ADVERTISEMENT

ಕ್ರೀಡಾಕೂಟಕ್ಕೆ ತಂಡ ಕಳಿಸದ ಗುಲಬರ್ಗಾ ವಿವಿ

ಮಲ್ಲಪ್ಪ ಪಾರೇಗಾಂವ
Published 1 ಜನವರಿ 2025, 4:48 IST
Last Updated 1 ಜನವರಿ 2025, 4:48 IST
ಗುಲಬರ್ಗಾ ವಿವಿ ಆಡಳಿತ ಭವನ
ಗುಲಬರ್ಗಾ ವಿವಿ ಆಡಳಿತ ಭವನ   

ಕಲಬುರಗಿ: ಅಂತರರಾಷ್ಟ್ರೀಯ ಟೆನಿಸ್‌ ಟೂರ್ನಿಯ ಆಯೋಜನೆಯ ಮೂಲಕ ಜಿಲ್ಲೆಯ ಕ್ರೀಡಾ ವಲಯದ ಸಮಗ್ರ ಅಭಿವೃದ್ಧಿಗಾಗಿ ಜಿಲ್ಲಾಡಳಿತವು ಶ್ರಮಿಸುತ್ತಿದ್ದರೆ, ಇತ್ತ ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ಪ್ರತಿಷ್ಠಿತ ದಕ್ಷಿಣ ವಲಯ ಅಂತರ ವಿವಿಗಳ ಕ್ರೀಡಾಕೂಟಕ್ಕೆ ಆಯ್ಕೆಯಾದ ತಂಡಗಳನ್ನು ಕಳುಹಿಸದೇ ನಿರ್ಲಕ್ಷ್ಯ ವಹಿಸಿದೆ.

ಅಖಿಲ ಭಾರತ ವಿಶ್ವವಿದ್ಯಾಲಯಗಳ ಒಕ್ಕೂಟ(ಎಐಯು)ದ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯಗಳ ಕ್ರೀಡಾಕೂಟ  ತಮಿಳುನಾಡಿನ ತಿರುವರುರನಲ್ಲಿ ಆರಂಭವಾಗಿದೆ. ಆದರೆ, ಗುಲಬರ್ಗಾ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಹಾಗೂ ವಿವಿಯ ದೈಹಿಕ ಶಿಕ್ಷಣ ವಿಭಾಗದ ಯಡವಟ್ಟಿನಿಂದಾಗಿ ಪುರುಷ ಮತ್ತು ಮಹಿಳೆಯರ ಕೊಕ್ಕೊ ತಂಡಗಳು ಹಾಗೂ ಕರಾಟೆ ಪಟುಗಳು ಕ್ರೀಡಾಕೂಟದಿಂದ ಹೊರಗುಳಿಯುವಂತಾಗಿದೆ.

‘ವಿಶ್ವವಿದ್ಯಾಲಯದವರು ಕ್ರೀಡಾಕೂಟ ಆರಂಭವಾಗುವುದಕ್ಕೂ ಮೊದಲು ಆಯ್ಕೆಯಾದ ತಂಡವನ್ನು ಪ್ರಕಟಿಸಬೇಕು. ಕ್ರೀಡಾಕೂಟ ಆಯೋಜನೆಯಾಗುವ ಸ್ಥಳಕ್ಕೆ ತೆರವಳುವ ಕ್ರೀಡಾಪಟುಗಳಿಗಾಗಿ ರೈಲ್ವೆ ಟಿಕೆಟ್‌ ಬುಕ್ಕಿಂಗ್‌, ಅಗತ್ಯ ಖರ್ಚು ವೆಚ್ಚ ಹಾಗೂ ತಂಡದೊಂದಿಗೆ ಒಬ್ಬ ದೈಹಿಕ ಶಿಕ್ಷಣ ನಿರ್ದೇಶಕರನ್ನು ಕಳುಹಿಸಬೇಕು. ಆದರೆ, ವಿಶ್ವವಿದ್ಯಾಲಯದವರು ಇದ್ಯಾವುದನ್ನು ಮಾಡಿಲ್ಲ. ಕ್ರೀಡಾಕೂಟ ನಾಳೆ ಇರುವಾಗ ಇಂದು ಕರೆದು ಆಯ್ಕೆಪಟ್ಟಿ ಪ್ರಕಟಿಸಿ ಕ್ರೀಡಾಕೂಟಕ್ಕೆ ಹೋಗಿ ಎಂದರೆ ಯಾರು ಹೋಗುತ್ತಾರೆ?’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ದೈಹಿಕ ಶಿಕ್ಷಣ ನಿರ್ದೇಶಕರೊಬ್ಬರು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ಹೊರಹಾಕಿದರು. ಡಿಸೆಬರ್‌ 27, 28ರಂದು ಕೊಕ್ಕೊ ಪಂದ್ಯಗಳು ನಡೆದಿವೆ.

ADVERTISEMENT

ಪ್ರತಿ ವಿಶ್ವವಿದ್ಯಾಲಯವು ಆಗಸ್ಟ್‌–ಸೆಪ್ಟೆಂಬರ್‌ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಿ, ಕ್ರೀಡಾಪಟುಗಳ ಹಾಗೂ ತಂಡಗಳನ್ನು ಆಯ್ಕೆ ಮಾಡಿ ಅಂತಿಮ ಪಟ್ಟಿಯನ್ನು ಪ್ರಕಟಿಸಬೇಕು. ಆದರೆ, ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಇದ್ಯಾವುದು ಆಗುತ್ತಿಲ್ಲ. ಈವರೆಗೂ ಫುಟ್‌ಬಾಲ್‌ ತಂಡವನ್ನು ಆಯ್ಕೆ ಮಾಡಿಲ್ಲ. ಅಲ್ಲದೇ ಕುಸ್ತಿ ಪಟು, ಕ್ರಿಕೆಟ್‌ (ಪುರುಷ), ಹ್ಯಾಂಡಬಾಲ್‌(ಪುರುಷ) ತಂಡಗಳ ಆಯ್ಕೆಗೆ ಡಿಸೆಂಬರ್‌ 31ರಂದು ಸೂಚನೆ ನೀಡಿದ್ದಾರೆ.

‘ವಿಶ್ವವಿದ್ಯಾಲಯದ ನಿಯಮ ಗಳಂತೆ ಪ್ರತಿ ವರ್ಷ ಕ್ರೀಡಾಕೂಟ ಆಯೋಜಿಸಬೇಕು. ಇದಕ್ಕೂ ಮೊದಲು ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರೊಂದಿಗೆ ಬೋರ್ಡ್‌ ಆಫ್‌ ಸ್ಪೋರ್ಟ್ಸ್‌ ಸಭೆ ನಡೆಸಬೇಕು. ರೂಪರೇಷೆ ಸಿದ್ಧಪಡಿಸಬೇಕು. ಆದರೆ, ಈವರೆಗೆ ಒಂದು ಬಾರಿಯೂ ನಿಯಮಿತವಾಗಿ ಸಭೆ ಕರೆದಿಲ್ಲ’ ಎಂದು
ಹೇಳಿದರು.

ದಕ್ಷಿಣ ವಲಯದ ಅಂತರ ವಿ.ವಿ ಕ್ರೀಡಾಕೂಟಕ್ಕಾಗಿ ಆಯ್ಕೆಯಾಗುವ ತಂಡಗಳನ್ನು ಕರೆದೊಯ್ಯಿರಿ ಎಂದು ಬಾಯಿ ಮಾತಿಗೆ ಹೇಳುತ್ತಾರೆ. ಬಾಯಿ ಮಾತಿನಲ್ಲಿ ಹೇಳಿದರೆ ಯಾರು ಹೋಗುತ್ತಾರೆ. ಅದಕ್ಕಾಗಿ ಒಂದು ಪ್ರಕ್ರಿಯೆ ಇದೆ. ಅದನ್ನು ಮರೆತೆಬಿಟ್ಟಿದ್ದಾರೆ. ತಂಡವನ್ನು ಕರೆದೊಯ್ಯಲು ಹಣವನ್ನು ಕೊಡುವುದಿಲ್ಲ. ದೈಹಿಕ ಶಿಕ್ಷಣ ನಿರ್ದೇಶಕರು ತಮ್ಮ ಸ್ವಂತ ಖರ್ಚಿನಲ್ಲಿಯೇ ತಂಡಗಳನ್ನು ಕರೆದೊಯ್ಯಬೇಕು. ಆಮೇಲೆ ಕೇಳಿದರೆ ಕಚೇರಿಗೆ ಅಲೆದಾಡಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದಲ್ಲಿ ಕ್ರೀಡಾಕೂಟ ಆಯೋಜಿಸುತ್ತಾರೆ. ಆದರೆ, ಕ್ರೀಡಾಕೂಟಕ್ಕಾಗಿ ಬರುವ ಅಥ್ಲೀಟ್‌ಗಳು ಹಾಗೂ ಕ್ರೀಡಾಪಟುಗಳಿಗೆ ಸೂಕ್ತ ಸೌಲಭ್ಯಗಳಿರುವುದಿಲ್ಲ. ಕ್ರೀಡಾಕೂಟದಲ್ಲಿ ಊಟ–ಉಪಾಹಾರದ ವ್ಯವಸ್ಥೆ ಮಾಡುವುದಿಲ್ಲ. ಕಡೆಯ ಪಕ್ಷ ಪ್ರಥಮ ಸ್ಥಾನ ಗಳಿಸುವ ತಂಡಗಳಿಗೆ ಟ್ರೋಫಿಯನ್ನೂ ಕೊಡುವುದಿಲ್ಲ ಎಂದು ಕ್ರೀಡಾಪಟುವೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಡಿ.27ರಂದು ನಡೆಯಬೇಕಿದ್ದ ಕೊಕ್ಕೊ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಬೇಕಿತ್ತು. ಒಂದೇ ದಿನ ಬಾಕಿಯಿದ್ದು, ತಮಿಳುನಾಡಿಗೆ ತೆರಳಲು ಸಾಧ್ಯವಾಗುವುದಿಲ್ಲ ಎಂದು ವಿಶ್ವವಿದ್ಯಾಲಯದವರು ಹೇಳಿದರು
ನಾಗೇಶ, ಕೊಕ್ಕೊ ಆಟಗಾರ
ಕೊಕ್ಕೊ ತಂಡ ಕರೆದೊಯ್ಯಲು ಹಲವು ದೈಹಿಕ ಶಿಕ್ಷಣ ನಿರ್ದೇಶಕರಿಗೆ ಹೇಳಿದೆ. ಯಾರೂ ಮುಂದಾಗಲಿಲ್ಲ. ಹೀಗಾಗಿ ತಂಡವನ್ನು ಕಳುಹಿಸಲು ಸಾಧ್ಯವಾಗಲಿಲ್ಲ
ಎನ್‌.ಜಿ. ಕನ್ನೂರ, ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ, ಗುಲಬರ್ಗಾ ವಿವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.