
‘ಸಾಮಾಜಿಕ ನ್ಯಾಯ, ಮೀಸಲಾತಿ ಮತ್ತು ಶೋಷಿತರ ಹಕ್ಕು’ ಕುರಿತ ದುಂಡು ಮೇಜಿನ ಸಂವಾದದಲ್ಲಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಶರಣಪ್ಪ ಎಸ್.ಡಿ., ಕಲಬುರಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ಪ್ರಜಾವಾಣಿ ಉಪಸಂಪಾದಕ ಪ್ರಭು ಬ. ಅಡವಿಹಾಳ, ನಿವೃತ್ತ ಪ್ರಾಚಾರ್ಯ ಪ್ರೊ.ನರೇಂದ್ರ ಬಡಶೇಷಿ ಪಾಲ್ಗೊಂಡಿದ್ದರು.
–ಪ್ರಜಾವಾಣಿ ಚಿತ್ರ
ಕಲಬುರಗಿ: ‘ಭಾರತದ ಸಂವಿಧಾನ ಬರೀ ಕಾನೂನು ಗ್ರಂಥವಲ್ಲ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾರ್ಯವ್ಯಾಪ್ತಿಗಳನ್ನಷ್ಟೇ ಹೇಳಲ್ಲ. ನಿತ್ಯದ ಕ್ರಮಕ್ಕಾಗಿ ಶ್ರೀಸಾಮಾನ್ಯರಿಗಾಗಿ ಮಾಡಿದ ಸರ್ವೋಚ್ಚ ಕಾನೂನು. ಸಂವಿಧಾನ ದೇಶದ ಆಡಳಿತದ ಬೆನ್ನೆಲುಬು. ಶರೀರಕ್ಕೆ ತಟ್ಟಿದ ರೋಗ ವೈದ್ಯ ಗುಣಪಡಿಸುವಂತೆ ಸಮಾಜಕ್ಕೆ ಅಂಟಿದ ರೋಗಗಳಿಗೆ ಪರಿಹಾರ ಹುಡುಕುವುದು ಸಂವಿಧಾನದ ಆಶಯ...’
‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಸಮೂಹವು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಆಯೋಜಿಸಿದ್ದ ‘ಸಂವಿಧಾನವೇ ಬೆಳಕು’ ದುಂಡು ಮೇಜಿನ ಸಂವಾದದಲ್ಲಿ ‘ಸಂವಿಧಾನ’ದ ಕುರಿತು ಗಣ್ಯರು ಬಿಚ್ಚಿಟ್ಟ ಅಪರೂಪದ ಹೊಳಹುಗಳಿವು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ, ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ನಿವೃತ್ತ ಪ್ರಾಚಾರ್ಯ ನರೇಂದ್ರ ಬಡಶೇಷಿ ಹಾಗೂ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಅಪ್ಪಗೆರೆ ಸೋಮಶೇಖರ ಅವರು ಸಂವಿಧಾನದಡಿ ದೇಶದ ಜನರಿಗೆ ಸಂದಿರುವ ‘ಮೀಸಲಾತಿ’, ‘ಸಾಮಾಜಿಕ ನ್ಯಾಯ’ ಹಾಗೂ ‘ಶೋಷಿತರ ಹಕ್ಕು’ಗಳ ಬಗೆಗೆ ಅರ್ಥಪೂರ್ಣ ಅಭಿಪ್ರಾಯಗಳನ್ನು ಮಂಡಿಸಿದರು.
‘1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂತು. ಅಂದಿನಿಂದ ಇಂದಿನವರೆಗೆ ಭಾರತವು ಅಗಣಿತ ಪ್ರಗತಿ ಕಂಡಿದೆ. ಕ್ರಾಂತಿಕಾರಿ ಬದಲಾವಣೆಗಳು, ಸುಧಾರಣೆಗಳಿಗೆ ಸಾಕ್ಷಿಯಾಗಿದೆ. ಇದೆಲ್ಲಕ್ಕೂ ಸಂವಿಧಾನವೇ ಮೂಲ ಕಾರಣ’ ಎಂದು ಶ್ರೀನಿವಾಸ ನವಲೆ ಪ್ರತಿಪಾದಿಸಿದರು.
‘ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವಿಶಾಲ ಅರ್ಥವಿದೆ. ಭೂಸುಧಾರಣೆ ಕಾಯ್ದೆ, ಕಾರ್ಮಿಕರಿಗೆ ಬೋನಸ್, ಮಹಿಳೆಯರಿಗೆ ಮಾತೃತ್ವ ರಜೆಯಂಥ ಕಾನೂನುಗಳು ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಫಲಗಳು. ಅದರಿಂದ ದೇಶವು ಗಣನೀಯ ಅಭಿವೃದ್ಧಿ ಸಾಧಿಸಿದೆ. ಇನ್ನೂ ಹಲವು ಕ್ಷೇತ್ರಗಳಲ್ಲಿ ಈ ಪರಿಕಲ್ಪನೆ ಅನುಷ್ಠಾನ ಆಗಬೇಕಿದೆ’ ಎಂದರು.
ಶರಣಪ್ಪ ಎಸ್.ಡಿ. ಮಾತನಾಡಿ, ‘ಸಂವಿಧಾನದ ಪೀಠಿಕೆಯೇ ಹೇಳುವಂತೆ ಕಾನೂನಿನಡಿ ಎಲ್ಲರೂ ಸಮಾನರು. ಸಮಾನತೆಯ ಕಾಯ್ದೆಗಳು ಸಂವಿಧಾನದಡಿ ಜನರಿಗೆ ಸಿಕ್ಕ ಅಸ್ತ್ರಗಳು’ ಎಂದು ಬಣ್ಣಿಸಿದರು.
‘ಸಾಮಾಜಿಕ ನ್ಯಾಯವು ಬಡತನ ನಿರ್ಮೂಲನೆ ಕಾನೂನಲ್ಲ. ಅದು ಪ್ರಾತಿನಿಧ್ಯ ಹೇಳುವಂಥದ್ದು. ಸಂವಿಧಾನ ಜಾರಿಗೂ ಮುನ್ನ ಬಹುಸಂಖ್ಯಾತರಿಗೆ ಅಕ್ಷರ ಕಲಿಕೆ, ಅಧಿಕಾರದ ಅವಕಾಶಗಳೇ ಇರಲಿಲ್ಲ. ಆಸ್ತಿ ಹಕ್ಕು ನಿರಾಕರಿಸಲಾಗಿತ್ತು. ಶಿಕ್ಷಣ ಒಂದು ಸಮುದಾಯಕ್ಕೆ ಸೀಮಿತವಾಗಿತ್ತು. ತಳ ಸಮುದಾಯಗಳು ಅಕ್ಷರ ಕಲಿತರೆ ನಾಲಿಗೆ ಕತ್ತರಿಸಬೇಕು. ಕೇಳಿಸಿಕೊಂಡರೆ ಕಿವಿಗೆ ಕಾದಸೀಸ ಹೊಯ್ಯಬೇಕು ಎಂಬಂಥ ಸಾಮಾಜಿಕ ಸ್ಥಿತಿ ದೇಶದಲ್ಲಿತ್ತು. ಡಾ.ಅಂಬೇಡ್ಕರ್ ಈ ಚರಿತ್ರೆಯ ಅರಿವು ಇಟ್ಟುಕೊಂಡೇ ಸಾಮಾಜಿಕ ನ್ಯಾಯ ಸಂವಿಧಾನದಲ್ಲಿ ಅಡಕಗೊಳಿಸಿದರು’ ಎಂದು ಅಪ್ಪಗೆರೆ ಸೋಮಶೇಖರ ಅಭಿಪ್ರಾಯಪಟ್ಟರು.
‘ಶೋಷಣೆ ಬಹುರೂಪಿ. ಅದರಲ್ಲಿ ಮಾನಸಿಕ, ದೈಹಿಕ, ಸಾಮಾಜಿಕ, ಸಾಂಸ್ಥಿಕ ಎಂದೆಲ್ಲ ಹಲವು ಬಗೆ. ಮಹಿಳೆಯರು, ಮಕ್ಕಳು, ಅನಕ್ಷರಸ್ಥರೇ ಹೆಚ್ಚಾಗಿ ಶೋಷಣೆಗೆ ತುತ್ತಾಗುತ್ತಾರೆ. ಹಿಂದೆಲ್ಲ ಶೋಷಿತರು ಹಕ್ಕು ಪಡೆಯಲು ತಾವಾಗಿಯೇ ಮುಂದೆ ಬರಬೇಕಿತ್ತು. ಆದರೆ, ಇಂದು ಸರ್ಕಾರಿ ಸಂಸ್ಥೆಗಳೇ ಶೋಷಿತರ ಬಳಿಗೆ ಹೋಗುತ್ತಿವೆ. ಅವರು ನೋವು ಹೇಳಿದರೆ, ಅವರಿಗೆಲ್ಲ ರಕ್ಷಣೆ ನೀಡಿ, ಹಕ್ಕುಗಳನ್ನು ಕೊಡಿಸಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಶ್ರೀನಿವಾಸ ನವಲೆ.
ನರೇಂದ್ರ ಬಡಶೇಷಿ ಅವರು, ‘ಶೋಷಿತರ ಹಕ್ಕುಗಳು ಸಂವಿಧಾನ ಶೋಷಿತರಿಗೆ ನೀಡಿದ ಧ್ವನಿ. ಪ್ರಶ್ನಿಸಲು ದೊರೆತ ಹಕ್ಕು. ನಮ್ಮ ವಿಚಾರ, ಧ್ವನಿಗೆ ಮಾನ್ಯತೆ ಸಿಗುತ್ತಿದೆ. ಅದು ಸಂವಿಧಾನದ ಶ್ರೇಷ್ಠ ಕೊಡುಗೆ’ ಎಂದು ಬಣ್ಣಿಸುತ್ತಾರೆ.
‘ಸಾಮಾಜಿಕ ಶೋಷಣೆ, ಜಾತಿ ವ್ಯವಸ್ಥೆ ವಿಕಾರ ಸ್ವರೂಪ ಪಡೆದಿದೆ. ಶೋಷಿತರ ಹಕ್ಕುಗಳು ಸಂಪೂರ್ಣ ಕಾರ್ಯಗತಗೊಳ್ಳುತ್ತಿಲ್ಲ. ಎಸ್‌ಸಿಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಸ್ಥಿತಿ ಏನಿದೆ? ಎಷ್ಟು ಪ್ರಕರಣಗಳಲ್ಲಿ ನೊಂದವರಿಗೆ ನ್ಯಾಯ ಸಿಕ್ಕಿದೆ? ಸಂವಿಧಾನದ ಅನುಷ್ಠಾನದಲ್ಲಿ ಎಲ್ಲಿ ಎಡವುತ್ತಿದ್ದೇವೆ ಎಂಬುದರ ಆತ್ಮಾವಲೋಕನ ಅಗತ್ಯ’ ಎಂಬುದು ಅಪ್ಪಗೆರೆ ಸೋಮಶೇಖರ ಅವರ ಇಂಗಿತ.
‘ಶೋಷಿತರಿಗೆ ಸಂವಿಧಾನ ಹಲವು ಬಗೆಯಲ್ಲಿ ದಾರಿದೀಪ. ಒಂದೆಡೆ ಶೋಷಿತರಿಗೆ ಸಂವಿಧಾನವು ಅವರ ಹಕ್ಕುಗಳನ್ನು ಅರ್ಥ ಮಾಡಿಸುತ್ತದೆ. ಮತ್ತೊಂದೆಡೆ ಜೈಲು ಸೇರಿದ ಕೈದಿಗಳಿಗೂ ಸಂವಿಧಾನ ಕೆಲ ಹಕ್ಕುಗಳ ರಕ್ಷಣೆ ನೀಡುತ್ತದೆ’ ಎನ್ನುತ್ತಾರೆ ಕಮಿಷನರ್ ಶರಣಪ್ಪ ಎಸ್.ಡಿ.
‘ದೇಶದಲ್ಲಿ ಮೀಸಲಾತಿಯನ್ನು ಪ್ರಖರವಾಗಿ ಪ್ರತಿಪಾದಿಸಿದ್ದು ಶಾಹು ಮಹಾರಾಜ. ದೇಶದಲ್ಲಿ ಸಾಮಾಜಿಕ ಹಿಂದುಳಿವಿಕೆ ಆರ್ಥಿಕ ಹಿಂದುಳಿವಿಕೆ ಆಧಾರದಲ್ಲಿ ಮೀಸಲಾತಿ (ಇಡಬ್ಲ್ಯುಎಸ್) ಕಲ್ಪಿಸಲಾಗಿದೆ. ಸಮಾನ ಅವಕಾಶಗಳ ಸೃಷ್ಟಿಗೆ ಅದು ಅಗತ್ಯ. ಈಗಿನ ಸುಧಾರಿತ ವ್ಯವಸ್ಥೆಗೆ ಮೀಸಲಾತಿ ಕೊಡುಗೆ ಅಪಾರ’ ಎಂದು ಶ್ರೀನಿವಾಸ ನವಲೆ ಪ್ರತಿಪಾದಿಸಿದರು.
‘ಯುವ ತಲೆಮಾರು ಮೀಸಲಾತಿ ಜಾರಿಯಾದ ಹಿನ್ನೆಲೆಯನ್ನು ಗ್ರಹಿಸುತ್ತಿಲ್ಲ. ಹೀಗಾಗಿ ಮೀಸಲಾತಿ ವ್ಯವಸ್ಥೆ ಟೀಕಿಸುತ್ತಿದೆ. ಕುಟುಂಬದಲ್ಲಿ ಹಿಂದೆಲ್ಲ ಇದ್ದ ಹೆಣ್ಣು–ಗಂಡಿನ ತಾರತಮ್ಯ ಸಮಾಜದಲ್ಲಿನ ಜಾತಿ ವ್ಯವಸ್ಥೆಯ ಕ್ರೂರತೆಯ ಪರಿಚಯ ಅವರಿಗೆ ಮನಮುಟ್ಟುವಂತೆ ಹೇಳಬೇಕಿದೆ’ ಎಂದರು.
‘ಇಂದಿನ ವಿದ್ಯಾರ್ಥಿಗಳೆಲ್ಲ ಜಾತ್ಯತೀತವಾಗಿ ಬೆರೆತರೂ ಜೊತೆಗಿದ್ದವರ ನೋವು ಅವರ ಹೃದಯಕ್ಕೆ ತಾಕುತ್ತಿಲ್ಲ. ಅದು ತಾಕಿದಾಗ ವಿಶಾಲ ಮನೋಭಾವ ಮೂಡಿ ಮೀಸಲಾತಿ ಕುರಿತ ಅಸಮಾಧಾನ ತಿಳಿಯಾಗುತ್ತದೆ’ ಎನ್ನುತ್ತಾರೆ ನರೇಂದ್ರ ಬಡಶೇಷಿ. ‘ಸಮಾನತೆ ಸಾಧಿಸಲು ಮೀಸಲಾತಿಯೇ ಮೆಟ್ಟಲು. ದೇಶದಲ್ಲಿ ಪುರುಷ ಪ್ರಧಾನ ಸಮಾಜ ಕಾಣುತ್ತೇವೆ. ದೇಶದ ಶೇ49ರಷ್ಟು ಪ್ರಮಾಣದಲ್ಲಿರುವ ಮಹಿಳೆಯರಿಗೆ ಮೀಸಲಾತಿ ಅತ್ಯಗತ್ಯ’ ಎಂಬುದು ಶರಣಪ್ಪ ಎಸ್.ಡಿ. ಅವರ ಅಭಿಮತ.
‘ಸಂವಿಧಾನ ಜಾರಿಯಾಗಿ 75 ವರ್ಷಗಳಾದರೂ ಇಂದಿಗೂ ಮೀಸಲಾತಿ ದಲಿತರಿಗಷ್ಟೇ ಮಾತ್ರ ಮೂಢನಂಬಿಕೆ ದೇಶದಲ್ಲಿದೆ. ಭಾರತ ಹಿಂದೆಲ್ಲ ಅನಕ್ಷರತೆಯಿಂದ ಶತಮಾನಗಳ ಕಾಲ ಬಳಲಿತ್ತು. ಇದೀಗ ಸ್ವಾತಂತ್ರ್ಯ ನಂತರ ಸಂವಿಧಾನದ ಅನಕ್ಷರತೆಯಿಂದ ಬಳಲುತ್ತಿದೆ. ಈಗ ಎಲ್ಲ ಶೈಕ್ಷಣಿಕ ರಂಗದಲ್ಲೂ ಸಂವಿಧಾನವನ್ನು ಕಡ್ಡಾಯವಾಗಿ ಪಠ್ಯ ಮಾಡಬೇಕಿತ್ತು. ಆಗ ಸಂವಿಧಾನದ ಬಗೆಗೆ ಅಂಬೇಡ್ಕರ್ ಬಗೆಗೆ ಕಪೋಲಕಲ್ಪಿತ ಭಾವನೆಗಳು ನಿವಾರಣೆ ಆಗುತ್ತಿತ್ತು’ ಎಂದು ಅಪ್ಪಗೆರೆ ಸೋಮಶೇಖರ ಪ್ರತಿಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.