ADVERTISEMENT

ಕಲಬುರಗಿ ಮೇಯರ್‌ ಚುನಾವಣೆ: ಹೊಸ ಅಧಿಸೂಚನೆ ರದ್ದು ಮಾಡಿದ ಹೈಕೋರ್ಟ್‌ ಪೀಠ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2022, 16:36 IST
Last Updated 4 ಫೆಬ್ರುವರಿ 2022, 16:36 IST
ಹೈಕೋರ್ಟ್‌ ಕಲಬುರಗಿ ಪೀಠ
ಹೈಕೋರ್ಟ್‌ ಕಲಬುರಗಿ ಪೀಠ   

ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌–ಉಪ ಮೇಯರ್‌ ಆಯ್ಕೆಗೆ ಇದೇ 5ರಂದು ಚುನಾವಣೆ ನಿಗದಿ ಮಾಡಿ ಪ್ರಾದೇಶಿಕ ಆಯುಕ್ತರು ಹೊರಡಿಸಿದ್ದ ಅಧಿಸೂಚನೆಯನ್ನು ಹೈಕೋರ್ಟ್‌ನ ಕಲಬುರಗಿ ಪೀಠ ರದ್ದು ಪಡಿಸಿದೆ.

ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌–ಉಪ ಮೇಯರ್‌ ಮೀಸಲಾತಿ ಬದಲಾವಣೆ ಹಾಗೂ ಹೊಸ ಮತದಾರರ ಪ‍ಟ್ಟಿಯಲ್ಲಿ ಹೊರ ಜಿಲ್ಲೆಯ ಐವರು ವಿಧಾನ ‍ಪರಿಷತ್‌ ಸದಸ್ಯರ ಹೆಸರು ಸೇರಿಸಿದ್ದನ್ನು ಪ್ರಶ್ನಿಸಿ, ಕಾಂಗ್ರೆಸ್‌ನ ಸದಸ್ಯರು ರಿಟ್‌ ಅರ್ಜಿಗಳನ್ನು ಸಲ್ಲಿಸಿದ್ದರು.

ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಅವರಿದ್ದ ಪೀಠವು ಶುಕ್ರವಾರ ಈ ಅರ್ಜಿಗಳನ್ನು ವರ್ಚುವಲ್‌ ಮೂಲಕ ವಿಚಾರಣೆ ನಡೆಸಿ,‘ಒಮ್ಮೆ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಬಳಿಕ ಮಧ್ಯದಲ್ಲಿ ಯಾವುದೇ ಬದಲಾವಣೆ ಮಾಡಲು ಅವಕಾಶವಿಲ್ಲ. ದಿನಾಂಕ ಮಾತ್ರ ಮುಂದೂಡಲು ಸಾಧ್ಯ. ಮೀಸಲಾತಿ ಬದಲಾವಣೆ ಅಥವಾ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶವಿಲ್ಲ. ಹಾಗಾಗಿ, ಕಲಬುರಗಿಮೇಯರ್‌, ಉಪ ಮೇಯರ್‌ ಚುನಾವಣೆಯನ್ನು 2021ರ ನವೆಂಬರ್‌ 6ರಂದು ಹೊರಡಿಸಿದ ಅಧಿಸೂಚನೆಯಂತೆಯೇ ನಡೆಸಬೇಕು. ಒಂದು ತಿಂಗಳ ಅವಧಿಯಲ್ಲಿ ಈ ಪ್ರಕ್ರಿಯೆ ಮುಗಿಸಬೇಕು’ ಎಂದು ಆದೇಶಿಸಿತು.

ADVERTISEMENT

ಐವರು ವಿಧಾನ ಪರಿಷತ್‌ ಸದಸ್ಯರ ಬಲದಿಂದ ಅಧಿಕಾರ ಗಿಟ್ಟಿಸಿಕೊಳ್ಳುವ ಉಮೇದಿನಲ್ಲಿದ್ದ ಬಿಜೆಪಿಗೆ ಇದರಿಂದ ಹಿನ್ನಡೆಯಾಗಿದೆ. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಬಿಜೆಪಿ ತಿಳಿಸಿದೆ.

ವ್ಯಾಜ್ಯ ಏನು?: 2021ರ ನವೆಂಬರ್‌ 6ರಂದು ಹೊರಡಿಸಿದ ಅಧಿಸೂಚನೆ ಪ್ರಕಾರ ನ.20ರಂದು ಚುನಾವಣೆ ನಡೆಯಬೇಕಿತ್ತು.55 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 27 ಪಾಲಿಕೆ ಸದಸ್ಯರು, ಒಬ್ಬ ರಾಜ್ಯಸಭೆ ಸದಸ್ಯರು, ಒಬ್ಬ ಶಾಸಕಿ ಸೇರಿ ಒಟ್ಟು ಸದಸ್ಯ ಬಲ 29 ಆಗಿತ್ತು. ಬಿಜೆಪಿ 24 ಸದಸ್ಯರು, ಒಬ್ಬ ಸಂಸದರು ಹಾಗೂ ಐವರು ಶಾಸಕರು ಸೇರಿ ಬಲ 30 ಆಗಿತ್ತು. ಈ ಪಟ್ಟಿಯಲ್ಲಿ ಪಾಲಿಕೆಯ ಒಟ್ಟು ಮತದಾರರ ಸಂಖ್ಯೆ 63 ಇತ್ತು. ಅಧಿಕಾರ ಗಿಟ್ಟಿಸಲು 32 ಸದಸ್ಯ ಬಲ ಬೇಕಿತ್ತು.ಮೇಯರ್‌ ಸ್ಥಾನವು ‘ಸಾಮಾನ್ಯ ಮಹಿಳೆ’ ಹಾಗೂ ಉಪಮೇಯರ್‌ ಸ್ಥಾನವು ‘ಹಿಂದುಳಿದ ವರ್ಗ–ಬ’ಗೆ ಮೀಸಲಾಗಿತ್ತು.

ಜೆಡಿಎಸ್‌ನ ನಾಲ್ವರು ಸದಸ್ಯರನ್ನು ಸೇರಿಸಿಕೊಂಡು ಪಾಲಿಕೆ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್‌, ಬಿಜೆಪಿ ಯತ್ನ ನಡೆಸಿದ್ದವು. ಆದರೆ, ವಿಧಾನ ಪರಿಷತ್‌ ಚುನಾವಣೆಯ ನೀತಿ ಸಂಹಿತೆಯ ಕಾರಣ ಚುನಾವಣೆಯನ್ನು ಮುಂದೂಡಲಾಗಿತ್ತು.

ಏತನ್ಮಧ್ಯೆ, ರಾಜ್ಯ ಸರ್ಕಾರ ಮೀಸಲಾತಿ ಬದಲಿಸಿ,ಮೇಯರ್‌ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಹಾಗೂ ಉಪಮೇಯರ್‌ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ನಿಗದಿ ಪಡಿಸಿತು.ಫೆ.5ರಂದು ಚುನಾವಣೆ ನಿಗದಿ ಮಾಡಿ ಪ್ರಾದೇಶಿಕ ಆಯುಕ್ತರು ಹೊಸ ಅಧಿಸೂಚನೆ ಹೊರಡಿಸಿದ್ದರು.

ಐವರ ಹೆಸರು ಸೇರ್ಪಡೆ: ನಾಮಕರಣಗೊಂಡ ಮತ್ತು ವಿಧಾನ ಸಭೆಯಿಂದ ಆಯ್ಕೆಯಾದ ವಿಧಾನ ಪರಿಷತ್‌ ಸದಸ್ಯರು ರಾಜ್ಯದ ಯಾವುದೇ ಜಿಲ್ಲೆಯನ್ನು ನೋಡಲ್‌ ಜಿಲ್ಲೆಯನ್ನಾಗಿ ಆಯ್ಕೆ ಮಾಡಿಕೊಳ್ಳಲು ಅವಕಾಶ ಇದೆ ಎಂಬ ಕಾರಣ ನೀಡಿ, ಬಿಜೆಪಿಯ ಹೊರ ಜಿಲ್ಲೆಗಳ ಏಳು ಜನ ವಿಧಾನ ಪರಿಷತ್‌ ಸದಸ್ಯರು ಕಲಬುರಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಕೋರಿ ಅರ್ಜಿ ಸಲ್ಲಿಸಿದ್ದರು.

ಲಕ್ಷ್ಮಣ ಸವದಿ, ತುಳಸಿ ಮುನಿರಾಜುಗೌಡ, ಭಾರತಿ ಶೆಟ್ಟಿ, ಲೆಹರ್ ಸಿಂಗ್, ರಘುನಾಥರಾವ್ ಮಲ್ಕಾಪುರೆ ಅವರನ್ನು ಇಲ್ಲಿಯ ಮತದಾರರ ಪಟ್ಟಿಯಲ್ಲಿ ಸೇರಿಸಿದ್ದು, ಸಾಯಬಣ್ಣ ತಳವಾರ, ಪ್ರತಾಪಸಿಂಹ ನಾಯಕ ಅವರ ಅರ್ಜಿ ತಿರಸ್ಕರಿಸಲಾಗಿದೆ.

ಚುನಾವಣೆ ನಡೆಸಲು ಹೊರಡಿಸಿದ ಹೊಸ ಅಧಿಸೂಚನೆಯಲ್ಲಿ ವಿಧಾನ ಪರಿಷತ್‌ನ ಐವರು ಸದಸ್ಯರನ್ನು ಸೇರಿಸಿ ಹೊಸ ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಇದರಿಂದ ಬಿಜೆಪಿ ಬಲ 35ಕ್ಕೆ ಏರಿತ್ತು. ಹಿಂದೆ 63 ಇದ್ದ ಸದಸ್ಯ ಬಲ 68ಕ್ಕೆ ಏರಿಕೆಯಾಗಿತ್ತು. ಅಧಿಕಾರಕ್ಕೇರಲು 35 ಸದಸ್ಯರ ಅವಶ್ಯಕತೆ ಇತ್ತು. ಬಿಜೆಪಿ ಅಧಿಕಾರ ಗಿಟ್ಟಿಸಲು ಯತ್ನ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.