ADVERTISEMENT

ಕೊರೊನಾ ಸೋಂಕಿತರು ದುಪ್ಪಟ್ಟಾಗುವ ಸಾಧ್ಯತೆ: ಸಂಸದ ಡಾ.ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2020, 13:07 IST
Last Updated 3 ಆಗಸ್ಟ್ 2020, 13:07 IST
ಡಾ.ಉಮೇಶ ಜಾಧವ
ಡಾ.ಉಮೇಶ ಜಾಧವ   

ಕಲಬುರ್ಗಿ: ‘ಆಗಸ್ಟ್‌ ಕೊನೆಯ ವಾರ ಅಥವಾ ಸೆಪ್ಟೆಂಬರ್‌ನಲ್ಲಿ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ಈಗಿರುವುದಕ್ಕಿಂತ ದುಪ್ಪಟ್ಟು ಹೆಚ್ಚುವ ಸಾಧ್ಯತೆ ಇದೆ. ಕಾರಣ, ಜಿಲ್ಲೆಯ ಜನರು ನಿರ್ದಿಷ್ಟ ಅಂತರ, ಮಾಸ್ಕ್‌, ಸ್ಯಾನಿಟೈಸರ್‌ ಎಂಬ ಮೂರು ಸುರಕ್ಷತಾ ಕ್ರಮಗಳನ್ನು ಚಾಚೂತಪ್ಪದೇ ಅನುಸರಿಸಬೇಕು’ ಎಂದು ಸಂಸದ ಡಾ.ಉಮೇಶ ಜಾಧವ ಎಚ್ಚರಿಸಿದರು.

‘ಈಗಾಗಲೇ ಹಿಡಿತಕ್ಕೆ ಸಿಗದಷ್ಟು ಪ್ರಕರಣಗಳು ದಿನವೂ ಬರುತ್ತಿವೆ. ಇಂಥ ಕಠಿಣ ಸಂದರ್ಭದಲ್ಲೂ ನಮ್ಮ ವೈದ್ಯರು ಜೀವದ ಹಂಗು ತೊರೆದು ಹೋರಾಡುತ್ತಿದ್ದಾರೆ. ಯಾರ ಮೇಲೂ ಆರೋಪ ಹೊರಿಸುವುದು ಸರಿಯಲ್ಲ. ಜನರಿಂದ ಹೆಚ್ಚಿನ ಸಹಕಾರ ನಿರೀಕ್ಷಿತ’ ಎಂದು ಅವರು ಸೋಮವಾರ ಮಧ್ಯಮದವರ ಮುಂದೆ ಹೇಳಿದರು.

‘ಮುಂದಿನ ದಿನಗಳಲ್ಲಿ ಖಾಸಗಿ ವೈದ್ಯರನ್ನೂ ಕರೆದು ಚರ್ಚಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಕೋವಿಡ್‌ ನಿಯಂತ್ರಣಕ್ಕೆ ಅವರನ್ನೂ ತೊಡಗಿಸಿಕೊಳ್ಳಲಾಗುವುದು. ಈ ಪ್ರಯತ್ನ ನಡೆದೇ ಇದೆ. ಸೋಂಕಿತರನ್ನು ಬೇಗ ಪತ್ತೆ ಮಾಡಲು ಇಎಸ್‌ಐಸಿ, ಬಸವೇಶ್ವರ ಆಸ್ಪತ್ರೆ ಹಾಗೂ ಕೆಬಿಎನ್‌ಗಳಲ್ಲಿ ಶೀಘ್ರವೇ ಲ್ಯಾಬ್‌ಗಳು ಕೆಲಸ ಆರಂಭಿಸಲಿವೆ’ ಎಂದೂ ಅವರು ಪುನರುಚ್ಚರಿಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸುವ ಮೂಲಕ ಹೊರ ಇತಿಹಾಸ ಬರೆದಿದ್ದಾರೆ. ಈ ಮಂದಿರ ವಿಚಾರವಾಗಿ ಹಲವು ದಶಕಗಳಿಂದ ಭಯದ ವಾತಾವರಣ ಇದ್ದೇ ಇತ್ತು. ಈಗ ಎಲ್ಲವೂ ಸರಳವಾಗಿ ಮುಗಿದಿದೆ. ರಾಮ ಮಂದಿರ ನಿರ್ಮಾಣದಿಂದ ಜಿಲ್ಲೆಯ ಜನರಲ್ಲೂ ಸಂಭ್ರಮ ಕಂಡುಬರುತ್ತಿದೆ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.