ADVERTISEMENT

‘ಭಾಷೆಗಳು ಗೊತ್ತಾಗಿದ್ದೇ ಸಾರ್ಥಗಳ ಮೂಲಕ’

ಪಾಲಿ ಡಿಪ್ಲೊಮಾ ಪ್ರಮಾಣ ಪತ್ರಗಳ ವಿತರಣೆ; ಸದ್ಯೋಜಾತ ಭಟ್ಟ ಮಾಹಿತಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 7:15 IST
Last Updated 18 ಜನವರಿ 2026, 7:15 IST
<div class="paragraphs"><p>ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯ ಹರಿಹರ ಸಭಾಂಗಣದಲ್ಲಿ ಪಾಲಿ ಇನ್‌ಸ್ಟಿಟ್ಯೂಟ್‌ ವತಿಯಿಂದ ಶನಿವಾರ ಪಾಲಿ ಡಿಪ್ಲೊಮಾ ಪ್ರಮಾಣ ಪತ್ರಗಳ ವಿತರಣೆ ನಡೆಯಿತು.             </p></div>

ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯ ಹರಿಹರ ಸಭಾಂಗಣದಲ್ಲಿ ಪಾಲಿ ಇನ್‌ಸ್ಟಿಟ್ಯೂಟ್‌ ವತಿಯಿಂದ ಶನಿವಾರ ಪಾಲಿ ಡಿಪ್ಲೊಮಾ ಪ್ರಮಾಣ ಪತ್ರಗಳ ವಿತರಣೆ ನಡೆಯಿತು.

   

ಕಲಬುರಗಿ: ‘ಭಾಷೆಗಳು ಗೊತ್ತಾಗಿದ್ದೇ ಸಾರ್ಥಗಳ ಮೂಲಕ. ವೇದದಲ್ಲಿ ಸಾರ್ಥ ಎಂದರೆ ಇರುವೆ ಎಂದರ್ಥ. ಒಂದು ಇರುವೆ ಗುಂಪಿನಲ್ಲಿ ಸೈನಿಕ, ಮಂತ್ರಿ, ರಾಜ, ರಾಣಿ ಎಲ್ಲರೂ ಇರುತ್ತಾರೆ. ಅದನ್ನು ನಾವು ಸೂಕ್ಷ್ಮವಾಗಿ ಗಮನಿಸಿದರೆ ಅವುಗಳ ಸಂವಹನ ಗ್ರಹಿಸಬಹುದು’ ಎಂದು ಬೆಂಗಳೂರಿನ ಐಜಿಎನ್‌ಸಿ ಪೇಲಿಯೋ ಗ್ರಾಫಿಸ್ಟ್‌ ಸದ್ಯೋಜಾತ ಭಟ್ಟ ಹೇಳಿದರು.

ಪಾಲಿ ಇನ್‌ಸ್ಟಿಟ್ಯೂಟ್‌ ಕಲಬುರಗಿ ವತಿಯಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಹರಿಹರ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಾಲಿ ಡಿಪ್ಲೊಮಾ ಪ್ರಮಾಣ ಪತ್ರಗಳ ವಿತರಣೆ ಹಾಗೂ ವಿಶೇಷೋಪನ್ಯಾಸ ಸಮಾರಂಭದಲ್ಲಿ ಬ್ರಾಹ್ಮಿಲಿಪಿ ಮತ್ತು ಅಶೋಕನ ಶಾಸನಗಳ ಸುತ್ತಮುತ್ತ ಕುರಿತು ಅವರು ಮಾತನಾಡಿದರು.

ADVERTISEMENT

‘ಖಗೋಳ ಶಾಸ್ತ್ರಜ್ಞ ಅತ್ರೇಯ ನಕ್ಷತ್ರಗಳನ್ನು ನೋಡಿ ಲಿಪಿಗಳನ್ನು ಕೊಟ್ಟರು. ಬ್ರಾಹ್ಮಿ ಪ್ರಚಲಿತಕ್ಕೆ ಬಂದಾಗ ಲಿಪಿ ಸ್ಪಷ್ಟವಾಗುತ್ತಾ ಹೋಯಿತು. ಭಾರತದ ಎಲ್ಲ ಭಾಷೆಗಳೂ ‘ಅ’ ಕಾರದಿಂದಲೇ ಶುರುವಾಗುತ್ತವೆ. ‘ಅ’ ಕಾರ ಕೃತ್ತಿಕಾ ನಕ್ಷತ್ರದಿಂದ ಹುಟ್ಟಿದೆ. ಸಿಂಧೂ ಸರಸ್ವತಿ ನಾಗರಿಕತೆಯಲ್ಲಿ ಲಿಪಿಯನ್ನು ಬಲದಿಂದ ಎಡಕ್ಕೆ ಬರೆಯುತ್ತಿದ್ದರು. ಕರೋಷ್ಠಿ ಲಿಪಿ ಹೆಚ್ಚು ಪ್ರಚಲಿತದಲ್ಲಿದ್ದಿದ್ದು ಗಾಂಧಾರದಲ್ಲಿ’ ಎಂದು ಅವರು ವಿವರಿಸಿದರು.

‘ಲಿಪಿಯನ್ನು ಸಾಮಾನ್ಯ ಜನರಿಗೆ ತಿಳಿವಳಿಕೆ ನೀಡಲು ಬಳಸಿದ್ದು ಸಾಮ್ರಾಟ ಅಶೋಕ. ಹೀಗಾಗಿ ಅವರನ್ನು ಸಂವಹನ ಮಾಧ್ಯಮದ ಪಿತಾಮಹ ಎನ್ನುತ್ತಾರೆ. ಕರ್ನಾಟಕದಲ್ಲಿ ಅಶೋಕನ 11 ಶಾಸನಗಳು ಪತ್ತೆಯಾಗಿವೆ. ಅಶೋಕನು ಶಾಸನಗಳನ್ನು ಬರೆಯಿಸಿದ್ದು ಚಪಡ ಎಂಬಾತನಿಂದ. ಅವುಗಳನ್ನು ಓದಲು ಅಧಿಕಾರಿಗಳನ್ನು ನೇಮಿಸಿದ್ದ. ಅಶೋಕ ತನ್ನ ಶಾಸನಗಳಲ್ಲಿ ಶ್ರದ್ಧೆ, ನಿಷ್ಠೆ, ರಾಜಾಜ್ಞೆಯನ್ನು ಉಲ್ಲೇಖಿಸಿದ್ದಾನೆ. ಪುರಾಣ ಇತ್ತು ಎಂಬುದನ್ನೂ ಅಶೋಕ ತೋರಿಸಿಕೊಟ್ಟಿದ್ದಾನೆ. ಪಾಲಿ, ಬ್ರಾಹ್ಮಿ, ಪ್ರಾಕೃತ ಲಿಪಿಗಳಿವೆ. ಮೋಡಿ ಲಿಪಿ ಬಂದಿದ್ದು ಗುಜರಾತಿನ ವ್ಯಾಪಾರಿಗಳಿಂದ’ ಎಂದು ಅವರು ಲಿಪಿಯ ಇತಿಹಾಸ ತೆರೆದಿಟ್ಟರು.

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿವಿ ಕುಲಪತಿ ಪ್ರೊ.ಶಶಿಕಾಂತ ಎಸ್‌.ಉಡಿಕೇರಿ ಪಾಲಿ ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಿದರು. ಪಾಲಿ ಇನ್‌ಸ್ಟಿಟ್ಯೂಟ್ ನಿರ್ದೇಶಕ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ಕಾರ್ಯದರ್ಶಿ ರಮೇಶ್‌ ಬೇಗಾರ, ಕಲಾ ನಿಕಾಯದ ಡೀನ್‌ ಪ್ರೊ.ಎಚ್‌.ಟಿ.ಪೋತೆ ಹಾಜರಿದ್ದರು. ಎಂ.ಬಿ.ಕಟ್ಟಿ ಸ್ವಾಗತಿಸಿದರು. ಸಿದ್ದಾರ್ಥ ಚಿಮ್ಮಾಇದಲಾಯಿ ಬುದ್ಧವಂದನೆ ಸಲ್ಲಿಸಿದರು. ವಿದ್ಯಾರ್ಥಿನಿ ಮಲ್ಲಮ್ಮ ಭೀಮರಾಯ ತಳವಾರ ನಿರೂಪಿಸಿದರು.‌

ಭಾಷೆ ಬದುಕಲು ಲಿಪಿ ಬೇಕು. ಲಿಪಿಗಳಿಂದ ಭಾಷಾ ಪ್ರಸರಣಕ್ಕೆ ನಾಂದಿಯಾಯಿತು. ಪಾಲಿ ಲೋಕವೇ ಬೌದ್ಧ ಲೋಕ. ಗುಲಬರ್ಗಾ ವಿವಿಯಿಂದಲೂ ಪಾಲಿಲಿಪಿಯ ದೂರಶಿಕ್ಷಣಕ್ಕೆ ಸಿದ್ಧತೆ ನಡೆಯುತ್ತಿದೆ
ಪ್ರೊ.ಶಶಿಕಾಂತ ಎಸ್‌. ಉಡಿಕೇರಿ, ಗುಲಬರ್ಗಾ ವಿವಿ ಕುಲಪತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.