ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಕ ಕಲೆಗಳ ವಿಭಾಗ ಆರಂಭ

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕುಲಪತಿ ಪ್ರೊ. ದಯಾನಂದ ಅಗಸರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 5:55 IST
Last Updated 22 ಅಕ್ಟೋಬರ್ 2021, 5:55 IST
ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ ಅವರು ಹಿಂದುಸ್ತಾನಿ ಸಂಗೀತ ವಾಹಿನಿ ಕೃತಿಯನ್ನು ಬಿಡುಗಡೆ ಮಾಡಿದರು. ಲೇಖಕಿ ಡಾ. ಲಕ್ಷ್ಮಿ ಶಂಕರ ಜೋಶಿ, ಪ್ರಭಾಕರ ಜೋಶಿ, ಪ್ರೊ.ಎಚ್.ಟಿ. ಪೋತೆ, ಬದರಿನಾಥ ಮುಡಬಿ ಇದ್ದರು
ಗುಲಬರ್ಗಾ ವಿ.ವಿ. ಕುಲಪತಿ ಪ್ರೊ. ದಯಾನಂದ ಅಗಸರ ಅವರು ಹಿಂದುಸ್ತಾನಿ ಸಂಗೀತ ವಾಹಿನಿ ಕೃತಿಯನ್ನು ಬಿಡುಗಡೆ ಮಾಡಿದರು. ಲೇಖಕಿ ಡಾ. ಲಕ್ಷ್ಮಿ ಶಂಕರ ಜೋಶಿ, ಪ್ರಭಾಕರ ಜೋಶಿ, ಪ್ರೊ.ಎಚ್.ಟಿ. ಪೋತೆ, ಬದರಿನಾಥ ಮುಡಬಿ ಇದ್ದರು   

ಕಲಬುರಗಿ: ಸಂಗೀತ ಹಾಗೂ ವಿವಿಧ ಕಲಾಪ್ರಕಾರಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಶೀಘ್ರವೇ ವಿಶ್ವವಿದ್ಯಾಲಯದಲ್ಲಿ ಪ್ರದರ್ಶಕ ಕಲೆಗಳ ನೂತನ ವಿಭಾಗವನ್ನು ಆರಂಭಿಸಲಾಗುವುದು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಪ್ರಕಟಿಸಿದರು.

ನಗರದ ರಂಗಾಯಣ ಆವರಣದಲ್ಲಿ ಗುರುವಾರ ಗುವಿವಿ ಸಂಗೀತ ವಿಭಾಗದ ಪ್ರಾಧ್ಯಾಪಕಿ ಡಾ. ಲಕ್ಷ್ಮಿ ಶಂಕರ ಜೋಶಿ ಅವರ ಹಿಂದುಸ್ತಾನಿ ಸಂಗೀತ ವಾಹಿನಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

‘ಈ ವಿಭಾಗ ಆರಂಭದಿಂದ ಕಲೆಗಳು, ಸಂಗೀತ ಪ್ರಕಾರಗಳನ್ನು ಒಂದೇ ಸೂರಿನಡಿ ಅಧ್ಯಯನ ಮಾಡಲು, ನುರಿತ ಸಂಶೋಧಕರು ಬೋಧನೆ ಮಾಡಲು ಸಹಕಾರಿಯಾಗಲಿದೆ’ ಎಂದರು.

ADVERTISEMENT

ಗುಲಬರ್ಗಾ ವಿ.ವಿ. ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್‌.ಟಿ. ಪೋತೆ ಮಾತನಾಡಿ, ‘ಕಲೆಯು ಎಲ್ಲರನ್ನೂ ಕೈಬೀಸಿ ಕರೆಯುತ್ತದೆ. ಕೆಲವರನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಎಲ್ಲ ಜ್ಞಾನ ಶಿಸ್ತುಗಳಿಗೆ ಜಾನಪದವೇ ತಾಯಿ ಬೇರು. ಅಲ್ಲಿಂದ ಬಂದ ಕಲೆ, ಸಾಹಿತ್ಯ ಎಲ್ಲ ಆಧುನಿಕತೆ ಎದುರುಗಡೆ ನಗಣ್ಯವಾಗುತ್ತಿದೆ. ಶಿಷ್ಟ ಸಂಗೀತದ ಎದುರು ಜನಪದ ಸಂಗೀತವು ಅಸ್ಪೃಶ್ಯ ಎಂಬ ಭಾವನೆ ಬೆಳೆದಿದೆ. ಕೆಲವು ಕಲೆಗಳು ಒಂದು ಜಾತಿಯವರಿಗೆ ಸೀಮಿತ ಎಂಬ ಭಾವನೆ ಬೆಳೆದಿದೆ. ಹಲಗೆ, ಡೊಳ್ಳನ್ನು ತಳ ಸಮುದಾಯದವರೇ ಬಡಿಯಬೇಕು. ಭರತನಾಟ್ಯವನ್ನು ಒಡ್ಡೋಲಗದಲ್ಲೇ ಪ್ರದರ್ಶಿಸಬೇಕು ಎಂಬ ಅಘೋಷಿತ ಕಟ್ಟುಪಾಡುಗಳು ಬೆಳೆದು ಬಂದಿವೆ. ಇದು ತಪ್ಪಿ ಎಲ್ಲರೂ ಎಲ್ಲ ಕಲೆಗಳನ್ನು ಕಲಿಯುವ ಅವಕಾಶ ಕೂಡಿ ಬರಬೇಕು’ ಎಂದು ಅಭಿಪ್ರಾಯಪಟ್ಟರು.

‘ಯಾವುದೇ ಕಲೆಯು ಜಾತಿ ಆಧಾರಿತವಾದರೆ ನಶಿಸಿ ಹೋಗುವ ಅಪಾಯವಿದೆ. ಕಲೆ ತನ್ನಷ್ಟಕ್ಕೆ ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಕಲೆಯಲ್ಲಿನ ಜಾತಿ ಮಡಿವಂತಿಕೆಯು ಕಲೆಯನ್ನು ಸಾಯಿಸುತ್ತದೆ’ ಎಂದರು.

ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ‘ಜನಸಮುದಾಯದ ಮಧ್ಯೆ ವಿವಿಧ ಕಲೆಗಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ರಂಗಾಯಣವು ದೊಡ್ಡಾಟ, ಬಯಲಾಟಗಳನ್ನು ಪ್ರದರ್ಶಿಸುತ್ತಿದೆ’ ಎಂದು ಹೇಳಿದರು.

ಲೇಖಕಿ ಡಾ. ಲಕ್ಷ್ಮಿ ಶಂಕರ ಜೋಶಿ ಮಾತನಾಡಿ, ‘ಸಂಗೀತ ನಿತ್ಯ ಅನ್ವೇಷಣಾ ಕ್ಷೇತ್ರ. ಈ ನಿಟ್ಟಿನಲ್ಲಿ ಇನ್ನೂ ಬಹಳಷ್ಟು ಕೆಲಸ ಮಾಡಬೇಕಿದೆ. ಸಂಶೋಧನಾ ಪ್ರಬಂಧಗಳನ್ನು ಒಂದೆಡೆ ಸೇರಿಸಿ ಪುಸ್ತಕ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಗೀತದ ಹಲವು ಆಯಾಮಗಳನ್ನು ತಿಳಿಸುವ ಪುಸ್ತಕ ಮಾಡುವ ಯೋಜನೆ ಇದೆ’ ಎಂದು ಹೇಳಿದರು.

ಕೇಂದ್ರೀಯ ವಿ.ವಿ. ಪ್ರಾಧ್ಯಾಪಕ ಪ್ರೊ. ವಿಕ್ರಮ ವಿಸಾಜಿ ಹಾಗೂ ಆಳಂದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸಂಗೀತ ಶಿಕ್ಷಕ ಬರದಿನಾಥ ಮುಡಬಿ ಪುಸ್ತಕ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.