ADVERTISEMENT

ವೈಜ್ಞಾನಿಕ ಪ್ರಕಟಣೆಯಲ್ಲಿ ಭಾರತಕ್ಕೆ 4ನೇ ಸ್ಥಾನ: ಪ್ರೊ. ಆರ್.ಆರ್.ಬಿರಾದಾರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 6:43 IST
Last Updated 10 ಜುಲೈ 2025, 6:43 IST
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಸಂಶೋಧನೆಯ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು 
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಸಂಶೋಧನೆಯ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು    

ಕಲಬುರಗಿ: ‘ವೈಜ್ಞಾನಿಕ ಸಂಶೋಧನೆಗಳ ಪ್ರಕಟಣೆಯಲ್ಲಿ ಭಾರತೀಯರು ನಾಲ್ಕನೇ ಸ್ಥಾನದಲ್ಲಿದ್ದು, ಉಲ್ಲೇಖದಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದೇವೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ ಹೇಳಿದರು.

ಆಳಂದ ತಾಲ್ಲೂಕಿನ ಕಡಗಂಚಿಯ ಸಿಯುಕೆಯಲ್ಲಿ ಆಯೋಜಿಸಿರುವ ‘ಸಮಾಜ ವಿಜ್ಞಾನದಲ್ಲಿ ಯುವ ಅಧ್ಯಾಪಕ ಸದಸ್ಯರಿಗೆ ಸಂಶೋಧನಾ ವಿಧಾನ ಮತ್ತು ಗುಣಮಟ್ಟ ಪ್ರಕಟಣೆ ಕುರಿತು ಸಾಮರ್ಥ್ಯ ವೃದ್ಧಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಒಂದು ರಾಷ್ಟ್ರ, ಒಂದು ಚಂದಾದಾರಿಕೆಯಿಂದಾಗಿ 30,000ಕ್ಕೂ ಹೆಚ್ಚು ಪ್ರಕಾಶಕರನ್ನು ಪ್ರವೇಶಿಸಲು ನೆರವಾಗಿದೆ. 13,000 ಜರ್ನಲ್‌ಗಳಿಗೆ ಉಚಿತವಾಗಿ ಪ್ರವೇಶಿಸಬಹುದು. ಕಾರ್ಯಸಾಧ್ಯತೆ, ನಾವೀನ್ಯತೆ, ನೈತಿಕ ಮತ್ತು ಸಮಾಜಕ್ಕೆ ಪ್ರಸ್ತುತತೆಯೊಂದಿಗೆ ಸಂಶೋಧನೆಯನ್ನು ಗಂಭೀರವಾಗಿ ಪರಿಗಣಿಸುವ ಸಮಯ ಇದು’ ಎಂದರು.

ADVERTISEMENT

‘ಸಂಶೋಧನೆಯ ಗುಣಮಟ್ಟವು ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುತ್ತದೆ. ಈ ಕಾರ್ಯಕ್ರಮವು ಸಂಶೋಧನೆ ಮತ್ತು ಸಮಾಜವನ್ನು ದೊಡ್ಡ ಪ್ರಮಾಣದಲ್ಲಿ ಸಂಪರ್ಕಿಸುತ್ತದೆ’ ಎಂದು ಶಿಕ್ಷಣ ಇಲಾಖೆಯ ಕಾರ್ಯಕ್ರಮ ನಿರ್ದೇಶಕ ಪ್ರೊ.ಜಿ.ಆರ್ ಅಂಗಡಿ ಹೇಳಿದರು.

‘ರಾಷ್ಟ್ರ ನಿರ್ಮಾಣದಲ್ಲಿ ಸಂಶೋಧನೆ ಮತ್ತು ಯುವ ಅಧ್ಯಾಪಕರು ಜ್ಞಾನಕ್ಕೆ ಕೊಡುಗೆ ನೀಡುವಂತೆ ಪ್ರೋತ್ಸಾಹಿಸುವುದು ಇಂದಿನ ಅಗತ್ಯವಾಗಿದೆ. ಇದು ಕಠಿಣ ಸಂಶೋಧನಾ ಅಭ್ಯಾಸಗಳನ್ನು ಸೃಷ್ಟಿಸುತ್ತದೆ’ ಎಂದು ಧಾರವಾಡದ ಬಹುಶಿಸ್ತೀಯ ಅಭಿವೃದ್ಧಿ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ಬಸವಪ್ರಭು ಜಿರ್ಲಿ ತಿಳಿಸಿದರು. 

ಜುಲೈ 18ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.