ಕಲಬುರಗಿ: ‘ಹಿತಮಿತವಾದ ಆಹಾರ ಸೇವನೆ, ನಿತ್ಯ ಬೆಳಿಗ್ಗೆ ವ್ಯಾಯಾಮ, ಯೋಗ ಹಾಗೂ ಒಂದಿಷ್ಟು ನಿಮಿಷಗಳ ಧ್ಯಾನ ಮಾಡಿ ದುಶ್ಚಟಗಳಿಂದ ದೂರವಿದ್ದರೆ ಹೃದಯದ ಆರೈಕೆಯಾಗುತ್ತದೆ. ಜತೆಗೆ ಹೃದಯ ಸಂಬಂಧಿತ ಕಾಯಿಲೆಗಳೂ ದೂರವಾಗುತ್ತವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಪತ್ರಕರ್ತರ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು. ತಂಬಾಕು ಉತ್ಪನ್ನಗಳು, ಮದ್ಯ ಸೇವನೆ ಬಿಡಬೇಕು. ಪಾಶ್ಚಿಮಾತ್ಯ ಶೈಲಿಯ ಪಿಜ್ಜಾ, ಬರ್ಗರ್, ಎಣ್ಣೆಯಲ್ಲಿ ಕರಿದ ಪದಾರ್ಥಗಳ ಸೇವನೆಯೂ ತ್ಯಜಿಸಬೇಕು’ ಎಂದರು.
‘ಈಚೆಗೆ ಕೆಲವು ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದರಿಂದ ಜನರಲ್ಲಿ ಭಯದ ವಾತಾವರಣ ಮೂಡಿ, ಆತಂಕಕ್ಕೆ ಒಳಗಾಗುತ್ತಿದ್ದಾರೆ. ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಸೇರಿ ಹಲವು ಸಂಸ್ಥೆಗಳು ಅಧ್ಯಯನ ನಡೆಸಿವೆ. ಎಲ್ಲಿಯೂ ಕೋವಿಡ್ ಲಸಿಕೆಯಿಂದ ಹೃದಯಾಘಾತಗಳು ಸಂಭವಿಸಿದ ಪುರಾವೆ ಸಿಕ್ಕಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ಹೃದಯಘಾತದಿಂದ ಮೃತಪಟ್ಟರೆ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ವರದಿ ಮಾಡಿ, ಅವುಗಳನ್ನು ದಾಖಲು ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಹೃದಯಾಘಾತದಿಂದ ಮೃತಪಟ್ಟಲ್ಲಿ ಮರಣೋತ್ತರ ಪರೀಕ್ಷೆಯೂ ನಡೆಸಲಾಗುವುದು. ಇದರಿಂದ ಸಾವಿಗೆ ನಿಖರವಾದ ಕಾರಣ ತಿಳಿದು ಬರಲಿದೆ’ ಎಂದರು.
‘ಸಮಾಜದ ಸ್ವಾಸ್ಥ್ಯಕ್ಕಾಗಿ ನಿರಂತರವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ಹೀಗಾಗಿಯೇ ಜಯದೇವ ಆಸ್ಪತ್ರೆಯಿಂದ ಹೃದಯ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಇಸಿಜಿ, 2ಡಿ ಇಕೊ, ಟಿಎಂಟಿಯಂತಹ ತಪಾಸಣೆ ಮಾಡಲಾಗುವುದು. ಅಗತ್ಯ ಇದ್ದವರಿಗೆ ಹೆಚ್ಚಿನ ಚಿಕಿತ್ಸೆಯೂ ಕೊಡಲಾಗುವುದು’ ಎಂದು ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ‘ತೀವ್ರ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಸಂಘದ ಸುಮಾರು 600 ಸದಸ್ಯರಿಗೆ ಉಚಿತವಾಗಿ ಹೃದ್ರೋಗ ಆರೋಗ್ಯ ತಪಾಸಣೆ ಮಾಡಲಾಗುವುದು. ಎಲ್ಲರೂ ಇದರ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದರು.
ಇದೇ ವೇಳೆ ಸಚಿವರು ಜಯದೇವ ಆಸ್ಪತ್ರೆಯ ಒಪಿಡಿ ಕಾರ್ಡ್‌ಗಳನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಬಡಶೇಷಿ, ಕಾರ್ಯದರ್ಶಿ ಅರುಣ ಕದಮ ಸೇರಿದಂತೆ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಪತ್ರಕರ್ತರು ಭಾಗವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸಂಗಮನಾಥ ರೇವತಗಾಂವ ನಿರೂಪಿಸಿದರು.
ಮುಂದಿನ ದಿನಗಳಲ್ಲಿ ಕಣ್ಣಿನ ಚಿಕಿತ್ಸೆಗಾಗಿ ಮಿಂಟೊ ಆಸ್ಪತ್ರೆಯ ಶಾಖೆಯನ್ನು ಕಲಬುರಗಿಯಲ್ಲಿ ತೆರೆಯುವ ಚಿಂತನೆ ನಡೆದಿದೆಡಾ.ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.