ADVERTISEMENT

ಚಿಂಚೋಳಿ: ಮಳೆಗೆ ತುಂಬಿ ಹರಿದ ಹಳ್ಳಕೊಳ್ಳಗಳು; ಮನೆಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 2:31 IST
Last Updated 10 ಆಗಸ್ಟ್ 2025, 2:31 IST
<div class="paragraphs"><p>ಕಲಬುರಗಿ ನಗರದಲ್ಲಿ ಶನಿವಾರ ಸುರಿದ ಮಳೆಯಲ್ಲಿಯೇ ಜನ ಸಾಗಿದರು&nbsp;&nbsp;&nbsp;&nbsp;&nbsp; </p></div>

ಕಲಬುರಗಿ ನಗರದಲ್ಲಿ ಶನಿವಾರ ಸುರಿದ ಮಳೆಯಲ್ಲಿಯೇ ಜನ ಸಾಗಿದರು     

   

ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌ 

ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶನಿವಾರ ಧಾರಾಕಾರ ಮಳೆಯಾಗಿದ್ದು, ಗ್ರಾಮೀಣ ಭಾಗದಲ್ಲಿ ಹಳ್ಳಕೊಳ್ಳಗಳು ತುಂಬಿ ಹರಿದರೆ, ನಗರದಲ್ಲಿ ಚರಂಡಿಗಳು ತುಂಬಿ ಹರಿದವು.

ADVERTISEMENT

ಸಂಜೆ 4ರ ವೇಳೆಗೆ ಅಬ್ಬರಿಸಲು ಆರಂಭವಾದ ಆಶ್ಲೇಷಾ ಮಳೆ ಸುಮಾರು 1 ಗಂಟೆ ಧಾರಾಕಾರ ಸುರಿಯಿತು. ಪರಿಣಾಮ ನಗರದ ಪಿಡಿಎ ಕಾಲೇಜು ಎದುರಿನ ರೈಲ್ವೆ ಕೆಳಸೇತುವೆಯಲ್ಲಿ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸವಾರರಿಗೆ ಅಡಚಣೆ ಉಂಟಾಯಿತು. ಕೆಲವರು ಮೇಲು ಸೇತುವೆ ನಿರ್ಮಾಣವಾಗಬೇಕು ಎಂದು ಗೊಣಗಿಕೊಂಡು ನೀರಿನಲ್ಲಿಯೇ ವಾಹನ ಚಲಾಯಿಸಿದರು. ರಾತ್ರಿ 8 ಗಂಟೆಗೆ ಮತ್ತೆ ಶುರುವಾದ ಮಳೆ ತಡರಾತ್ರಿ ವರೆಗೆ ಸುರಿಯಿತು.

ಚಿಂಚೋಳಿ ವರದಿ: ತಾಲ್ಲೂಕಿನಾದ್ಯಂತ ಶನಿವಾರ ಬೆಳಿಗ್ಗೆಯಿಂದ ಭಾರಿ ಮಳೆ ಸುರಿದಿದೆ. ಇದರಿಂದ ನಾಲಾ ತೊರೆಗಳು ಉಕ್ಕೇರಿ ಹರಿದು ಎಲ್ಲೆಡೆ ಪ್ರವಾಹ ಸೃಷ್ಟಿಸಿದೆ. ಮಳೆಯಿಂದ ಅಪಾರ ಪ್ರಮಾಣದಲ್ಲಿ ತಗ್ಗು ಪ್ರದೇಶದ ಹೊಲಗಳು ಜಲಾವೃತವಾದರೆ ತಾಲ್ಲೂಕಿನ ಬೆನಕನಳ್ಳಿ ಗ್ರಾಮದಲ್ಲಿ 5 ಮನೆಗಳಿಗೆ ನೀರು ನುಗ್ಗಿದೆ.

ಕೆಳದಂಡೆ ಮುಲ್ಲಾಮಾರಿ ಯೋಜನೆಯ ನಾಗರಾಳ ಜಲಾಶಯಕ್ಕೆ 880 ಕ್ಯುಸೆಕ್ ಒಳ ಹರಿವಿದ್ದು ಮುನ್ನಚ್ಚರಿಕೆ ಕ್ರಮವಾಗಿ ಜಲಾಶಯದಿಂದ 2 ಸಾವಿರ ಕ್ಯುಸೆಕ್ ನೀರು ನದಿಗೆ ಬಿಡಲಾಗಿದೆ. ಚಂದಾಪುರ, ಗರಕಪಳ್ಳಿ, ಭಕ್ತಂಪಳ್ಳಿ ಮತ್ತು ಇರಗಪಳ್ಳಿ ಬುರುಗಪಳ್ಳಿ ಬ್ರಿಡ್ಜ್‌ ಕಂ ಬ್ಯಾರೇಜುಗಳು ಮುಳುಗಡೆಯಾಗಿವೆ.

ಚಿಮ್ಮಾಈದಲಾಯಿ ಗ್ರಾಮದ ಗೆದ್ದಲ ನಾಲಾ, ದಸ್ತಾಪುರ ಸೀಮೆಯ ಬಸವಣ್ಣ ದೇವರ ಗುಡಿ ಬಳಿ ತೊರೆ, ಚಿಂಚೋಳಿಯ ಅರೆಹಳ್ಳಿ, ಲೆಂಡಕಿನಾಲಾ ತುಂಬಿ ಹರಿದಿದೆ. ಜನ ಜೀವನ ಅಸ್ತವ್ಯಸ್ತವಾಗಿದೆ. ಕೊಯ್ಲಿಗೆ ಬಂದ ಹೆಸರು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಸಣ್ಣ ನೀರಾವರಿ ಇಲಾಖೆಯ ಯಲಕಪಳ್ಳಿ, ಹೂಡದಳ್ಳಿ, ದೋಟಿಕೊಳ, ಐನಾಪುರ (ಹಳೆ) ಕೆರೆಗಳು ತುಂಬಿವೆ. ತುಮಕುಂಟಾ, ಮುಕರಂಬಾ, ಕೋಡ್ಲಿ, ಕೊಳ್ಳೂರು ಕೆರೆಗಳು ಭರ್ತಿಯತ್ತ ಸಾಗಿವೆ. ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯ ಭರ್ತಿಯತ್ತ ಸಾಗಿದ್ದು 10 ಅಡಿ ಬಾಕಿಯಿದೆ. 

ಅಫಜಲಪುರ ವರದಿ: ತಾಲ್ಲೂಕಿನ ಅತನೂರು, ಸಿದ್ಧನೂರು, ಬೈರಾಮಡಗಿ, ಭೋಗನಹಳ್ಳಿ, ಅಂಕಲಗಿ, ಸಿನ್ನೂರು, ಕರಜಗಿ ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಶನಿವಾರ ಸಂಜೆ ಧಾರಾಕಾರ ಮಳೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ವಿದ್ಯುತ್ ಸ್ಥಗಿತವಾಗಿರುವುದರಿಂದ ಜನಜೀವನ ಅಸ್ತವ್ಯಸ್ತವಾಯಿತು. ವಿಶೇಷವಾಗಿ ಬೈರಾಮಡಗಿ ವಲಯದ ಸುತ್ತಮುತ್ತ ಹೆಚ್ಚಿನ ಮಳೆಯಾಗಿದೆ. ಬೆಳೆ ಹಾನಿ ಸಂಭವಿಸಿದೆ. 

ಅಫಜಲಪುರ ತಾಲ್ಲೂಕಿನ ಬೈರಾಮಡಗಿ ಗ್ರಾಮದ ಮುಂದಿನ ಹಳ್ಳ ತುಂಬಿ ಹರಿಯುತ್ತಿರುವುದು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.