ADVERTISEMENT

ಕಲಬುರಗಿ | ಮಹಿಳೆ ಸಾವು ಪ್ರಕರಣ: ಅತ್ತೆ, ನಾದಿನಿಯರಿಗೆ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 4:32 IST
Last Updated 29 ಜುಲೈ 2022, 4:32 IST

ಕಲಬುರಗಿ: ಸರಿಯಾಗಿ ಮನೆ ಕೆಲಸ ಮಾಡುತ್ತಿಲ್ಲ ಎಂದು ಮಾನಸಿಕ ಕಿರುಕುಳ ನೀಡುವ ಮೂಲಕ ಮಹಿಳೆಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನ ನೀಡಿದ್ದಕ್ಕಾಗಿ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಹಿಳೆಯ ಅತ್ತೆ ಹಾಗೂ ಮೂವರು ನಾದಿನಿಯರಿಗೆ ಏಳು ವರ್ಷ ಜೈಲು ಶಿಕ್ಷೆ ಹಾಗೂ ₹ 30 ಸಾವಿರ ದಂಡ ವಿಧಿಸಿದೆ.

ಕಲಬುರಗಿ ಗ್ರಾಮೀಣ ಠಾಣೆ ವ್ಯಾಪ್ತಿಯ ಡಬರಾಬಾದ್ ಕ್ರಾಸ್ ಸಮೀಪದ ನಿವಾಸಿ ಮೃತ ತಹಸಿನ್‌ಳ ಅತ್ತೆ ಉಮೇರಾ ಬೇಗಂ, ನಾದಿನಿಯರಾದ ಹೀನಾ ಇಮಾಮೊದ್ದೀನ್, ನಿಲೋಫರ್ ಶಿರಾಜ್ ಪಟೇಲ್, ಸಮ್ರೀನ್ ಅಲಿಯಾಸ್ ಶಮಾ ಸೈಯದ್ ಪಟೇಲ್ ಶಿಕ್ಷೆಗೆ ಗುರಿಯಾದ ಅಪರಾಧಿಗಳು.

ನಿರಂತರವಾಗಿ ತಹಸಿನ್‌ಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ನಾಲ್ವರೂ, ‘ನಿನಗೆ ಸರಿಯಾಗಿ ಅಡುಗೆ ಮಾಡಲು ಬರುವುದಿಲ್ಲ. ಮನೆ ಬಿಟ್ಟು ಹೋಗು’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಬೇಸತ್ತ ತಹಸಿನ್ 2017ರ ಆಗಸ್ಟ್ 12ರಂದು ಮಧ್ಯಾಹ್ನ 3ಕ್ಕೆ ಕೊಠಡಿಯಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡರು. 13ರ ರಾತ್ರಿ 12.30ಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು.

ADVERTISEMENT

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಅಂದಿನ ಗ್ರಾಮೀಣ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್ ಚಂದ್ರಶೇಖರ ತಿಗಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಚಂದ್ರಶೇಖರ ಕರೋಷಿ ಅವರು ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು. ದಂಡದ ಮೊತ್ತದಲ್ಲಿ ₹ 20 ಸಾವಿರವನ್ನು ತಹಸಿನ್ ಮಕ್ಕಳಿಗೆ ನೀಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.

ಸರ್ಕಾರದ ಪರವಾಗಿ ಮೂರನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.