ADVERTISEMENT

ಸಮಾಜಕ್ಕೆ ಬೆಳಕು ತೋರಿದ ಜಿಡಗಾ ಮಠ: ಭೀಮಾಶಂಕರ ಪಾಟೀಲ

​ಪ್ರಜಾವಾಣಿ ವಾರ್ತೆ
Published 25 ಜುಲೈ 2021, 15:07 IST
Last Updated 25 ಜುಲೈ 2021, 15:07 IST
ಜಿಡಗಾ ಮಠದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭೀಮಾಶಂಕರ ಪಾಟೀಲ ಮಾತನಾಡಿದರು. ಡಾ. ಮುರುಘರಾಜೇಂದ್ರ ಸ್ವಾಮೀಜಿ, ಅಶೋಕ ಗುತ್ತೇದಾರ ಇತರರು ಇದ್ದರು
ಜಿಡಗಾ ಮಠದಲ್ಲಿ ನಡೆದ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಭೀಮಾಶಂಕರ ಪಾಟೀಲ ಮಾತನಾಡಿದರು. ಡಾ. ಮುರುಘರಾಜೇಂದ್ರ ಸ್ವಾಮೀಜಿ, ಅಶೋಕ ಗುತ್ತೇದಾರ ಇತರರು ಇದ್ದರು   

ಕಲಬುರ್ಗಿ: ಜಿಲ್ಲೆಯ ಆಳಂದ ತಾಲ್ಲೂಕಿನ ಜಿಡಗಾ ಮಠದಲ್ಲಿ ಶನಿವಾರ ಗುರುಪೂರ್ಣಿಮೆ ಅಂಗವಾಗಿ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಯುವ ಮುಖಂಡ ಭೀಮಾಶಂಕರ ಪಾಟೀಲ, ‘ಕಲಿಯುಗದ ಭೂ ಕೈಲಾಸವಾಗಿ, ಬೇಡಿ ಬಂದ ಭಕ್ತರ ಭಾಗ್ಯದ ನಿಧಿಯಾಗಿ, ಕತ್ತಲುಂಡ ಸಮಾಜದ ಬೆಳಕಾಗಿ ಶ್ರೀಮಠ ಕೆಲಸ ಮಾಡುತ್ತಿರುವುದ ಹೆಮ್ಮೆಯ ವಿಚಾರ. ಕಲ್ಯಾಣ ಕರ್ನಾಟಕದಲ್ಲಿ ಶಿವಯೋಗದ ಮೂಲಕ ಭಕ್ತರ ಸಂಕಷ್ಟ ಪರಿಹರಿಸುತ್ತಿರುವ ಏಕೈಕ ಮಠ ಜಿಡಗಾ. ನಿರಂತರ ಅನ್ನ,ಜ್ಞಾನ ದಾಸೋಹದಂಥಹ ಮಹತ್ಕಾರ್ಯಗಳನ್ನು ಶ್ರೀಮಠ ಮಾಡುತ್ತ ಬರುತ್ತಿದೆ’ ಎಂದರು.

‘ಸ್ವಾಮಿ ಎಂದರೆ ಸ್ಥಾವರಕ್ಕೆ ಒಡೆಯನಲ್ಲ. ಸಮಾಜದ ನಿಷ್ಠಾವಂತ ಸೇವಕ ಎಂದು ನಡೆದು ತೋರಿದ ಜಂಗಮ ಪುಂಗವ ಷಡಕ್ಷರಿ ಶಿವಯೋಗಿ ಸಿದ್ಧರಾಮ ಸ್ವಾಮೀಜಿಗಳು ನಡೆದಾಡಿದ ಪುಣ್ಯ ನೆಲ ಜಿಡಗಾ. ಇಂಥ ಪರಮ ಪಾವನ ಕ್ಷೇತ್ರದಲ್ಲಿ ಪೀಠಾಧ್ಯಕ್ಷರಾದ ಡಾ.ಮುರುಘರಾಜೇಂದ್ರ ಶಿವಯೋಗಿಗಳ ಸಾನ್ನಿಧ್ಯದಲ್ಲಿ ಗುರುಪೂರ್ಣಿಮೆ ಅರ್ಥಪೂರ್ಣವಾಗಿ ನಡೆದಿದೆ. ಭಕ್ತಿಯಲ್ಲಿ ಬಸವಣ್ಣ, ಜ್ಞಾನದಲ್ಲಿ ಚೆನ್ನಬಸವ, ವಿರತಿಯಲಿ ಅಲ್ಲಮಪ್ರಭು, ಶಿವಯೋಗದಲ್ಲಿ ಸಿದ್ಧರಾಮರಾಗಿ ಮುರುಘರಾಜೇಂದ್ರ ಸ್ವಾಮೀಜಿಗಳು ಕೆಲಸ ಮಾಡುತ್ತಿದ್ದಾರೆ’ ಎಂದರು.

ADVERTISEMENT

ಮಠದ ಭಕ್ತರಾದ ಅಶೋಕ ಗುತ್ತೇದಾರ, ರಾಜು ಮಲಶೆಟ್ಟಿ, ಶರಣು ಭೂಸನೂರ, ವಿರೂಪಾಕ್ಷಿ ಚಿದ್ರಿ ಹಾಗೂ ಇತರರು ಈ ಸಂದರ್ಭದಲ್ಲಿದ್ದರು.

ನಂತರ ಭಕ್ತರ ಪರವಾಗಿ ಡಾ. ಮುರುಘರಾಜೇಂದ್ರ ಶಿವಯೋಗಿ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.