ಕಲಬುರಗಿ: ಬೆಳಿಗ್ಗೆ ಎಂಟು ಗಂಟೆಯಾದರೇ ಸಾಕು ನೆತ್ತಿ ಸುಡುವ ಬಿಸಿಲು, ಸೂರ್ಯನ ಕಿರಣ ಹೊಡೆತ ತಪ್ಪಿಸಿಕೊಳ್ಳಲು ಮುಖಕ್ಕೆ ಬಟ್ಟಿ ಹಾಕಿಕೊಂಡು ಬರುವ ವಿದ್ಯಾರ್ಥಿಗಳು, ಮಧ್ಯಾಹ್ನ ವೇಳೆ ರಸ್ತೆಯಲ್ಲ ಭಣ, ಭಣ, ಮಾರ್ಚ್ ಮೊದಲ ವಾರದಲ್ಲೇ ಎದುರಾಗುತ್ತಿರುವ ನೀರಿನ ಸಮಸ್ಯೆ, ಅಂತರ್ಜಲ ಮಟ್ಟ ಕಡಿಮೆಯಾಗಿ ನೀರಿನ ಲಭ್ಯತೆ ಕಡಿಮೆಯಾಗುತ್ತಿರುವುದು...
ನಗರದಲ್ಲಿ ಈಗ ಕಂಡು ಬರುತ್ತಿರುವ ಸಾಮಾನ್ಯ ದೃಶ್ಯವಾಗಿದೆ. ಋತು ಹಾಗೂ ವಾತಾವರಣ ಬದಲಾವಣೆಯಿಂದಾಗಿ ತಾಪಮಾನ ಏರಿಕೆಯಾಗುತ್ತಿದ್ದು, ಸೋಮವಾರ (ಮಾ.3) 38 ಡಿಗ್ರಿ ಸೆಲ್ಸಿಯಸ್‌ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಪುಟ್ಟ ಮಕ್ಕಳಿಗೆ ತಟ್ಟಿದ ಬಿಸಿ: ಶಕೆ ಹಾಗೂ ಉಷ್ಠಾಶ ಹೆಚ್ಚಳದಿಂದ ಮಕ್ಕಳಿಗೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ. ದಿನವಿಡಿ ಸುಸ್ತು, ಬಿಸಿನೆಗಡಿ, ಕೆಮ್ಮು, ಜ್ವರ, ಆಮಶಂಕೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಚಿಕ್ಕಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ.
ಕುಸಿಯುತ್ತಿರುವ ಅಂತರ್ಜಲ ಮಟ್ಟ: ನಗರದ ಗುಬ್ಬಿ ಕಾಲೊನಿ, ಆದರ್ಶ ನಗರ, ಗಣೇಶ ನಗರ, ಆಳಂದ ನಾಕಾ ಪ್ರದೇಶದ ಬಡಾವಣೆಗಳು, ಪೂಜಾ ಕಾಲೊನಿ, ಸಂತೋಷ ಕಾಲೊನಿ ಸೇರಿ ಇನ್ನೂ ಕೆಲ ಪ್ರದೇಶಗಳಲ್ಲಿ ಬೊರವೆಲ್‌ಗಳಲ್ಲಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮೊದಲು ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿತ್ತು. ಆದರೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಬಡಾವಣೆಗಳ ನಿವಾಸಿಗಳು.
ಹಣ್ಣುಗಳಿಗೆ ಹೆಚ್ಚಿದ ಬೇಡಿಕೆ: ಎಳನೀರು, ಕಲ್ಲಂಗಡಿ, ಕರಬೂಜ, ಸೋಡಾ, ಸೇರಿ ವಿವಿಧ ಪಾನೀಯಗಳ ಮಾರಾಟವೂ ಭರದಿಂದ ಸಾಗಿದೆ. ಬೇಸಿಗೆ ಕಾರಣದಿಂದ ಎಳನೀರು ದರ ಹೆಚ್ಚಳವಾಗಿದೆ. ಹಿಂದಿನ ತಿಂಗಳಲ್ಲಿ ಅವಧಿಯಲ್ಲಿ ಮೊದಲು ₹20ರಿಂದ ₹40ರ ವರೆಗೆ ಮಾರಾಟವಾಗುತ್ತಿದ್ದ ತೆಂಗಿನ ಕಾಯಿಗೆ, ಈಗ ₹40ರಿಂದ ₹60ರವರೆಗೆ ಮಾರಾಟವಾಗುತ್ತಿದೆ. ಮೊದಲು ಕೆಜಿಗೆ ₹20ರಿಂದ ₹30ರವರೆಗೆ ಮಾರಾಟವಾಗುತ್ತಿರುವ ಕಲ್ಲಂಗಡಿ ಬೆಲೆ ₹ 25 ರಿಂದ ₹35ರವರೆಗೆ ಮಾರಾಟವಾಗುತ್ತಿದೆ.
ಜನರಲ್ಲಿ ಆರೋಗ್ಯ ಸಮಸ್ಯೆ: ಹೆಚ್ಚುತ್ತಿರುವ ತಾಪಮಾನದಿಂದ ಆಹಾರ ಸೇವನೆ ಪ್ರಮಾಣ ಕಡಿಮೆಯಾಗಿದ್ದು, ನೀರಿನ ದಾಹ ಹೆಚ್ಚುತ್ತಿದೆ. ವೃದ್ಧರು ಸೇರಿದಂತೆ ಬಿಸಿಲಿನಲ್ಲಿ ತಿರುಗಾಡುವ ಹಲವರಲ್ಲಿ ಹೊಟ್ಟೆ ನೋವು, ತಲೆ ಸಿಡಿತ, ಜ್ವರ, ತಲೆ ಸುತ್ತು, ಚರ್ಮ ತುರಿಕೆ ಹೀಗೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ವೈದ್ಯರೊಬ್ಬರು ತಿಳಿಸಿದರು.
ಎಲೆಕ್ಟ್ರಾನಿಕ್ ವಸ್ತುಗಳಿಗೆ ಬೇಡಿಕೆ: ಎಸಿ, ಏರ್ ಕೂಲರ್‌ಗಳಿಗೆ ಬೇಡಿಕೆ ಹೆಚ್ಚಿದ್ದು, ಎಲೆಕ್ಟ್ರಾನಿಕ್ ಉಪಕರಣ ಮಾರಾಟ ಮಳಿಗೆಗಳಲ್ಲಿ ಜನದಟ್ಟನೆ ಕಂಡು ಬರುತ್ತಿದೆ. ಬಡವರ ಫ್ರಿಡ್ಜ್ ಎಂದೇ ಹೆಸರಾಗಿರುವ ಮಡಿಕೆ ಖರೀದಿಸಲು ಜನ ಹೆಚ್ಚು ಉತ್ಸಾಹ ತೋರುತ್ತಿದ್ದಾರೆ.
ಸೋಮವಾರ ಕಲಬುರಗಿ ಜಿಲ್ಲೆಯಲ್ಲಿ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮಾರ್ಚ್ 20ರಿಂದ 40 ಡಿಗ್ರಿ ಸೆಲ್ಸಿಯಸ್‌ಕ್ಕಿಂತ ಹೆಚ್ಚಾಗುವ ಸಾಧ್ಯತೆ ಇದೆಬಸವರಾಜ ಬಿರಾದಾರ ತಾಂತ್ರಿಕ ಅಧಿಕಾರಿ ಕೃಷಿ ಸಂಶೋಧನಾ ಕೇಂದ್ರ ಬೀದರ್
ಬಿಸಿಲಿನ ಶಾಖ ತಡೆಯಲು ಆರೋಗ್ಯ ಇಲಾಖೆ ಸಲಹೆ
‘ಶಾಖ ಸೆಳೆತವನ್ನು ತಡೆಗಟ್ಟಲು ತಂಪಾದ ಹಾಗೂ ಶುದ್ಧ ನೀರು ಕುಡಿಯಬೇಕು. ಒಆರ್‌ಎಸ್ ಹಾಗೂ ಗುಲ್ಕೋಸ್‌ಅನ್ನು ಬಳಸಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ತಿಳಿಸಿದ್ದಾರೆ.
* ತೀರಾ ತಂಪಾದ ನೀರನ್ನು ಕುಡಿಯಬಾರದು. ಇದರಿಂದ ಅಜೀರ್ಣ ಹಾಗೂ ಸ್ನಾಯು ಸೆಳೆತ ಉಂಟಾಗಬಹುದು. ಚಹಾ ಕಾಫಿ ತಂಪಾದ ಪಾನೀಯಗಳು ಸೋಡಾ ಹಾಗೂ ಕಾರ್ಬೊನೇಟೆಡ್ ಪಾನಿಯಗಳಿಂದ ದೂರವಿರಬೇಕು.
* ಎಳನೀರು ಕಬ್ಬಿನ ಹಾಲು ಮಜ್ಜಿಗೆ ಹಣ್ಣಿನ ರಸದಂತಹ ಪಾನೀಯಗಳನ್ನು ಹೆಚ್ಚಾಗಿ ಸೇವಿಸಬೇಕು.
* ಮನೆಯಲ್ಲಿಯೇ ತಯಾರಿಸಲಾದ ಲಸ್ಸಿ ಅಕ್ಕಿಗಂಜಿ ಬಳಸುವುದು ಉತ್ತಮ.
* ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ರವರೆಗೆ ಹೊರಗಡೆ ದೈಹಿಕ ಕೆಲಸ ಮಾಡುವುದು ತಪ್ಪಿಸಬೇಕು.
* ದೂಳು ಹೊಗೆ ಹಾಗೂ ವಾಯುಮಾಲಿನ್ಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಾಸ್ಕ್ ಬಳಸಿದರೆ ಉತ್ತಮ ಎಂದು ಅವರು ಪ್ರಕಟಣೆಯಲ್ಲಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.