ADVERTISEMENT

ಗುಡಿಸಲುಗಳ ದೇಶದಲ್ಲಿ ಬಂಗಲೆಗಳೇ ಅಕ್ರಮ: ಶಿವಸುಂದರ್‌

ಸ್ಲಂ ಜನಾಂದೋಲನ ಕರ್ನಾಟಕದ 16ನೇ ಸಂಸ್ಥಾಪನಾ ದಿನ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 8:29 IST
Last Updated 7 ಜನವರಿ 2026, 8:29 IST
<div class="paragraphs"><p>ಸ್ಲಂ ಜನಾಂದೋಲನ ಕರ್ನಾಟಕದ 16 ಸಂಸ್ಥಾಪನ ದಿನದ ಅಂಗವಾಗಿ ಕಲಬುರಗಿಯ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ನಡೆದ ರಾಜ್ಯ ಸಮಾವೇಶದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಗಣ್ಯರು ಹೂಮಾಲೆ ಸಲ್ಲಿಸಿದರು. ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವ‍ಪ್ರಸಾದ, ಅಂಕಣಕಾರ ಶಿವಸುಂದರ ಸೇರಿದಂತೆ ಹಲವರು ಇದ್ದರು.  </p></div>

ಸ್ಲಂ ಜನಾಂದೋಲನ ಕರ್ನಾಟಕದ 16 ಸಂಸ್ಥಾಪನ ದಿನದ ಅಂಗವಾಗಿ ಕಲಬುರಗಿಯ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ನಡೆದ ರಾಜ್ಯ ಸಮಾವೇಶದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಗಣ್ಯರು ಹೂಮಾಲೆ ಸಲ್ಲಿಸಿದರು. ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವ‍ಪ್ರಸಾದ, ಅಂಕಣಕಾರ ಶಿವಸುಂದರ ಸೇರಿದಂತೆ ಹಲವರು ಇದ್ದರು.

   

ಪ್ರಜಾವಾಣಿ ಚಿತ್ರ

ಕಲಬುರಗಿ: ‘ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನೆಲೆಸಿದ್ದಾರೆ ಎಂದು ರಾಜಕಾರಣಿಗಳು ಬೊಬ್ಬೆ ಹೊಡೆಯುತ್ತಿದ್ದಾರೆ. ಯಾವುದು ಅಕ್ರಮ? ಗುಡಿಸಲುಗಳು ಇರುವ ದೇಶದಲ್ಲಿ ಬಂಗಲೆಗಳೇ ಅಕ್ರಮ’ ಎಂದು ಅಂಕಣಕಾರ ಶಿವಸುಂದರ್‌ ಕಿಡಿಕಾರಿದರು.

ADVERTISEMENT

ಸ್ಲಂ ಜನಾಂದೋಲನ ಕರ್ನಾಟಕದ 16ನೇ ಸಂಸ್ಥಾಪನಾ ದಿನದ ಅಂಗವಾಗಿ ಕಲಬುರಗಿಯ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ನಡೆದ ರಾಜ್ಯ ಸಮಾವೇಶದಲ್ಲಿ ಮಾತನಾಡಿದ ಅವರು, ‘ನಗರಗಳಲ್ಲಿ ಕೊಳಗೇರಿಗಳು ಯಾಕೆ ಹೆಚ್ಚುತ್ತಿವೆ? ಬೆಂಗಳೂರಿನಲ್ಲೇ 400 ಗುರುತಿಸಿದ ಮತ್ತು 1200 ಗುರುತಿಸದ ಕೊಳೆಗೇರಿಗಳು ಇವೆ. ಸರ್ಕಾರಗಳು ಉದ್ಯೋಗ ಸೃಷ್ಟಿಸುತ್ತಿಲ್ಲ. ರೈತರ ಬೆಳೆಗೆ ಸೂಕ್ತ ಬೆಲೆ ನೀಡುತ್ತಿಲ್ಲ. ಜನತೆ ಉದ್ಯೋಗ ಅರಸಿ ಮಹಾನಗರಗಳತ್ತ ವಲಸೆ ಹೋಗುತ್ತಾರೆ. ಪರಿಣಾಮ ಕೊಳೆಗೇರಿಗಳು ಹೆಚ್ಚುತ್ತಿವೆ’ ಎಂದು ವಿವರಿಸಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ, ‘ಕೂಲಿಯವರು, ಕೊಳೆಗೇರಿ ನಿವಾಸಿಗಳನ್ನು ಸಮಾಜ ತಾತ್ಸಾರ ಭಾವದಿಂದ ನೋಡುತ್ತದೆ. ಪ್ರಭುತ್ವ ತಾಯ್ತನದಿಂದ ಇರಬೇಕು. ತಂದೆಯ ಜ್ಞಾನವೂ ಪ್ರಭುತ್ವಕ್ಕಿಲ್ಲ. ದೇಶದಲ್ಲಿ ಸಾಂಸ್ಕೃತಿಕ ರಾಜಕಾರಣ ನಡೆಯುತ್ತಿದೆ. ಮಹಾನ್‌ ವ್ಯಕ್ತಿಗಳನ್ನು ಜಾತಿಗೆ ಸೀಮಿತ ಮಾಡಿ ಬೀಗ ಹಾಕಲಾಗುತ್ತಿದೆ. ಶಿಕ್ಷಣ, ಆರೋಗ್ಯ ವ್ಯಾಪಾರೀಕರಣ ಆಗಿವೆ. ‍‍ಪ್ರಸ್ತುತ ದೇಶದಲ್ಲಿ ಅಪರಾಧವೇ ಅಧಿಕಾರವಾಗಿ ಆಳುತ್ತಿದೆ. ಪ್ರಶ್ನಿಸದಿದ್ದರೆ ಅದೂ ದೊಡ್ಡ ಅಪರಾಧ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕ ಇಮ್ತಿಯಾಜ ಮಾನವಿ, ‘ಸ್ಲಂ ಜನರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಸಮಿತಿ ಹೋರಾಟ ಮಾಡುತ್ತಿದೆ. ಸ್ಲಂ ಜನರ ಶಕ್ತಿಯಾಗಿ ಸಂಘಟನೆ ಕೆಲಸ ಮಾಡುತ್ತಿದೆ’ ಎಂದರು. ಹೋರಾಟಗಾರ ಅಂಬಣ್ಣ ಅರೋಲಿಕರ್, ಕಲಬುರಗಿಯ ಶರಣು ಹಂಗರಗಿ ಕಲಾ ತಂಡ ಮತ್ತು ತುಮಕೂರಿನ ಅರುಣ ಕಲಾ ತಂಡದವರು ಕ್ರಾಂತಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ಸ್ಲಂ ಜನಾಂದೋಲನದ ಕಲಬುರಗಿ ಸಂಚಾಲಕಿ ರೇಣುಕಾ ಸರಡಗಿ ಸ್ವಾಗತಿಸಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಅಲ್ಲಮಪ್ರಭು ದೇಶಮುಖ, ಭಾರತೀಯ ಬೌದ್ಧ ಮಹಾಸಭೆಯ ಪುಟ್ಟಮಣಿ ದೇವಿದಾಸ, ಎ.ನರಸಿಂಹ ಮೂರ್ತಿ, ಶೋಭಾ ಕಮತಾರ್‌, ರಸೂಲ ನದಾಫ್‌, ಗೌರಮ್ಮ ಮಾಕಾ, ಹಣಮಂತ ಶಹಾಪೂರಕರ್‌, ಡಿ.ಸುಧಾ, ವೆಂಕಮ್ಮ, ಅರುಣ, ಜ್ಯೋತಿ ಕೋಳಿ, ಮಂಜುಬಾಯಿ, ಹಣಮಂತ ಕಟ್ಟಿಮನಿ ಸೇರಿದಂತೆ ಹಲವರು ಹಾಜರಿದ್ದರು.

ಸಮಾವೇಶಕ್ಕೂ ಮುನ್ನ ಜಗತ್‌ ವೃತ್ತದಲ್ಲಿರುವ ಡಾ.ಅಂಬೇಡ್ಕರ್‌ ಪುತ್ಥಳಿ ಆವರಣದಿಂದ ಎಸ್‌.ಎಂ.ಪಂಡಿತ ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು.

ಭಿಕ್ಷಾಟನೆ ಪಿಡುಗಲ್ಲ ಅಸಮಾನತೆಯೇ ಸಾಮಾಜಿಕ ಪಿಡುಗು. ಜನತೆ ನಗರಗಳತ್ತ ವಲಸೆ ಹೋಗುವುದನ್ನು ತಡೆಯಲು ಸರ್ಕಾರಗಳು ಉದ್ಯೋಗ ಸೃಷ್ಟಿಸಬೇಕು
ಶಿವಸುಂದರ ಅಂಕಣಕಾರ
ಅಂಬೇಡ್ಕರ್‌ ಎಂದರೆ ಅಮ್ಮ. ಅವರ ಆಶಯಗಳಿಲ್ಲದ ದೇಶ ಅನಾಥ. ದೇಶದಲ್ಲಿ ಪ್ರಸ್ತುತ ಕ್ರೌರ್ಯ ಹಿಂಸೆ ದಾಳಿಯನ್ನು ವೈಭವೀಕರಿಸಲಾಗುತ್ತಿದೆ. ಆದರೆ ಸುಳ್ಳಿನ ಸೌಧ ನಿಜಗಾಳಿಗೆ ನಿಲ್ಲುವುದಿಲ್ಲ
ಗೊಲ್ಲಹಳ್ಳಿ ಶಿವಪ್ರಸಾದ ಜಾನಪದ ಅಕಾಡೆಮಿ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.