಿತ ದಿನಾಂಕದಂದು ಹಣ ಪಾವತಿಸದಿದ್ದಲ್ಲಿ, ಸ್ಥಾನಗಳು ಬೇರೆಯವರ ಪಾಲಾಗುತ್ತವೆ ಎಂದು ಗ್ರಾಮದ ಮುಖಂಡರು ಷರತ್ತು ವಿಧಿಸಿದ್ದಾರೆ. ಹರಾಜು ಪ್ರಕ್ರಿಯೆ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಗಾಳಿಗೆ ತೂರಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಹರಾಜು ನಡೆಸಿದವರು ಯಾರು? ಹರಾಜಿನಿಂದ ಬಂದ ಹಣ ಏನು ಮಾಡಲಾಗುತ್ತದೆ’ ಎನ್ನುವ ಪ್ರಶ್ನೆಗೆ ಉತ್ತರಿಸಲು ಗ್ರಾಮಸ್ಥರು ಹಿಂದೇಟು ಹಾಕಿದರು.

‘ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಮಾಡಿರುವುದು ಗಮನಕ್ಕೆ ಬಂದಿಲ್ಲ. ಆ ಗ್ರಾಮದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿದ್ದು, ಶೀಘ್ರವೇ ಸಭೆ ನಡೆಸಿ ಚರ್ಚಿಸುತ್ತೇವೆ’ ಎಂದು ಮಾಜಿ ಶಾಸಕ, ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.