ಕಲಬುರಗಿ: ಗ್ರಾಮ ಪಂಚಾಯಿತಿಗಳನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಜಾರಿಗೆ ತರಲಾದ ಪಂಚಾಯತರಾಜ್ ಕಾಯ್ದೆಯು ಪಂಚಾಯಿತಿ ಆಡಳಿತವನ್ನು ಗ್ರಾಮಸ್ಥರೇ ನಿರ್ವಹಿಸುವ ಅನುಕೂಲವನ್ನು ಒದಗಿಸಿದೆ. ಇತ್ತೀಚೆಗೆ ನೇರವಾಗಿ ಪಂಚಾಯಿತಿಗಳಿಗೆ ಕೋಟ್ಯಂತರ ರೂಪಾಯಿ ಅನುದಾನವೂ ಅಭಿವೃದ್ಧಿಗಾಗಿ ಹರಿದು ಬರುತ್ತಿದೆ. ಇಷ್ಟಾಗಿಯೂ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿಗಳು ಶಿಥಿಲಗೊಂಡ ಕಟ್ಟಡಗಳಲ್ಲೇ ಕಾರ್ಯನಿರ್ವಹಿಸುತ್ತಿವೆ.
ಸುವರ್ಣ ಗ್ರಾಮ ಯೋಜನೆಯಡಿ ಹಾಗೂ ರಾಜೀವ್ ಗಾಂಧಿ ಸೇವಾ ಕೇಂದ್ರಗಳ ಹೆಸರಿನಲ್ಲಿ ಗ್ರಾ.ಪಂ. ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ₹ 35.50 ಲಕ್ಷದವರೆಗೆ ಒದಗಿಸಲಾಗುತ್ತಿತ್ತು. ಇದೀಗ ಪಂಚಾಯಿತಿ ಕಟ್ಟಡಗಳಿಗೆ ಅಂತಹ ಯಾವುದೇ ಯೋಜನೆ ಇಲ್ಲದೇ ಇರುವುದರಿಂದ ಶಿಥಿಲಗೊಂಡಿರುವ ಕಟ್ಟಡಗಳಲ್ಲೇ ಪಂಚಾಯಿತಿಗಳು ಕಾರ್ಯನಿರ್ವಹಿಸಬೇಕಿದೆ ಎನ್ನುತ್ತಾರೆ ಪಂಚಾಯತರಾಜ್ ಇಲಾಖೆಯ ಅಧಿಕಾರಿಯೊಬ್ಬರು.
ಜಿಲ್ಲೆಯಲ್ಲಿ 261 ಗ್ರಾಮ ಪಂಚಾಯಿತಿ ಕಟ್ಟಡಗಳಿದ್ದು, ಅವುಗಳಲ್ಲಿ ಅರ್ಧಕ್ಕಿಂತಲೂ ಅಧಿಕ ಪಂಚಾಯಿತಿಗಳಿಗೆ ಇನ್ನೂ ಸುಸಜ್ಜಿತ ಸ್ವಂತ ಕಟ್ಟಡಗಳಿಲ್ಲ. ಕೆಲವು ಶಾಲಾ ಕೊಠಡಿಗಳಲ್ಲಿ, ಇನ್ನು ಕೆಲವು ಪಶು ಸಂಗೋಪನಾ ಇಲಾಖೆ, ಅಂಗನವಾಡಿ ಕೇಂದ್ರಗಳಲ್ಲಿ, ಕೆಲವು ಪಂಚಾಯಿತಿಗಳು ಗೋದಾಮುಗಳಲ್ಲಿಯೂ ಕಾರ್ಯನಿರ್ವಹಿಸುತ್ತಿವೆ.
ಪಂಚಾಯಿತಿಗಳು ಗ್ರಾಮ ಸಭೆ, ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಸಬೇಕಾದರೂ ಅದಕ್ಕೆ ಸೂಕ್ತವಾದ ಸಭಾಭವನವೂ ಹಲವು ಕಡೆ ಇಲ್ಲದಿರುವುದು ‘ಪ್ರಜಾವಾಣಿ‘ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದಿದೆ. ಸ್ವಚ್ಛ ಭಾರತ ಯೋಜನೆಯಡಿ ಪ್ರತಿ ಮನೆಗೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವಂತೆ ಅಧಿಕಾರಿಗಳು ಗ್ರಾಮಸ್ಥರ ಮೇಲೆ ಒತ್ತಡ ಹಾಕುತ್ತಾರೆ. ಆದರೆ, ಗ್ರಾಮದ ಆಡಳಿತ ಕೇಂದ್ರವಾದ ಪಂಚಾಯಿತಿಯಲ್ಲಿಯೇ ಶೌಚಾಲಯದ ಕೊರತೆ ಇದೆ. ಇದ್ದರೂ ಕೇವಲ ಒಂದು ಶೌಚಾಲಯ ಮಾತ್ರ ಇರುತ್ತದೆ. ಇದರಿಂದಾಗಿ ಪಂಚಾಯಿತಿಯ ಸಭೆಗಳಲ್ಲಿ ಭಾಗವಹಿಸುವ ಮಹಿಳಾ ಸದಸ್ಯರು ಶೌಚ ಬಳಕೆಯನ್ನು ತಪ್ಪಿಸಿಕೊಳ್ಳಲು ನೀರನ್ನೇ ಕುಡಿಯುವುದಿಲ್ಲ ಎಂದು ಪಂಚಾಯಿತಿ ಸದಸ್ಯರೊಬ್ಬರು ಸಮಸ್ಯೆಯನ್ನು ಅನಾವರಣಗೊಳಿಸುತ್ತಾರೆ.
ಮನೆಗಳಿಗೆ ವೈಯಕ್ತಿಕ ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಅನುದಾನ ನೀಡಲಾಗುತ್ತದೆ. ಆದರೆ, ಅದೇ ಅನುದಾನವನ್ನು ಪಂಚಾಯಿತಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಬಳಕೆ ಮಾಡಲು ಅವಕಾಶವಿಲ್ಲ ಎಂದು ಅಧಿಕಾರಿಯೊಬ್ಬರು ವಿಷಾದದಿಂದ ಹೇಳಿದರು.
ರಾಜೀವ್ ಗಾಂಧಿ ಸೇವಾ ಕೇಂದ್ರದ ಹೆಸರಿನಲ್ಲಿ ಗ್ರಾಮ ಪಂಚಾಯಿತಿಗಳ ನಿರ್ಮಾಣಕ್ಕೆ ಮೊದಲು ₹ 19 ಲಕ್ಷ ಅನುದಾನ ಸಿಗುತ್ತಿತ್ತು. ನಂತರ ₹ 35.50 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. 2024ರ ಮಾರ್ಚ್‌ನಿಂದ ಆ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಅಲ್ಲದೇ, ನರೇಗಾದಡಿ ₹ 18 ಲಕ್ಷ ಅನುದಾನ ಈಗ ಸಿಗುತ್ತದೆ. ಆದರೆ, ಇದರಿಂದ ಸುಸಜ್ಜಿತ ಪಂಚಾಯಿತಿ ಕಟ್ಟಡ ನಿರ್ಮಾಣ ಸಾಧ್ಯವಾಗುವುದಿಲ್ಲ. ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಂಪ್ಯೂಟರ್ ಆಪರೇಟರ್, ಬಿಲ್ ಕಲೆಕ್ಟರ್, ವಿಆರ್‌ಡಬ್ಲು, ಎಂಬಿಕೆ, ಬಿಎಫ್‌ಟಿ, ಟಿಎಇ, ಆಶಾ ಕಾರ್ಯಕರ್ತೆಯರು ಪಂಚಾಯಿತಿಗಳಿಗೆ ಬರುತ್ತಾರೆ. ಅಧ್ಯಕ್ಷರು, ಪಿಡಿಒ, ಗ್ರಾಮ ಆಡಳಿತ ಅಧಿಕಾರಿ, ಕಂಪ್ಯೂಟರ್ ಆಪರೇಟರ್‌ಗೆ ಪ್ರತ್ಯೇಕ ಕೊಠಡಿ, ಸಭೆ ನಡೆಸಲು ಸಭಾಂಗಣ, ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯಗಳು ಪ್ರತಿ ಪಂಚಾಯಿತಿ ಕಟ್ಟಡಗಳಲ್ಲಿ ಇರಬೇಕು. ಆದರೆ, ಒಂದು ಅಥವಾ ಎರಡು ಕೊಠಡಿಗಳಲ್ಲಿಯೇ ಪಂಚಾಯಿತಿ ಆಡಳಿತವನ್ನು ನಡೆಸುವ ಅನಿವಾರ್ಯತೆ ಹಲವು ಗ್ರಾಮಗಳಲ್ಲಿದೆ.
ಶಿಥಿಲಗೊಂಡ ಸೊನ್ನ ಗ್ರಾ.ಪಂ. ಕಟ್ಟಡ
ಜೇವರ್ಗಿ: ತಾಲ್ಲೂಕಿನ ಸೊನ್ನ ಗ್ರಾಮ ಪಂಚಾಯಿತಿ ಕಟ್ಟಡ ಶಿಥಿಲಗೊಂಡಿದ್ದು, ಮಳೆ ಬಂದರೆ ಸೋರುತ್ತಿದೆ. ಜತೆಗೆ ಕಟ್ಟಡದ ಚಾವಣಿ ಉದುರುತ್ತಿರುವ ಕಾರಣ ಸಿಬ್ಬಂದಿ ಪ್ರಾಣ ಭಯದಲ್ಲೇ ಕಾರ್ಯ ನಿರ್ವಹಿಸುವಂತಾಗಿದೆ.
ತಾಲ್ಲೂಕು ಕೇಂದ್ರಕ್ಕೆ 17 ಕಿ.ಮೀ ದೂರದಲ್ಲಿರುವ ಪಂಚಾಯಿತಿ ಕೇಂದ್ರ ಇದಾಗಿದ್ದು, ಪಂಚಾಯಿತಿ ಕಟ್ಟಡವನ್ನು ನಿರ್ಮಿಸಿ ದಶಕಗಳೇ ಕಳೆದಿವೆ. ಈಗ ಈ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಸ್ಥಳೀಯ ಆಡಳಿತ ನಡೆಸಲು ಸಮಸ್ಯೆ ಎದುರಾಗಿದೆ.
ಮರತೂರು ಗ್ರಾ.ಪಂ. ಕಟ್ಟಡ ಶಿಥಿಲ
ಶಹಾಬಾದ್: ತಾಲ್ಲೂಕಿನಲ್ಲಿ ಒಟ್ಟು ಏಳು ಪಂಚಾಯತಿ ಕಚೇರಿಗಳಲ್ಲಿ ಮರತೂರ ಗ್ರಾಮ ಪಂಚಾಯಿತಿ ಕಾರ್ಯಾಲಯ ಶಿಥಿಲಗೊಂಡಿದ್ದು, ಮಳೆ ನೀರು ಕಚೇರಿಯ ಒಳಗೆ ಸುರಿಯುವಂತಹ ಪರಿಸ್ಥಿತಿಯಿದೆ. ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಂಡು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಮರತೂರು ಪಿಡಿಒ ಮಾಹಿತಿ ನೀಡಿದ್ದಾರೆ.
ರಾವೂರು, ಮಾಲಗತ್ತಿ, ಭಂಕೂರು, ಮುಗಳನಾಗಾಂವ, ತೊನಸನಹಳ್ಳಿ, ಹೊನಗುಂಟಾ ಗ್ರಾ.ಪಂ. ಕಚೇರಿಗಳು ಬಹುತೇಕ ಹೊಸದಾಗಿ ಮತ್ತು ಗುಣಮಟ್ಟದಿಂದ ಕೂಡಿವೆ ಎಂದು ತಾ.ಪಂ ಇಒ ಮಲ್ಲಿನಾಥ ರಾವೂರ ಮಾಹಿತಿ ನೀಡಿದ್ದಾರೆ.
ಶಾಲಾ ಕೊಠಡಿಯಲ್ಲಿ ಗ್ರಾ.ಪಂ. ಆಡಳಿತ
ಸೇಡಂ: ತಾಲ್ಲೂಕಿನಲ್ಲಿ 27 ಗ್ರಾಮ ಪಂಚಾಯಿತಿಗಳಿವೆ. 2015ರಲ್ಲಿ ಸರ್ಕಾರ ಚಂದಾಪುರ, ಸಿಂಧನಮಡು, ಯಡಗಾ ಮತ್ತು ಬೆನಕನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಹೊಸದಾಗಿ ಸೃಷ್ಟಿಸಿತು. ಇದರಲ್ಲಿ ಈಗಾಗಲೇ ಸಿಂಧನಮಡು, ಯಡಗಾ ಮತ್ತು ಚಂದಾಪುರ ನೂತನ ಗ್ರಾಮ ಪಂಚಾಯಿತಿಗಳಿಗೆ ಕಟ್ಟಡಗಳಿವೆ. ಬೆನಕನಹಳ್ಳಿ ಗ್ರಾ.ಪಂ. ಸರ್ಕಾರಿ ಶಾಲಾ ಕೋಣೆಯಲ್ಲಿಯೇ ನಡೆಯುತ್ತಿದೆ.
ಉಳಿದ 23 ಗ್ರಾಮ ಪಂಚಾಯಿತಿಗಳಲ್ಲಿ ಕೋಡ್ಲಾ ಗ್ರಾ.ಪಂ. ಕಟ್ಟಡ ಕೆಲವು ವರ್ಷಗಳ ಹಿಂದೆ ನಿರ್ಮಿಸಿದ್ದು, ತೆಲ್ಕೂರ ಗ್ರಾಮ ಪಂಚಾಯಿತಿ ಕಟ್ಟಡ ಪ್ರಗತಿಯಲ್ಲಿದೆ.
ಹಾಳು ಬಿದ್ದ ಗ್ರಾ.ಪಂ. ಕಟ್ಟಡಗಳು
ಯಡ್ರಾಮಿ: ತಾಲ್ಲೂಕಿನ ಮಾಗಣಗೇರಾ, ಕಡಕೋಳ, ವಡಗೇರಾ, ಆಲೂರ, ಸಾಥಖೇಡ, ಸುಂಬಡ ಗ್ರಾಮ ಪಂಚಾಯಿತಿಗಳು ಶಿಥಿಲಾವಸ್ಥೆಯಲ್ಲಿವೆ.
ಮಾಗಣಗೇರಾ ಗ್ರಾಮ ಪಂಚಾಯಿತಿಯು ಮಠದ ವ್ಯಾಪ್ತಿಯಲ್ಲಿ ಬರುವ ಸಮುದಾಯ ಭವನದಲ್ಲಿ ನಡೆಯುತ್ತಿದೆ. ಕಡಕೋಳ ಗ್ರಾ.ಪಂ. ಕಟ್ಟಡ ಸಂಪೂರ್ಣ ಬಿರುಕು ಬಿಟ್ಟಿದೆ. ವಡಗೇರಾ ಗ್ರಾ.ಪಂ. ಶಿಥಿಲಾವಸ್ಥೆಯಲ್ಲಿ ಇರುವುದರಿಂದ ಬಾಡಿಗೆ ಕಟ್ಟಡದಲ್ಲಿ ಪಂಚಾಯಿತಿ ನಡೆಯುತ್ತಿದೆ. ಹೊಸ ಕಟ್ಟಡ ಮಂಜೂರಾಗಿದೆ. ಯೋಜನೆ ಮಂಜೂರಾಗಿಲ್ಲ. ಆಲೂರು ಕಟ್ಟಡದ ಗೋಡೆಗಳು ಬಿರುಕುಬಿಟ್ಟಿವೆ. ಇಲ್ಲಿ ಕಟ್ಟಡ ಮಂಜೂರಾದರೂ ಜಾಗ ಕೊಟ್ಟಿಲ್ಲ. ಹೀಗಾಗಿ ಹಳೆ ಪಂಚಾಯಿತಿಯಲ್ಲೇ ಕೆಲಸಗಳು ನಡೆಯುತ್ತಿವೆ. ಸಾಥಖೇಡ ಸರ್ಕಾರಿ ಪ್ರವಾಸಿ ಮಂದಿರದ ಹೊಸ ಕಟ್ಟಡದಲ್ಲಿ ಪಂಚಾಯಿತಿ ಕಚೇರಿ ನಡೆಯುತ್ತಿದೆ. ಸುಂಬಡ ಗ್ರಾ.ಪಂ.ಗೂ ಸ್ವಂತ ಕಟ್ಟಡ ಇಲ್ಲ.
ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಮಲ್ಲಿಕಾರ್ಜುನ ಎಚ್.ಎಂ, ಅವಿನಾಶ್ ಬೋರಂಚಿ, ವಿಜಯಕುಮಾರ್ ಕಲ್ಲಾ, ನಿಂಗಣ್ಣ ಜಂಬಗಿ, ಮಂಜುನಾಥ ದೊಡಮನಿ
ಯಾರು ಏನೆಂದರು?
ಕೇಂದ್ರ ಸರ್ಕಾರವು ಪಂಚಾಯಿತಿ ಕಟ್ಟಡಗಳಿಗಾಗಿ ಮುಂಚೆ ರಾಜೀವ್ ಗಾಂಧಿ ಸೇವಾ ಕೇಂದ್ರದ ಹೆಸರಿನಲ್ಲಿ ನರೇಗಾ ಯೋಜನೆಯಡಿ ಅನುದಾನ ನೀಡುತ್ತಿತ್ತು. ಆದರೆ ರಾಜ್ಯ ಸರ್ಕಾರವೂ ತನ್ನ ಪಾಲು ಭರಿಸಬೇಕು ಎಂಬ ಕಾರಣಕ್ಕಾಗಿ ನೇರವಾಗಿ ನೀಡುತ್ತಿದ್ದ ಅನುದಾನವನ್ನು ಸ್ಥಗಿತಗೊಳಿಸಿದೆ. ಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿಗಾಗಿ ಕೇಂದ್ರ ನೀಡಬೇಕಿದ್ದ ₹ 3300 ಕೋಟಿ ಪೈಕಿ ಕೇವಲ ₹517 ಕೋಟಿ ನೀಡಿದೆ. ಇದೇ ಬಗೆಯ ಉದಾಸೀನವನ್ನು ಪಂಚಾಯಿತಿ ಕಟ್ಟಡಗಳ ವಿಚಾರದಲ್ಲಿ ಅನುಸರಿಸುತ್ತಿದೆ. ರಾಜ್ಯದಲ್ಲಿ ಶಿಥಿಲಾವಸ್ಥೆಯಲ್ಲಿರುವ ಪಂಚಾಯಿತಿಗಳ ಪಟ್ಟಿ ನಮ್ಮ ಬಳಿ ಇದ್ದು ನರೇಗಾ ಯೋಜನೆಯಡಿ ಆದ್ಯತೆಯ ಮೇರೆಗೆ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು.
- ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಸಾವಳೇಶ್ವರ ಸೇರಿದಂತೆ ವಿವಿಧೆಡೆ ಶಿಥಿಲ ಕಟ್ಟಡಗಳಿವೆ. ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ಕೋರಿ ಸಿಇಒ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ನಾನು ಕಲಬುರಗಿ ತಾ.ಪಂ. ಇಒ ಆಗಿದ್ದ ಸಂದರ್ಭದಲ್ಲಿ ನಂದಿಕೂರ ಕಡಣಿ ಭೀಮಳ್ಳಿ ಗ್ರಾ.ಪಂ. ಕಟ್ಟಡಗಳನ್ನು ಸಿಇಒ ಅವರ ಮನವೊಲಿಸಿ ಮಂಜೂರು ಮಾಡಿಸಿಕೊಂಡು ನಿರ್ಮಿಸಲಾಗಿತ್ತು.
-ಮಾನಪ್ಪ ಕಟ್ಟಿಮನಿ ತಾ.ಪಂ. ಇಒ ಆಳಂದ
ಸೇಡಂ ತಾಲ್ಲೂಕಿನಲ್ಲಿರುವ ಸುಮಾರು 20 ಗ್ರಾಮ ಪಂಚಾಯಿತಿ ಕಟ್ಟಡಗಳು ಹಳೆಯದಾಗಿದ್ದು ಆಗಾಗ ಅನುದಾನವಿರಿಸಿ ದುರಸ್ತಿ ಮಾಡಲಾಗುತ್ತಿದೆ. ಶಿಥಿಲಾವಸ್ಥೆಯಲ್ಲಿ ಯಾವುದೇ ಕಟ್ಟಡವಿಲ್ಲ. ಈ ವರ್ಷ ಎಲ್ಲಾ ಪಂಚಾಯಿತಿಗಳಿಗೆ ಬೇಕಾದ ಅಂದಾಜು ಅನುದಾನ ಯೋಜನೆ ಸಿದ್ದಪಡಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಿದ್ದೇವೆ
- ಚನ್ನಪ್ಪ ರಾಯಣ್ಣನವರ ಸೇಡಂ ತಾ.ಪಂ. ಇಒ
ಪಂಚಾಯಿತಿಗೆ ಇರುವ ಕಟ್ಟಡವನ್ನು ಅಭಿವೃದ್ಧಿಪಡಿಸಲು ಈ ಹಿಂದೆ ಕ್ರಿಯಾ ಯೋಜನೆ ತಯಾರಿಸಲಾಗಿತ್ತು. ಅದರಂತೆ ನರೇಗಾದಲ್ಲಿ ₹ 35 ಲಕ್ಷ ಅನುದಾನ ಮೀಸಲಿಡಲಾಗಿತ್ತು. ಕಾಮಗಾರಿ ವಿಳಂಬದಿಂದ ಅನುದಾನ ವಾಪಸ್ ಹೋಗಿದೆ. ಕೆಕೆಆರ್‌ಡಿಬಿ ವತಿಯಿಂದ ₹ 50 ಲಕ್ಷ ಅನುದಾನ ಬಿಡುಗಡೆಗೆ ಡಾ.ಅಜಯ್ ಸಿಂಗ್ ಅವರಿಗೆ ಮನವಿ ಮಾಡಲಾಗಿದೆ
-ಶ್ರುತಿ ಹುಣಚಪ್ಪ ಬುರುಡ್ ಸೊನ್ನ ಗ್ರಾ.ಪಂ. ಅಧ್ಯಕ್ಷೆ
ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲದೆ ಆಡಳಿತ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ಸಾಮಾನ್ಯ ಸಭೆಗಳನ್ನು ನಡೆಸಲು ತೊಂದರೆ ಆಗುತ್ತಿದೆ. ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ನಿವೇಶನ ಲಭ್ಯವಿದೆ. ಆದಷ್ಟು ಬೇಗನೇ ಸರ್ಕಾರ ಅನುದಾನವನ್ನು ಮಂಜೂರು ಮಾಡಬೇಕು.
-ಶಬಾನಾಬೇಗಂ ಇಮಾಮ್ ಶೇಖ್ ಗೌರ್ (ಬಿ) ಗ್ರಾ.ಪಂ. ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.