ಕಲಬುರಗಿ: ಅವಿಭಜಿತ ಕಲಬುರಗಿ, ಬೀದರ್, ರಾಯಚೂರು ಜಿಲ್ಲೆಗಳು ಹೈದರಾಬಾದ್ ನಿಜಾಮನ ಆಡಳಿತದಿಂದ ವಿಮೋಚನೆಗೊಂಡ ಪ್ರಯುಕ್ತ ಆಚರಿಸುವ ‘ಕಲ್ಯಾಣ ಕರ್ನಾಟಕ ಉತ್ಸವ’ ಮತ್ತೊಮ್ಮೆ ಬಂದಿದೆ. ಆದರೆ, ಈ ಭಾಗದ ಶೈಕ್ಷಣಿಕ, ಆರ್ಥಿಕ, ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ ಭರವಸೆಗಳು ಹಾಗೆಯೇ ಉಳಿದಿವೆ.
ಕಲ್ಯಾಣ ಕರ್ನಾಟಕದ ಅತ್ಯಂತ ಹಳೆಯ ವಿಶ್ವವಿದ್ಯಾಲಯವಾದ ಗುಲಬರ್ಗಾ ವಿ.ವಿ.ಗೆ ಕಳೆದ ಎರಡು ದಶಕಗಳಿಂದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ನೇಮಕವಾಗಿಲ್ಲ. ಇದರಿಂದಾಗಿ ವಿ.ವಿ.ಯ ಶೈಕ್ಷಣಿಕ ಚಟುವಟಿಕೆಗಳಿಗೆ ಗರ ಬಡಿದಂತಾಗಿದ್ದು, ಹಲವು ವಿಭಾಗಗಳಿಗೆ ಕಾಯಂ ಬೋಧಕರು ಇಲ್ಲದೇ ಇರುವುದರಿಂದ ಪಿಎಚ್.ಡಿ, ಎಂ.ಫಿಎಲ್‌ನಂತಹ ಸಂಶೋಧನಾ ಕಾರ್ಯಗಳು ನಡೆಯುತ್ತಿಲ್ಲ. ಪ್ರೊ.ನಿರಂಜನ್ ಅವರು ಕುಲಪತಿಯಾಗಿದ್ದಾಗಲೇ ನೇಮಕ ಪ್ರಕ್ರಿಯೆ ನಡೆದಿತ್ತು. ಆದರೆ, ರೋಸ್ಟರ್ ನಿಯಮ ಪಾಲನೆಯಾಗದಿರುವುದು ಸೇರಿದಂತೆ ಕೆಲ ತಾಂತ್ರಿಕ ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. ಹುದ್ದೆಗಳ ನೇಮಕಾತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಭರವಸೆ ನೀಡಿದ್ದರೂ ಇನ್ನೂವರೆಗೂ ಆರ್ಥಿಕ ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕಿಲ್ಲ.
ಗುಲಬರ್ಗಾ ವಿ.ವಿ.ಯಲ್ಲಿ ಪ್ರಸ್ತುತ 31 ಕಾಯಂ ಬೋಧಕ ಸಿಬ್ಬಂದಿ ಮಾತ್ರ ಇದ್ದಾರೆ. ಹೊಸದಾಗಿ 72 ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಿಕೊಳ್ಳಬೇಕಿದೆ. ಹೊಸದಾಗಿ ರಚನೆಯಾದ ಬೀದರ್ ಹಾಗೂ ರಾಯಚೂರು ವಿಶ್ವವಿದ್ಯಾಲಯಗಳಿಗೆ ಸಿಬ್ಬಂದಿ ನೇಮಕ ಮಾಡಿ ಹಂಚಿಕೆ ಮಾಡಿದ ಬಳಿಕ ಗುಲಬರ್ಗಾ ವಿ.ವಿ.ಗೆ 168 ಬೋಧಕೇತರ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಿದೆ. ಹೊಸ ಕುಲಪತಿ ಅಧಿಕಾರ ವಹಿಸಿಕೊಂಡರೂ ಇನ್ನೂ ನೇಮಕಾತಿಗೆ ಅನುಮೋದನೆ ಸಿಕ್ಕಿಲ್ಲ. ವಿ.ವಿ.ಯ ಸೂಕ್ಷ್ಮ ಜೀವಶಾಸ್ತ್ರ, ಇತಿಹಾಸ, ಮಹಿಳಾ ಅಧ್ಯಯನ, ಸಮಾಜ ಕಾರ್ಯ, ಅರ್ಥಶಾಸ್ತ್ರ, ಮರಾಠಿ, ಸಂಗೀತ, ದೃಶ್ಯ ಕಲಾ ವಿಭಾಗ, ಮನೋವಿಜ್ಞಾನ, ಸಮೂಹ ಮತ್ತು ಪತ್ರಿಕೋದ್ಯಮ, ಗ್ರಂಥಾಲಯ ವಿಜ್ಞಾನ ವಿಭಾಗಗಳಿಗೆ ಕಾಯಂ ಬೋಧಕ ಸಿಬ್ಬಂದಿಯೇ ಇಲ್ಲ.
ಪರೀಕ್ಷಾ ವಿಭಾಗದಲ್ಲಿಯೂ ಸಿಬ್ಬಂದಿ ಕೊರತೆ ಇರುವುದರಿಂದ ಸಕಾಲಕ್ಕೆ ಫಲಿತಾಂಶ ಪ್ರಕಟಿಸುವುದು ಸಾಧ್ಯವಾಗುತ್ತಿಲ್ಲ ಎಂದು ವಿ.ವಿ. ಪ್ರಾಧ್ಯಾಪಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.
ಕಳೆದ ವರ್ಷದ ಜಿಲ್ಲೆಯಲ್ಲಿ 515 ಹೊಸ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿತ್ತು. ವರ್ಷ ಕಳೆದರೂ ಒಂದು ಕಟ್ಟಡವೂ ಎದ್ದು ನಿಂತಿಲ್ಲ. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಆಸಕ್ತಿ ವಹಿಸಿ ಅಂಗನವಾಡಿ ಕಟ್ಟಡಗಳಿಗೆ ಕಂದಾಯ ಇಲಾಖೆಯಿಂದ ನಿವೇಶನ ಒದಗಿಸಿ ಕೊಟ್ಟಿದ್ದರು. ಪ್ರತಿ ಅಂಗನವಾಡಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಐಸಿಡಿಎಸ್ ಯೋಜನೆಯಡಿ ₹7 ಲಕ್ಷ, ಕೆಕೆಆರ್‌ಡಿಬಿ ₹8 ಲಕ್ಷ ಹಾಗೂ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ₹8 ಲಕ್ಷ ಸೇರಿದಂತೆ ಒಟ್ಟು ₹23 ಲಕ್ಷ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ. ಆದರೆ, ಅಗತ್ಯ ಹಣಕಾಸು ಬಿಡುಗಡೆಯಾಗದ್ದರಿಂದ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರ ಹುಸಿಯಾಗಿದೆ. ಪುಟ್ಟ ಮಕ್ಕಳು ಇನ್ನೂ ಶಿಥಿಲಗೊಂಡ, ಬಾಡಿಗೆ ಕಟ್ಟಡಗಳಲ್ಲಿಯೇ ಕಲಿಕೆ ಮುಂದುವರಿಸಿದ್ದಾರೆ.
ಕಲಬುರಗಿಯಲ್ಲಿ ನಡೆದ ಸಚಿವ ಸಂಪುಟದಲ್ಲಿ 515 ಅಂಗನವಾಡಿ ಕಟ್ಟಡಗಳಿಗೆ ಅನುಮೋದನೆ ನೀಡಲಾಗಿತ್ತು. ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಗಮನ ಸೆಳೆಯುವೆಪ್ರಿಯಾಂಕ್ ಖರ್ಗೆ ಜಿಲ್ಲಾ ಉಸ್ತುವಾರಿ ಸಚಿವ
ಬೋಧಕರ ಕೊರತೆ ಇರುವುದರಿಂದ ವಿ.ವಿ. ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ವಿದ್ಯಾರ್ಥಿಗಳ ಪ್ರವೇಶದಲ್ಲಿಯೂ ಕುಸಿತವಾಗಿದೆ. ವಿದ್ಯಾರ್ಥಿಗಳ ಶುಲ್ಕವನ್ನು ಸಮಾಜ ಕಲ್ಯಾಣ ಅಲ್ಪಸಂಖ್ಯಾತರ ಇಲಾಖೆ ಬಿಸಿಎಂ ಇಲಾಖೆ ಭರಿಸಿದರೆ ಪ್ರವೇಶ ಹೆಚ್ಚಬಹುದುಪ್ರೊ.ರಮೇಶ ಲಂಡನಕರ್ ಗುಲಬರ್ಗಾ ವಿ.ವಿ. ಕುಲಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.