ADVERTISEMENT

ಹುದ್ದೆಗಳ ಹಂಚಿಕೆ: ಗುಲಬರ್ಗಾ ವಿವಿಯಿಂದ ತೆರಳಲು ನೌಕರರು ಹಿಂದೇಟು!

ಮಲ್ಲಿಕಾರ್ಜುನ ನಾಲವಾರ
Published 2 ಜುಲೈ 2025, 6:00 IST
Last Updated 2 ಜುಲೈ 2025, 6:00 IST
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ
ಗುಲಬರ್ಗಾ ವಿಶ್ವವಿದ್ಯಾಲಯದ ಕಾರ್ಯಸೌಧ   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಿಂದ ವರ್ಷಗಳ ಹಿಂದೆ ವಿಭಜನೆಯಾದ ಬೀದರ್ ಮತ್ತು ರಾಯಚೂರು ವಿಶ್ವವಿದ್ಯಾಲಯಗಳಿಗೆ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಸರ್ಕಾರದ ಆದೇಶದಂತೆ ಹಂಚಿಕೆ ಮಾಡಿ, ಸ್ಥಳಾಂತರಕ್ಕೂ ಶಿಫಾರಸು ಮಾಡಲಾಗಿದೆ. ಆದರೆ, ಕೆಲವು ನೌಕರರು ಗುಲಬರ್ಗಾ ವಿವಿಯಿಂದ ವರ್ಗವಾಗಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಅವಿಭಾಜಿತ ಗುಲಬರ್ಗಾ ವಿವಿ ವ್ಯಾಪ್ತಿಯಲ್ಲಿ 517 ಮಹಾವಿದ್ಯಾಲಯಗಳಿದ್ದವು. ಅವುಗಳನ್ನು ಗುಲಬರ್ಗಾ ವಿವಿಗೆ 191, ಬೀದರ್‌ ವಿವಿಗೆ 130 ಹಾಗೂ ರಾಯಚೂರು (ಯಾದಗಿರಿ ಸೇರಿ) ವಿವಿಗೆ 196 ಮಹಾವಿದ್ಯಾಲಯಗಳನ್ನು ಹಂಚಿಕೆ ಮಾಡಲಾಗಿದೆ. 761 ಅನುಮೋದಿತ ಹುದ್ದೆಗಳ ಪೈಕಿ 566 (ಶೇ 74ರಷ್ಟು) ಹುದ್ದೆಗಳು ಖಾಲಿ ಇವೆ.

ಸರ್ಕಾರದ ಆದೇಶದ ಪ್ರಕಾರ, ಮೂರು ವಿವಿಗಳ ಪ್ರಾದೇಶಿಕ ಅಧಿಕಾರ ವ್ಯಾಪ್ತಿ ಮತ್ತು ಕಾರ್ಯಭಾರದ ಆಧಾರದ ಮೇಲೆ ಗುಲಬರ್ಗಾ ವಿವಿಯ ಆಡಳಿತ ಮಂಡಳಿಯು ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಸ್ಥಳಾಂತರಿಸಿ ಹಂಚಿಕೆ ಮಾಡಿದೆ. ಒಟ್ಟು 782 ಹುದ್ದೆಗಳಲ್ಲಿ ರಾಯಚೂರು ವಿವಿಗೆ ಶೇ 24ರಷ್ಟು, ಬೀದರ್ ವಿವಿಗೆ ಶೇ 13ರಷ್ಟು ಮತ್ತು ಉಳಿದ ಶೇ 63ರಷ್ಟು ಹುದ್ದೆಗಳನ್ನು ಗುಲಬರ್ಗಾ ವಿವಿಗೆ ಹಂಚಿಕೆ ಮಾಡಲಾಗಿದೆ.

ADVERTISEMENT

ಮಂಜೂರಾದ 635 ಬೋಧಕೇತರ ಹುದ್ದೆಗಳಲ್ಲಿ 468 ಖಾಲಿ ಇವೆ. ಅವುಗಳನ್ನು ಗುಲಬರ್ಗಾಕ್ಕೆ 361, ರಾಯಚೂರಿಗೆ 164 ಹಾಗೂ ಬೀದರ್‌ಗೆ 108 ಹುದ್ದೆಗಳನ್ನು ಹಂಚಿಕೆ ಮಾಡಿ ವರ್ಗಾವಣೆಗೆ ಶಿಫಾರಸು ಮಾಡಲಾಗಿದೆ.

ಯುಜಿಸಿ ವೇತನದ 24 ಬೋಧಕೇತರ ಹುದ್ದೆಗಳಲ್ಲಿ 15 ಖಾಲಿ ಇವೆ. ನಾಲ್ಕು ಉಪ ಗ್ರಂಥಪಾಲಕರ ಹುದ್ದೆಗಳಲ್ಲಿ ಎರಡು ಹುದ್ದೆಗಳು ಗುಲಬರ್ಗಾ ವಿವಿಯಲ್ಲಿ ಉಳಿಯುತ್ತವೆ. ತಲಾ ಒಂದೊಂದು ರಾಯಚೂರು ಮತ್ತು ಬೀದರ್‌ಗೆ ವರ್ಗಾವಣೆ ಮಾಡಲಾಗಿದೆ.

13 ಸಹಾಯಕ ಗ್ರಂಥಪಾಲಕ ಹುದ್ದೆಗಳಲ್ಲಿ ಆರು ಗುಲಬರ್ಗಾ ವಿವಿಯಲ್ಲಿ ಉಳಿದರೆ, ನಾಲ್ಕು ಹುದ್ದೆಗಳು ರಾಯಚೂರಿಗೆ ಹಾಗೂ 3 ಹುದ್ದೆಗಳು ಬೀದರ್‌ಗೆ ಹಂಚಿಕೆಯಾಗಿವೆ. ದೈಹಿಕ ಶಿಕ್ಷಣ ಮತ್ತು ಕ್ರೀಡೆಗಳ ಸಹಾಯಕ ನಿರ್ದೇಶಕರ ಏಳು ಹುದ್ದೆಗಳಲ್ಲಿ 5 ಗುಲಬರ್ಗಾ ವಿವಿಗೆ, ತಲಾ ಒಂದೊಂದು ರಾಯಚೂರು ಮತ್ತು ಬೀದರ್‌ಗೆ ಶಿಫಾರಸು ಮಾಡಲಾಗಿದೆ ಎಂದು ವಿವಿಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬೀದರ್‌ಗೆ 29 ಬೋಧಕ ಹುದ್ದೆಗಳು ಹಂಚಿಕೆ

ಗುಲಬರ್ಗಾ ವಿವಿಯ 13 ವಿಭಾಗಗಳಲ್ಲಿ 147 ಮಂಜೂರಾದ ಬೋಧಕೇತರ ಹುದ್ದೆಗಳಲ್ಲಿ 118 ಹುದ್ದೆಗಳು ಖಾಲಿ ಇವೆ. 147 ಹುದ್ದೆಗಳಲ್ಲಿ 18 ಪ್ರಾಧ್ಯಾಪಕರು 41 ಸಹ ಪ್ರಾಧ್ಯಾಪಕರು ಮತ್ತು 88 ಸಹಾಯಕ ಪ್ರಾಧ್ಯಾಪಕರು ಸೇರಿದ್ದಾರೆ.  29 ಬೋಧಕ ಹುದ್ದೆಗಳನ್ನು ಬೀದರ್ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲು ಶಿಫಾರಸು ಮಾಡಿದೆ. ನಾಲ್ವರು ಪ್ರಾಧ್ಯಾಪಕರು 8 ಸಹ ಪ್ರಾಧ್ಯಾಪಕರು ಮತ್ತು 17 ಸಹಾಯಕ ಪ್ರಾಧ್ಯಾಪಕರು ಸೇರಿದ್ದಾರೆ. ನಾಲ್ವರು ಬೋಧಕರನ್ನು ಅವರ ಕೋರಿಕೆಯ ಮೇರೆಗೆ ರಾಯಚೂರಿಗೆ ವರ್ಗಾವಣೆ ಮಾಡಲಾಗಿದ್ದು ಉಳಿದ ಬೋಧಕರು ಗುಲಬರ್ಗಾ ವಿವಿಯಲ್ಲೇ ಉಳಿಯಲ್ಲಿದ್ದಾರೆ ಎಂದು ವಿವಿಯ ಅಧಿಕಾರಿಯೊಬ್ಬರು ತಿಳಿಸಿದರು.

ರಾಜ್ಯ ಸರ್ಕಾರ ಆದೇಶದಂತೆ ಬೋಧಕ ಮತ್ತು ಬೋಧಕೇತರ ಹುದ್ದೆಗಳನ್ನು ಹಂಚಿಕೆ ಮಾಡಿ ವರ್ಗಾವಣೆಗೆ ಶಿಫಾರಸು ಮಾಡಲಾಗಿದೆ. ಕೆಲವು ನೌಕರರು ವರ್ಗಾವಣೆ ಆದೇಶಗಳಿಗೆ ತಡೆ ತರುತ್ತಿದ್ದಾರೆ
-ಪ್ರೊ.ರಮೇಶ ಲಂಡನಕರ್‌, ವಿವಿಯ ಪ್ರಭಾರ ಕುಲಸಚಿವ
ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಿ ವರ್ಗಾವಣೆ ಮಾಡಿದರೆ ಅನುಕೂಲವಾಗುತ್ತದೆ. ಹುದ್ದೆಗಳ ಭರ್ತಿಗೆ ಸಿಂಡಿಕೇಟ್‌ ಸದಸ್ಯರು ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಲಿದ್ದಾರೆ
-ರಾಘವೇಂದ್ರ ರಟಕಲ್, ಸಿಂಡಿಕೇಟ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.