ADVERTISEMENT

ಕಲಬುರಗಿ | ‘ಭಾರತದ ಜೊತೆಗೆ ಅಮೆರಿಕ ವ್ಯಾಪಾರ ಯುದ್ಧ’: ಪ್ರೊ. ಕೈಲಾಸ್ ಥಾವರೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 7:12 IST
Last Updated 9 ಆಗಸ್ಟ್ 2025, 7:12 IST
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುಣೆಯ ಪ್ರೊ. ಕೈಲಾಸ್ ಥಾವರೆ ವಿಶೇಷ ಉಪನ್ಯಾಸ ನೀಡಿದರು
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುಣೆಯ ಪ್ರೊ. ಕೈಲಾಸ್ ಥಾವರೆ ವಿಶೇಷ ಉಪನ್ಯಾಸ ನೀಡಿದರು   

ಕಲಬುರಗಿ: ‘ಸುಂಕ ಹೆಚ್ಚಳವು ಭಾರತದ ರಫ್ತು, ಆಭರಣಗಳ ಮಾರುಕಟ್ಟೆ, ಷೇರು ಮಾರುಕಟ್ಟೆ ಮತ್ತು ಭಾರತದ ವಿದೇಶಿ ವಿನಿಮಯ ಮಾರುಕಟ್ಟೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲಿದೆ. ಅಮೆರಿಕ ಜೊತೆಗಿನ ಈ ವ್ಯಾಪಾರ ಯುದ್ಧದಿಂದ ಭಾರತವು ಸುಮಾರು 64 ಬಿಲಿಯನ್ ಡಾಲರ್‌ಗಳಷ್ಟು ಸಂಪತ್ತನ್ನು ಕಳೆದುಕೊಳ್ಳುವ ನಿರೀಕ್ಷೆಯಿದೆ’ ಎಂದು ಪುಣೆಯ ಗೋಖಲೆ ಇನ್‍ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಅಂಡ್ ಎಕನಾಮಿಕ್ಸ್‌ನ ಪ್ರೊ. ಕೈಲಾಸ್ ಥಾವರೆ ಹೇಳಿದರು.

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಯೋಜನಾ ವಿಭಾಗದಲ್ಲಿ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ವ್ಯಾಪಾರ ಯುದ್ಧ: ಏಕಾಂಗಿಯಾಗಿಸುವಿಕೆಯೋ ಅಥವಾ ಬಹುಪಕ್ಷೀಯತೆಯೋ?’ ವಿಷಯದ ಕುರಿತು ಅವರು ಮಾತನಾಡಿದರು.

‘ಭಾರತದ ರಫ್ತುಗಳ ಮೇಲಿನ ಸುಂಕ ಹೆಚ್ಚಳದ ಕುರಿತು ಭಾರತ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಪ್ರಸ್ತುತ ವ್ಯಾಪಾರ ಯುದ್ಧಕ್ಕೆ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದು ಕಾರಣ. ಚೀನಾದಲ್ಲಿ ಹೆಚ್ಚಿನ ಹೂಡಿಕೆದಾರರು ಅಮೆರಿಕನ್ನರಾಗಿರುವುದರಿಂದ ಚೀನಾಕ್ಕೆ ಕಡಿಮೆ ಸುಂಕ ವಿಧಿಸಲಾಗುತ್ತಿದೆ’ ಎಂದರು.

ADVERTISEMENT

‘ವಿದೇಶಿ ಹೂಡಿಕೆ ಉದ್ಯಮಗಳು ಚೀನಾದ ರಫ್ತಿನ ಶೇ 45ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ ಮತ್ತು ಇವುಗಳಲ್ಲಿ ಹಲವು ಅಮೆರಿಕ ಸಂಯೋಜಿತವಾಗಿವೆ. ಅಮೆರಿಕ ಕಂಪನಿಗಳು ಚೀನಾದಲ್ಲಿ ವ್ಯಾಪಕವಾದ ಪೂರೈಕೆ ಸರಪಳಿಗಳನ್ನು ಹೊಂದಿವೆ. ಅಂದರೆ ಚೀನಾದ ಸರಕುಗಳ ಮೇಲಿನ ಸುಂಕ ಹೆಚ್ಚಾದರೆ ಅವುಗಳ ವೆಚ್ಚ ಹೆಚ್ಚಾಗಿ ಆ ಮೂಲಕ ಪರೋಕ್ಷವಾಗಿ ಅಮೆರಿಕದ ಕಂಪನಿಗಳಿಗೆ ಹಾನಿ ಮಾಡುತ್ತವೆ. ಆದ್ದರಿಂದ ಅಮೆರಿಕಾ ಚೀನಾದ ವಸ್ತುಗಳ ಮೇಲೆ ಭಾರತಕ್ಕಿಂತ ಕಡಿಮೆ ಸುಂಕ ವಿಧಿಸುತ್ತಿದೆ. ಇದು ಒಂದು ರೀತಿಯ ಆರ್ಥಿಕ ಯುದ್ಧವಾಗಿದೆ. ಬಹುಪಕ್ಷೀಯ ಜಗತ್ತಿನಲ್ಲಿ ಕೆಲ ದೇಶಗಳನ್ನು ಏಕಾಂಗಿಯಾಗಿಸುವ ತಂತ್ರ ಇದಾಗಿದೆ’ ಎಂದರು.

ಸಿಯುಕೆಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಮಾ ಸ್ಕೇರಿಯಾ, ಎಸ್.ಲಿಂಗಮೂರ್ತಿ, ಬಸವರಾಜ್ ಎಂ.ಎಸ್., ಮಲ್ಲೇಶ್, ಸಂಶೋಧನಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.