ADVERTISEMENT

ನದಿ ತೀರದಲ್ಲಿ ಮತ್ತೆ ನೆರೆ ‘ನಡುಕ’

ಸುಧಾಕರ ಎಸ್.ತಳವಾರ, ಬೆಂಗಳೂರು
Published 6 ಸೆಪ್ಟೆಂಬರ್ 2019, 4:32 IST
Last Updated 6 ಸೆಪ್ಟೆಂಬರ್ 2019, 4:32 IST
   

ಚಿಕ್ಕೋಡಿ: ಮಹಾರಾಷ್ಟ್ರದ ನದಿ ಜಲಾನಯನ ಪ್ರದೇಶವಾದ ಪಶ್ಚಿಮ ಘಟ್ಟದಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆ ಅಬ್ಬರದಿಂದಾಗಿ ಅಲ್ಲಿನ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದು, ಕೊಯ್ನಾ ಸೇರಿದಂತೆ ವಿವಿಧ ಜಲಾಶಯಗಳಿಂದ ರಾಜ್ಯಕ್ಕೆ 1 ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಪರಿಣಾಮವಾಗಿ ತಾಲ್ಲೂಕಿನ ಜನರಲ್ಲಿ ಮತ್ತೆ ‘ನೆರೆ’ ನಡುಕ ಆರಂಭವಾಗಿದೆ.

ಕಳೆದ ತಿಂಗಳಿನಲ್ಲಿ ಒಡಲ ಮಕ್ಕಳ ನೆಮ್ಮದಿಯನ್ನೇ ಕಿತ್ತುಕೊಂಡಿದ್ದ ಹಿರಿಹೊಳೆ ಕೃಷ್ಣೆ ಮತ್ತು ಉಪನದಿಗಳು ಸಂತ್ರಸ್ತರು ನೋವು ಮರೆಯುವ ಮುನ್ನವೇ ಮತ್ತೆ ಉಕ್ಕೇರುತ್ತಿದೆ. ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿರುವ ಕಲ್ಲೋಳ–ಯಡೂರ, ನಿಪ್ಪಾಣಿ ತಾಲ್ಲೂಕಿನಲ್ಲಿ ದೂಧ್‌ಗಂಗಾ ನದಿಗೆ ಅಡ್ಡಲಾಗಿರುವ ಕಾರದಗಾ–ಭೋಜ್‌, ವೇದಗಂಗಾ ನದಿಗೆ ಅಡ್ಡಲಾಗಿರುವ ಜತ್ರಾಟ–ಭೀವಶಿ, ಅಕ್ಕೋಳ–ಸಿದ್ನಾಳ, ಭೋಜವಾಡಿ–ಕುನ್ನೂರ ಸೇತುವೆಗಳು ಜಲಾವೃತಗೊಂಡಿವೆ.

ADVERTISEMENT

ಮಹಾಪೂರದ ಮುನ್ಸೂಚನೆಗಳು ಮತ್ತೆ ಮರುಕಳುಹಿಸುತ್ತಿದೆ. ವಾರದ ಹಿಂದಷ್ಟೇ ಮಹಾಪೂರದಲ್ಲಿ ಕೊಚ್ಚಿ ಹೋಗಿದ್ದ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ಕೃಷ್ಣಾ ನದಿ ತೀರದ ವಾಸಿಗಳು ಗೌರಿ–ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾಗಲೇ ‘ನೆರೆ’ ಆತಂಕ ಉಂಟಾಗಿದೆ.

‘ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ನಿಂದ ಗುರುವಾರ ಬೆಳಿಗ್ಗೆ 67 ಸಾವಿರ ಕ್ಯುಸೆಕ್‌ ನೀರು ಹೊರಬಿಡಲಾಗುತ್ತಿತ್ತು. ತಾಲ್ಲೂಕಿನ ಕಲ್ಲೋಳ ಬಳಿ 70 ಸಾವಿರ ಕ್ಯುಸೆಕ್‌ ಕೃಷ್ಣಾ ನದಿಗೆ ಸೇರುತ್ತಿದೆ. ಮಧ್ಯಾಹ್ನ ಕೊಯ್ನಾದಿಂದ ಲಕ್ಷ ಕ್ಯುಸೆಕ್‌ಗೂ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಹರಿದುಬರುತ್ತಿದೆ. ಶುಕ್ರವಾರದವರೆಗೆ ಅದು 1.50 ಲಕ್ಷ ಕ್ಯುಸೆಕ್‌ಗೆ ಹೆಚ್ಚುವ ಸಾಧ್ಯತೆ ಇದೆ. ಸಂಭವನೀಯ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ತಹಶೀಲ್ದಾರ್ ಡಾ.ಸಂತೋಷ ಬಿರಾದಾರ ತಿಳಿಸಿದ್ದಾರೆ.

ಪ್ರವಾಹದಿಂದ ಮನೆ, ಆಸ್ತಿಪಾಸ್ತಿ, ಬೆಳೆ ಕಳೆದುಕೊಂಡು ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆದಿದ್ದ ಸಂತ್ರಸ್ತರು ವಾರದ ಹಿಂದಷ್ಟೇ ಸ್ವಗ್ರಾಮಗಳಿಗೆ ಮರಳಿ ಮರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಗುರುವಾರ ತಾಲ್ಲೂಕಿನ ಕಲ್ಲೋಳ ಗ್ರಾಮದ ಬಳಿ ಮೈದುಂಬಿಕೊಂಡು ಹರಿಯುತ್ತಿರುವ ಕೃಷ್ಣೆಯ ದಡದಲ್ಲಿ ಮಹಿಳೆಯರು ಗೌರಿ ಪೂಜೆ ಸಲ್ಲಿಸಿದರು. ಒಳಿತಿಗಾಗಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.