
ಕಲಬುರಗಿ: 'ರಾಜ್ಯ ಸರ್ಕಾರದ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ತಡೆ ಮಸೂದೆಯು ದಮನಕಾರಿಯಾದ ಕಾನೂನು. ದ್ವೇಷ ಭಾಷಣ ಏನು ಎಂಬುದರ ವ್ಯಾಖ್ಯಾನ ಬಹಳ ದೊಡ್ಡ ಪ್ರಮಾಣದಲ್ಲಿ ಮಾಡಿದ್ದಾರೆ. ಹೀಗಾಗಿ ಯಾರನ್ನು ಯಾವಾಗ ಬೇಕಾದರೂ ಒಳಗೆ ಹಾಕಬಹುದಾದಂತಹ ಕಾನೂನು ಇದಾಗಿದೆ. ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುಡುವ ಕೆಲಸ ಇದಾಗಿದೆ' ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಟೀಕಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ಆರ್ಥಿಕವಾಗಿ ಸರ್ಕಾರ ದಿವಾಳಿಯಾಗಿದೆ. ಹಳ್ಳಿಯಿಂದ ವಿಧಾನಸೌಧದ ವರೆಗೂ ಭ್ರಷ್ಟಾಚಾರ ನಡೆಯುತ್ತಿದೆ. ಈಗಾಗಲೆ ಬಿಎನ್ಎಸ್ ಕಾಯ್ದಯಲ್ಲಿ ಈ ವಿಚಾರವಿದೆ. ಹಾಗಿದ್ದಾಗ ಈ ವಿಶೇಷ ಕಾನೂನು ತರುವಂತಹ ಅಗತ್ಯ ಏನಿತ್ತು. ಇದನ್ನು ವಿರೋಧಿಸಿ ಎಲ್ಲಾ ಸ್ತರಗಳಲ್ಲಿ ಹೋರಾಟ ಮಾಡುತ್ತಿದ್ದು, ರಾಜ್ಯಪಾಲರನ್ನೂ ಭೇಟಿ ಮಾಡುತ್ತೇವೆ. ಅಗತ್ಯ ಬಿದ್ದರೆ ಕಾನೂನು ಹೋರಾಟ ಕೂಡ ಮಾಡುತ್ತೇವೆ' ಎಂದರು.
ದ್ವೇಷ ಭಾಷಣ ಮಾಡದೆ ಇದ್ರೆ ಬಿಜೆಪಿಯವರಿಗೆ ಯಾಕೆ ಭಯ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 'ರಾಜಕೀಯ ಹೆಗತನ ಸಾಧಿಸುವ ಸರ್ಕಾರ ಇದ್ದಾಗ ಇದು ಬಹಳ ದುರುಪಯೋಗ ಆಗುತ್ತೆ. ಕಾನೂನು ಯಾರ ಕೈಯಲ್ಲಿ ಇದೆ ಎಂಬುದು ಬಹಳ ಮುಖ್ಯವಾಗಿದೆ. ಈ ಸರ್ಕಾರವನ್ನು ಯಾವುದೇ ರೀತಿ ಪ್ರಶ್ನೆ ಮಾಡಬಾರದು ಎಂಬುದು ಇದರ ಉದ್ದೇಶ' ಎಂದು ಟೀಕಿಸಿದರು.
ರಾಜ್ಯದಲ್ಲಿ ಸಿಎಂ ಕುರ್ಚಿ ಕಿತ್ತಾಟ ವಿಚಾರದ ಬಗೆಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, 'ಮಲ್ಲಿಕಾರ್ಜುನ ಖರ್ಗೆಯವರು ಬೆಂಗಳೂರಿನಲ್ಲಿ ಈ ಸಮಸ್ಯೆ ಹೈಕಮಾಂಡ್ ಬಗೆಹರಿಸುತ್ತೆ ಎಂದಿದ್ದರು. ಬಳಿಕ ಈ ಸಮಸ್ಯೆ ಇಲ್ಲೆ ಸೃಷ್ಟಿಯಾಗಿರೋದು, ಹೈಕಮಾಂಡ್ ಸೃಷ್ಟಿ ಮಾಡಿಲ್ಲ. ಹಾಗಾಗಿ ಇಲ್ಲೆ ಬಗೆಹರಿಸಿಕೊಳ್ಳಬೇಕು ಅಂತಾ ಕಲಬುರಗಿಯಲ್ಲಿ ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಹೈಕಮಾಂಡ್ ಆಗಿ ಉಳಿದಿಲ್ಲ. ಹೈಕಮಾಂಡ್ ಎರಡು ಭಾಗವಾಗಿದೆ. ಇಲ್ಲಿ ಆಗುತ್ತಿರುವ ಗೊಂದಲದಲ್ಲಿ ಹೈಕಮಾಂಡ್ ಪಾತ್ರ ಕೂಡ ಇದೆ. ಹೈಕಮಾಂಡ್ ದುರ್ಬಲ ಆಗುವುದರ ಜೊತೆಗೆ ಇಬ್ಭಾಗವಾಗಿದೆ. ಹೈಕಮಾಂಡ್ ಅಧಿಕಾರದಲ್ಲಿ ಇದ್ದಾಗ ಸ್ಟ್ರಾಂಗ್ ಆಗಿ ಇರುತ್ತೆ. ಕರ್ನಾಟಕ ಕಾಂಗ್ರೆಸ್ ನಾಯಕರು ಬಹಳ ಪರಿಣಿತ ನಾಯಕರು ಇದ್ದಾರೆ. ಕರ್ನಾಟಕ ಎಟಿಎಂ ಆಗಿದೆ. ಇಲ್ಲಿಂದಲೆ ಎಲ್ಲವೂ ಹೋಗುತ್ತಿರುವ ಹಿನ್ನೆಲೆಯಲ್ಲಿ ಅವರ ಮಾತೆಲ್ಲಿ ಕೇಳುತ್ತಾರೆ?' ಎಂದು ವ್ಯಂಗ್ಯವಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, 'ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಹಳೇ ಬೇರು, ಹೊಸ ಚಿಗರು ಎಲ್ಲಾ ಜೊತೆಯಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ' ಎಂದರು.