ADVERTISEMENT

ಬಣ್ಣದ ಹಬ್ಬಕ್ಕೆ ಹಾಸ್ಯದೋಕುಳಿ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2024, 5:04 IST
Last Updated 26 ಮಾರ್ಚ್ 2024, 5:04 IST

ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರದಲ್ಲಿ ನಡೆಯುತ್ತಿರುವ ಹೋಳಿ ಹಬ್ಬದ ಹಾಸ್ಯಜಾತ್ರೆಯಲ್ಲಿ ಮೈಲಾರಕ್ಕೆ ಹೋಗಿ ಬರುತ್ತಿರುವ ದೃಶ್ಯ

ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರದಲ್ಲಿ ನಡೆಯುತ್ತಿರುವ ಹೋಳಿ ಹಬ್ಬದ ಹಾಸ್ಯಜಾತ್ರೆಯಲ್ಲಿ ಮೈಲಾರಕ್ಕೆ ಹೋಗಿ ಬರುತ್ತಿರುವ ದೃಶ್ಯ

ಚಿಂಚೋಳಿ: ಹೋಳಿ ಹಬ್ಬ ಎಂದಾಕ್ಷಣ ನೆನಪಿಗೆ ಬರುವುದು ರಂಗಿನಾಟ. ಮಹಿಳೆಯರು, ಮಕ್ಕಳು, ಯುವಕರು ಎಲ್ಲರೂ ರಂಗಿನೋಕುಳಿಯಲ್ಲಿ ಮಿಂದೇಳುವುದು ಸರ್ವೆ ಸಾಮಾನ್ಯ. ಆದರೆ ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ರಂಗಿನೋಕುಳಿ ನಿಷಿದ್ಧ. ಬಣ್ಣದಾಟದ ಬದಲಿಗೆ ಗ್ರಾಮಸ್ಥರು ಹಾಸ್ಯದೋಕುಳಿ ನಡೆಸಿ ಸಂಭ್ರಮಿಸುತ್ತಾರೆ.

ADVERTISEMENT

ಐದು ದಿನಗಳ ಕಾಲ ನಡೆಯುವ ಹಾಸ್ಯದೋಕುಳಿಗೆ ಮಾ.23ರಂದು ಚಾಲನೆ ದೊರೆತಿದೆ. ಮಾ.27ರವರೆಗೂ ನಡೆಯಲಿದೆ. ಎಲ್ಲಮ್ಮನ ಕೊಡ ಹೊರುವುದರಿಂದ ಆರಂಭವಾಗುವ ಹಾಸ್ಯ ಜಾತ್ರೆ ಸಿದ್ಧಿವೇಶ(ಪಾತ್ರ)ದೊಂದಿಗೆ ಸಮಾರೋಪಗೊಳ್ಳುತ್ತದೆ. ಯಲ್ಲಮ್ಮನ ಕೊಡ, ಬೀಗರಾಗುವುದು, ಮೈಲಾರಕ್ಕೆ ಹೋಗಿ ಬರುವುದು, ಅಣಕು ಶವಯಾತ್ರೆ, ಮದುವೆ ಎಣ್ಣೆ ಹಚ್ಚುವ ಶಾಸ್ತ್ರ, ಮಠಕ್ಕೆ ನೂತನ ಮರಿ ಪಟ್ಟಾಧಿಕಾರ ಹಾಗೂ ಜೋಕುಮಾರ ಮತ್ತು ಸಿದ್ಧಿವೇಶದ ಮೂಲಕ ವಿಡಂಬಿಸಿ ಸಭಿಕರನ್ನು ನಗೆಗಡಲಲ್ಲಿ ತೇಲಿಸುತ್ತಾರೆ.

ಹಾಸ್ಯ ಜಾತ್ರೆಯಲ್ಲಿ ಕಲಾವಿದರಾದ ವೀರೇಂದ್ರ ಬಳಿ, ಮಹಾದೇವ ಮುಕರಂಬಿ, ರವಿ ಸಂಗಾವಿ, ರವಿ ಬಳಿ, ರಮೇಶ ಅವುಂಟಗಿ, ಮಹಾಂತೇಶ ಮಾಡಗಿ, ಜಗನ್ನಾಥ ಕರ್ಚಖೇಡ, ಶಿವು ಕೋರವಾರ, ಹಾಶಪ್ಪ ಜಡಿ, ಶ್ರೀಮಂತ ಬೆಡಸೂರ. ಮಲ್ಲು ಹೂಗಾರ, ಮಾಳಪ್ಪ ಗಂಗಾಳ, ಶರಣು ಕೋರವಾರ ವಿವಿಧ ಪಾತ್ರ ನಿರ್ವಹಿಸಿ ರಂಜಿಸಿದರು.

ಗ್ರಾಮ ಪಂಚಾಯಿತಿ ಕೇಂದ್ರಸ್ಥಾನವಾದ ಗಡಿಕೇಶ್ವಾರ ಗ್ರಾಮವು 5 ಸಾವಿರ ಜನಸಂಖ್ಯೆ ಹೊಂದಿದ್ದು, ಇಲ್ಲಿ ಜಾನಪದ ಕಲಾವಿದರು ಪ್ರತಿ ಮನೆಯಲ್ಲಿ ಸಿಗುತ್ತಿದ್ದರು. ಮೂರು ದಶಕಗಳ ಹಿಂದೆ ಗಡಿಕೇಶ್ವಾರ ಹೋಳಿ ಹಬ್ಬದ ಹಾಸ್ಯ ಜಾತ್ರೆ ನೋಡಲು ಸುತ್ತಲಿನ ಹತ್ತಾರು ಹಳ್ಳಿಗಳ ಜನ ಎತ್ತಿನ ಗಾಡಿಗಳಲ್ಲಿ ಬಂದು ಜಾತ್ರೆ ನೋಡಿ ಆನಂದಿಸುತ್ತಿದ್ದರು.

ಯುವ ಕಲಾವಿದರು ಸಾಂಪ್ರದಾಯಿಕ ಹಾಸ್ಯೋತ್ಸವದತ್ತ ಮುಖ ಮಾಡಿದ್ದರಿಂದ ಗ್ರಾಮದಲ್ಲಿ ಹೋಳಿ ಹಾಸ್ಯ ಜಾತ್ರೆ ಮತ್ತೆ ಜೀವಪಡೆದಿದೆ. ಇದರಿಂದ ನಶಿಸುತ್ತಿರುವ ಕಲೆ ಪೋಷಿಸಿಕೊಂಡು ಬರಲು ಸಹಕಾರಿಯಾಗಿದೆ ಎನ್ನುತ್ತಾರೆ ಕಲಾವಿದ ಸಂತೋಷಕುಮಾರ ಬಳಿ.

‘ನಮ್ಮೂರಿನಲ್ಲಿ ಬಣ್ಣದಾಟ ಹಲವು ತಲೆಮಾರುಗಳಿಂದ ಆಚರಿಸಿಲ್ಲ. ಅದನ್ನೇ ನಾವು ಮುಂದುವರೆಸಿಕೊಂಡು ಬರುತ್ತಿದ್ದೇವೆ. ರಂಗಿನಾಟ ಆಡದೇ ಇರುವುದರ ಹಿಂದಿನ ಕಾರಣ ಹೊತ್ತಿಲ್ಲ ಎನ್ನುತ್ತಾರೆ ಗ್ರಾ.ಪಂ.ಮಾಜಿ ಸದಸ್ಯ ವೀರೇಶ ಬೆಳಕೇರಿ. ಹಾಸ್ಯಜಾತ್ರೆ ಮತ್ತೆ ಆಚರಣೆಗೆ ಬಂದಿದ್ದು ಇದಕ್ಕೆ ಯುವಕರ ಆಸಕ್ತಿಯೇ ಕಾರಣ ಎನ್ನುತ್ತಾರೆ ಗ್ರಾಮದ ಮುಖಂಡ ರೇವಣಸಿದ್ದಪ್ಪ ಅಣಕಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.