ADVERTISEMENT

ಕಲ್ಯಾಣ ಕರ್ನಾಟಕದ ವಿವಿಧೆಡೆ ಕೈಗಾರಿಕಾ ಕ್ಲಸ್ಟರ್: ಸಚಿವ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 8:47 IST
Last Updated 7 ಜುಲೈ 2021, 8:47 IST
 ಕೈಗಾರಿಕಾ ಸಚಿವ ಜಗದೀಶ‌ ಶೆಟ್ಟರ್
ಕೈಗಾರಿಕಾ ಸಚಿವ ಜಗದೀಶ‌ ಶೆಟ್ಟರ್    

ಕಲಬುರ್ಗಿ: ಕಲ್ಯಾಣ ‌ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಆರಂಭಿಸಿ ಕೈಗಾರಿಕೋದ್ಯಮಿಗಳನ್ನು ಆಹ್ವಾನಿಸಲಾಗುವುದು ಎಂದು ಕೈಗಾರಿಕಾ ಸಚಿವ ಜಗದೀಶ‌ ಶೆಟ್ಟರ್ ತಿಳಿಸಿದರು.

ನಗರದ ಐವಾನ್ ಇ ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಸುತ್ತಮುತ್ತ ಈಗಾಗಲೇ ಹಲವು ಕೈಗಾರಿಕೆಗಳಿವೆ. ಇನ್ನು ಮುಂದೆ ಬರುವ ಕೈಗಾರಿಕೆಗಳನ್ನು ಟಯರ್-2, ಟಯರ್-3 ನಗರಗಳಲ್ಲಿ ಆರಂಭಿಸಲು ಕೈಗಾರಿಕಾ ‌ನೀತಿಯಲ್ಲಿ ಪ್ರಸ್ತಾಪಿಸಲಾಗಿದೆ. ಕಲಬುರ್ಗಿಯಲ್ಲಿ ವಿಮಾನ ನಿಲ್ದಾಣ ‌ಆರಂಭವಾಗಿರುವುದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳು ಇತ್ತ ಬರಲಿವೆ ಎಂದು ಆಶಿಸಿದರು‌.

ಕೊಪ್ಪಳದಲ್ಲಿ ಬೊಂಬೆ ತಯಾರಿಕಾ ಘಟಕಕ್ಕೆ ಚಾಲನೆ ನೀಡಲಾಗಿದೆ. ಈ ಜಿಲ್ಲೆಯೊಂದರಲ್ಲೇ ₹ 5 ಸಾವಿರದಿಂದ ₹ 7 ಸಾವಿರ ಕೋಟಿ ಹೂಡಿಕೆಯಾಗಲಿದ್ದು, 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ADVERTISEMENT

ಯಾದಗಿರಿ ಜಿಲ್ಲೆಯ ಕಡೇಚೂರಿನಲ್ಲಿ 3 ಸಾವಿರ ಎಕರೆ ಕೈಗಾರಿಕಾ ಪ್ರದೇಶವಿದ್ದು, ಅಲ್ಲಿ ಔಷಧಿ ತಯಾರಿಕಾ ಘಟಕಗಳ ಆರಂಭಕ್ಕೆ 1 ಸಾವಿರ ಎಕರೆ ಭೂಮಿಯನ್ನು ಬಳಸಿಕೊಳ್ಳಲಾಗುವುದು. ಔಷಧ ತಯಾರಿಕಾ ಘಟಕದ ಬಗ್ಗೆ ಚರ್ಚಿಸಲು ಶೀಘ್ರ ದೆಹಲಿಗೆ ತೆರಳಿ ಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಭೇಟಿ ಮಾಡಲಿದ್ದೇನೆ ಎಂದು ಶೆಟ್ಟರ್ ಹೇಳಿದರು.

ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಒಟ್ಟು 62 ಕೈಗಾರಿಕೆಗಳಿಗೆ ಅನುಮೋದನೆ ನೀಡಿದ್ದು, ₹ 2531 ಕೋಟಿ ಮೊತ್ತದ ಹೂಡಿಕೆಯಾಗಲಿದೆ ಎಂದರು.

ಕೊರೊನಾದಿಂದ ಸಂಕಷ್ಟಕ್ಕೀಡಾದ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ ನೀಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ₹ 3 ಲಕ್ಷ ಕೋಟಿ ಪ್ಯಾಕೇಜ್ ಪ್ರಕಟಿಸಿದ್ದಾರೆ. ಸಾಲದ ಕಂತನ್ನು ಮುಂದಕ್ಕೆ ಹಾಕಿದ್ದಾರೆ. ರಾಜ್ಯ ಸರ್ಕಾರವೂ ಇದಕ್ಕೆ ಪೂರಕವಾಗಿ ಸಣ್ಣ, ಸೂಕ್ಷ್ಮ, ಮಧ್ಯಮ ‌ಕೈಗಾರಿಕೆಗಳ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಿದೆ ಎಂದು ವಿವರಿಸಿದರು.

ನಾಯಕತ್ವ ಬದಲಾವಣೆ ಹೇಳಿಕೆ ‌ಸರಿಯಲ್ಲ:

ರಾಜ್ಯದಲ್ಲಿ ಮುಖ್ಯಮಂತ್ರಿ ‌ಕುರ್ಚಿ ಖಾಲಿ ‌ಇಲ್ಲ. ಈ ಬಗ್ಗೆ ನಮ್ಮ ಪಕ್ಷದ ಶಾಸಕರು ವಿಭಿನ್ನ ಹೇಳಿಕೆ ನೀಡುವುದರಿಂದ ದೈನಂದಿನ ಆಡಳಿತದ ಮೇಲೆ ಪರಿಣಾಮ ‌ಬೀರಲಿದೆ ಎಂದು ಶೆಟ್ಟರ್ ಆತಂಕ ವ್ಯಕ್ತಪಡಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.