ADVERTISEMENT

ಜೂನ್ 20ರಿಂದ ಆಮರಣಾಂತ ಹೋರಾಟ: ಆರ್ಯ ಈಡಿಗ ಸಮುದಾಯ

ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಈಡಿಗ ಸಮುದಾಯದ ಸಭೆ

​ಪ್ರಜಾವಾಣಿ ವಾರ್ತೆ
Published 29 ಮೇ 2022, 12:31 IST
Last Updated 29 ಮೇ 2022, 12:31 IST
ಕಲಬುರಗಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ‍ಪ್ರಣವಾನಂದ ಸ್ವಾಮೀಜಿ ಮಾತನಾಡಿದರು. ಮಹಾದೇವ ಗುತ್ತೇದಾರ, ಅಶೋಕ ಗುತ್ತೇದಾರ ಬಡದಾಳ, ರಾಜೇಶ ಗುತ್ತೇದಾರ ಇದ್ದರು
ಕಲಬುರಗಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ‍ಪ್ರಣವಾನಂದ ಸ್ವಾಮೀಜಿ ಮಾತನಾಡಿದರು. ಮಹಾದೇವ ಗುತ್ತೇದಾರ, ಅಶೋಕ ಗುತ್ತೇದಾರ ಬಡದಾಳ, ರಾಜೇಶ ಗುತ್ತೇದಾರ ಇದ್ದರು   

ಕಲಬುರಗಿ: ಆರ್ಯ ಈಡಿಗ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಒಪ್ಪದಿದ್ದರೆ ಜೂನ್ 20ಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಲು ನಿರ್ಧರಿಸಿದೆ. ಮುಂದಿನ ಪರಿಣಾಮಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ರಾಷ್ಟ್ರೀಯ ಈಡಿಗ ಮಹಾ ಮಂಡಳದ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ನಗರದಲ್ಲಿ ಆರ್ಯ ಈಡಿಗ ಸಮುದಾಯದ ಗೌರವಾಧ್ಯಕ್ಷ ಅಶೋಕ ಗುತ್ತೇದಾರ ಬಡದಾಳ ಅಧ್ಯಕ್ಷತೆಯಲ್ಲಿ ಎರಡನೇ ಹಂತದ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಯಿತು. ಈಡಿಗ ಸೇರಿದಂತೆ 26 ಪಂಗಡಗಳಿಗೆ ಪ್ರತ್ಯೇಕ ಬ್ರಹ್ಮಶ್ರೀ ನಾರಾಯಣಗುರು ನಿಗಮ ಮತ್ತು ಸೇಂದಿ ವೃತ್ತಿ ಪುನರಾರಂಭಿಸಿ ನಮ್ಮ ಕುಲಕಸುಬು ಮರಳಿ ಕೊಡುವಂತೆ ಒತ್ತಾಯಿಸಿ ಮೊದಲ ಹಂತ 151 ಕಿ.ಮೀ. ಪಾದಯಾತ್ರೆ ನಡೆಸಿ ಇದೀಗ ಎರಡನೇ ಹಂತದ ಹೋರಾಟಕ್ಕೆ ಕಲ್ಯಾಣ ಕರ್ನಾಟಕದ 39 ತಾಲ್ಲೂಕುಗಳಲ್ಲಿ ಪೂರ್ವತಯಾರಿ ಸಭೆ ನಡೆಸಲಾಗಿದೆ. ಜೂನ್ 20ಕ್ಕೆ ಬೆಳಿಗ್ಗೆ 9ಕ್ಕೆ ಆರಂಭವಾಗುವ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಪ್ರತೀ ತಾಲ್ಲೂಕಿನಿಂದ ಸಮುದಾಯದ 100 ಜನರು ಪಾಲ್ಗೊಳ್ಳುವರು. ನಿರಂತರ ನಡೆಯುವ ಹೋರಾಟದಲ್ಲಿ ಬೇಡಿಕೆ ಈಡೇರಿಸಲು ಸರಕಾರ ವಿಫಲವಾದರೆ ಮುಂದೆ ಸಂಭವಿಸುವ ಘಟನೆಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಸ್ವಾಮೀಜಿ ಹೇಳಿದರು.

ಸ್ವಾಮೀಜಿಯವರ ಜೊತೆಗೆ ಜೂನ್ 21ರಂದು ಕಲಬುರಗಿ, 22ಕ್ಕೆ ಚಿತ್ತಾಪುರ, 23ಕ್ಕೆ ಸೇಡಂ, 24ಕ್ಕೆ ಆಳಂದ, ಅಫಜಲಪುರ, 25ಕ್ಕೆ ಜೇವರ್ಗಿ ತಾಲ್ಲೂಕುಗಳಿಂದ, 26ಕ್ಕೆ ಯಾದಗಿರಿ ಜಿಲ್ಲೆ, 27ಕ್ಕೆ ಬೀದರ್ ಜಿಲ್ಲೆ, 28ಕ್ಕೆ ರಾಯಚೂರು ಜಿಲ್ಲೆ, 29ಕ್ಕೆ ಕೊಪ್ಪಳ ಜಿಲ್ಲೆ, ಜೂನ್ 30ಕ್ಕೆ ಗಂಗಾವತಿ ತಾಲ್ಲೂಕಿನಿಂದ ಸಮಾಜದ ಜನರು ಪಾಲ್ಗೊಳ್ಳುವರು ಎಂದು ಅಶೋಕ ಗುತ್ತೇದಾರ ತಿಳಿಸಿದರು.

ADVERTISEMENT

ಉದ್ಘಾಟನೆಗೆ ಗಣ್ಯರು: ಜೂನ್ 20ರಂದು ಬೆಳಿಗ್ಗೆ 9ಕ್ಕೆ ತೆಲಂಗಾಣ ಸರ್ಕಾರದ ಅಬಕಾರಿ ಮತ್ತು ಪ್ರವಾಸೋದ್ಯಮ ಸಚಿವ ಶ್ರೀನಿವಾಸ ಗೌಂಡರ್, ಚಲನಚಿತ್ರ ನಟ ಸುಮನ್, ವಿಧಾನಸಭೆಯ ವಿರೋಧ ಪಕ್ಷ ಉಪನಾಯಕ ಯು.ಟಿ. ಖಾದರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ವಿ.ಗುತ್ತೇದಾರ್, ಶಾಸಕ ಸುಭಾಷ್ ಆರ್. ಗುತ್ತೇದಾರ್, ಜೆಡಿಎಸ್ ನಾಯಕ ಬಾಲರಾಜ ಗುತ್ತೇದಾರ ಭಾಗವಹಿಸಲಿದ್ದಾರೆ ಎಂದು ಪ್ರಣವಾನಂದ ಸ್ವಾಮೀಜಿ ತಿಳಿಸಿದರು.

ರಾಜೇಶ ಗುತ್ತೇದಾರ, ರಾಜಕುಮಾರ್ ಗುತ್ತೇದಾರ, ಮಹೇಶ ಹೊಳಕುಂದ, ವಿಠ್ಠಲ ಎಚ್.ಬಾವಗಿ, ಶಿವರಾಜ ಗುತ್ತೇದಾರ ಜೇವರಗಿ ಮಾತನಾಡಿದರು.

ಕೇಂದ್ರ ಸಮಿತಿಯ ಪದಾಧಿಕಾರಿಗಳಾದ ಮಹಾದೇವ ಗುತ್ತೇದಾರ್, ವೆಂಕಟೇಶ ಕಡೇಚೂರ, ಕುಪೇಂದ್ರ ಗುತ್ತೇದಾರ್, ಜಿಲ್ಲಾ ಆರ್ಯ ಈಡಿಗ ಸಮಾಜದ ಅಧ್ಯಕ್ಷ ರಾಜೇಶ ಗುತ್ತೇದಾರ್, ಕಲಬುರಗಿ, ಆಳಂದ , ಆಫಜಲಪುರ, ಜೇವರ್ಗಿ ಸೇರಿದಂತೆ ತಾಲ್ಲೂಕಿನ ಪದಾಧಿಕಾರಿಗಳು, ಆರ್ಯ ಈಡಿಗ ಸಮಾಜದ ನೌಕರರ ಸಂಘದ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.