ADVERTISEMENT

ಹಿಜಾಬ್ ವಿವಾದ: ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಬಸವರಾಜ ರಾಯರೆಡ್ಡಿ ಒತ್ತಾಯ

ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2022, 12:13 IST
Last Updated 9 ಫೆಬ್ರುವರಿ 2022, 12:13 IST
ಬಸವರಾಜ ರಾಯರೆಡ್ಡಿ
ಬಸವರಾಜ ರಾಯರೆಡ್ಡಿ   

ಕಲಬುರಗಿ: ರಾಜ್ಯದಲ್ಲಿ ಒಂದು ವಾರದಿಂದ ಉಂಟಾಗಿರುವ ಹಿಜಾಬ್–ಕೇಸರಿ ಶಾಲು ಸಂಘರ್ಷವನ್ನು ನಿಭಾಯಿಸಲು ರಾಜ್ಯದ ಬಿಜೆಪಿ ಸರ್ಕಾರ ವಿಫಲವಾಗಿದ್ದು, ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಪುಟದಲ್ಲಿರುವ ಆರ್‌ಎಸ್‌ಎಸ್‌ ಹಿನ್ನೆಲೆಯ ಸಚಿವರಾದ ಆರಗ ಜ್ಞಾನೇಂದ್ರ, ಬಿ.ಸಿ. ನಾಗೇಶ್ ಅವರು ಜವಾಬ್ದಾರಿಯಿಂದ ಮಾತನಾಡುವ ಬದಲು ಪ್ರಚೋದನಕಾರಿಯಾಗಿ ಹೇಳಿಕೆ ನೀಡುತ್ತಿರುವುದು ಪರಿಸ್ಥಿತಿ ಬಿಗಡಾಯಿಸಲು ಕಾರಣವಾಗಿದೆ. ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಸಂಸದ ನಳಿನ್‌ ಕುಮಾರ್ ಕಟೀಲ್ ಅವರೂ ವಿವಾದ ಸೃಷ್ಟಿಸುವುದರಲ್ಲೇ ನಿರತರಾಗಿದ್ದಾರೆ‘ ಎಂದು ದೂರಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬೇರೆ ಪಕ್ಷದಲ್ಲಿದ್ದು ಈಗ ಬಿಜೆಪಿ ಸೇರಿರುವವರು ಇದ್ದುದರಲ್ಲಿ ಸಂಯಮದಿಂದ ಇದ್ದಾರೆ. ಆದರೂ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಂದಿದೆ. ಗೃಹ ಸಚಿವರ ತವರು ಜಿಲ್ಲೆಯಲ್ಲಿಯೇ ಕೋಮು ಸಂಘರ್ಷ ನಡೆದಿದೆ. ಆದ್ದರಿಂದ ಕೂಡಲೇ ಪರಿಸ್ಥಿತಿಯನ್ನು ಅವಲೋಕಿಸಿ ರಾಮನಾಥ ಕೋವಿಂದ್ ಅವರು ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ರಾಜ್ಯವು ಎದುರಿಸುತ್ತಿರುವ ಹಲವು ಸವಾಲುಗಳನ್ನು ನಿಭಾಯಿಸುವಲ್ಲಿ ರಾಜ್ಯ ಬಿಜೆಪಿ ಸರ್ಕಾರ ವಿಫಲವಾಗಿದೆ. ಹಾಗಾಗಿ, ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಅನಗತ್ಯ ವಿಚಾರಗಳನ್ನು ಮುನ್ನೆಲೆಗೆ ತಂದಿದೆ. ಪ್ರತಿಯೊಂದು ಧರ್ಮಕ್ಕೆ ತನ್ನದೇ ಆದ ಆಚರಣೆ ನಂಬಿಕೆಗಳಿವೆ. ಅದರಲ್ಲಿ ಮೈ ಹಾಗೂ ಕೂದಲು ಕಾಣಿಸದಂತೆ ಬಟ್ಟೆಯಿಂದ ಮುಚ್ಚಿಕೊಳ್ಳುವುದು ಮುಸ್ಲಿಂ ಧರ್ಮದಲ್ಲಿದೆ. ಅದರಂತೆಯೇ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದರೆ. ಇದರಲ್ಲಿ ಆಕ್ಷೇಪಿಸುವಂತಹ ಸಂಗತಿ ಏನೂ ಇಲ್ಲ. ಸಿಖ್ ಧರ್ಮದಲ್ಲಿ 10 ವರ್ಷ ಮೀರಿದ ಪ್ರತಿಯೊಬ್ಬ ಗಂಡು ಮಕ್ಕಳೂ ಪಗಡಿ ತೊಡಬೇಕು ಎಂಬುದು ನಿಯಮ. ಅದನ್ನು ಅವರು ಅನುಸರಿಸುತ್ತಾರೆ. ಹಿಂದೂ ಮಹಿಳೆಯರು ತಲೆಗೆ ಸೆರಗು ಹಾಕಿಕೊಳ್ಳುತ್ತಾರೆ. ಈ ಎಲ್ಲ ಆಚರಣೆಗಳಿಗೆ ಸಂವಿಧಾನವೇ ಅವಕಾಶ ನೀಡಿದೆ. ಆದರೂ ವಿವಾದ ಸೃಷ್ಟಿಸುತ್ತಿರುವುದು ಏಕೆ’ ಎಂದು ಪ್ರಶ್ನಿಸಿದರು.

ಬುರ್ಖಾ ಕಡ್ಡಾಯ ಮಾಡಿದರೆ ಒಪ್ಪುತ್ತೀರಾ?

ರಾಜ್ಯ ಸರ್ಕಾರವು ಆಯಾ ಸ್ವಾಯತ್ತ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು ನಿಗದಿ ಮಾಡುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಒಪ್ಪಿಕೊಳ್ಳಬೇಕು ಎಂದು ಸೂಚನೆ ನೀಡಿದರೆ. ರಾಜ್ಯದಲ್ಲಿ ಅಲ್ಪಸಂಖ್ಯಾತ ಆಡಳಿತ ಮಂಡಳಿಗಳು ನಡೆಸುವ ವಿಶ್ವವಿದ್ಯಾಲಯ, ವಿದ್ಯಾ ಸಂಸ್ಥೆಗಳಿವೆ. ಅವರು ಎಲ್ಲ ಧರ್ಮದ ವಿದ್ಯಾರ್ಥಿಗಳಿಗೆ ಬುರ್ಖಾ ಕಡ್ಡಾಯ ಆದೇಶ ಮಾಡಿದರೆ ಒಪ್ಪುತ್ತೀರಾ ಎಂದು ರಾಯರೆಡ್ಡಿ ಪ್ರಶ್ನಿಸಿದರು.

ಹಿಂದೂ ಧರ್ಮದ ವಿದ್ಯಾರ್ಥಿನಿಯರೂ ಅವರ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನಕ್ಕೆ ತೆರಳುವುದರಿಂದ ಬುರ್ಖಾ ಕಡ್ಡಾಯ ಮಾಡಲಾಗದು. ಇಂತಹ ಆದೇಶ ಹೊರಡಿಸುವ ಮುನ್ನ ಸರ್ಕಾರ ವಿವೇಚನೆಯಿಂದ ವರ್ತಿಸಬೇಕಿತ್ತು. ಅದಕ್ಕಾಗಿ, ಸಮವಸ್ತ್ರ ಯಾವುದು ಇರಬೇಕು ಎಂಬುದಕ್ಕೆ ಒಂದು ರಾಷ್ಟ್ರೀಯ ನೀತಿಯನ್ನು ರೂಪಿಸಬೇಕು ಎಂದು ಪ್ರತಿಪಾದಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಮೇಯರ್ ಶರಣಕುಮಾರ ಮೋದಿ, ಡಾ. ಕಿರಣ ದೇಶಮುಖ, ಲಿಂಗರಾಜ ತಾರಫೈಲ್, ಚೇತನಕುಮಾರ್ ಗೋನಾಯಕ ಸೇರಿದಂತೆ ಹಲವು ಮುಖಂಡರು ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.